ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ವಿಜಯಪುರ (ಫೆ.05): ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ವಿಜಯಪುರದಲ್ಲಿ ಶನಿವಾರ ಆರಂಭವಾದ 2 ದಿನಗಳ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪತ್ರಕರ್ತರನ್ನು ಮೇಲ್ಮನೆಗೆ ನಾಮಕರಣ ಮಾಡುವ ಬೇಡಿಕೆಯನ್ನು ನಗುತ್ತಲೇ ಸ್ಪಂದಿಸಿ, ನಮ್ಮಲ್ಲಿಯೇ ಪೈಪೋಟಿ ಅಧಿಕವಾಗಿದೆ.
ಎಲ್ಲ ರಂಗದಲ್ಲಿರುವ ಮುಖಂಡರು ಬಂದು ನಿಲ್ಲುತ್ತಾರೆ. ಪತ್ರಕರ್ತರು ಮೇಲ್ಮನೆಯಲ್ಲಿ ಸದಸ್ಯರಾಗಬೇಕು ಎಂಬ ಭಾವನೆ ನನಗೂ ಇದೆ. ಆದರೆ, ಈ ಬಗ್ಗೆ ಸಾಧ್ಯಸಾಧ್ಯತೆ ಪರಿಶೀಲನೆ ಮಾಡಬೇಕಿದೆ. ಪತ್ರಕರ್ತರು ಕಾರ್ಮಿಕರಲ್ಲ ಎಂಬುದು ನನ್ನ ಭಾವನೆ. ಹೀಗಾಗಿ, ಪತ್ರಕರ್ತರನ್ನು ಕಾರ್ಮಿಕರ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ಸಂಘ ಇಟ್ಟಬೇಡಿಕೆಯನ್ನು ಇನ್ನೊಮ್ಮೆ ಪರಿಶೀಲಿಸಲಾಗುವುದು. ಸಿಎ ಸೈಟ್ ಹಂಚಿಕೆ ಸಮಯದಲ್ಲಿ ಪತ್ರಕರ್ತರಿಗೂ ನಿವೇಶನಗಳನ್ನು ಮೀಸಲಿರಿಸುವ ನಿಟ್ಟಿನಲ್ಲಿ ಸರ್ಕಾರ ಶೀಘ್ರ ನಿರ್ಧಾರ ಕೈಗೊಳ್ಳಲಿದೆ ಎಂದರು. ಜಿಲ್ಲೆಯಲ್ಲಿರುವ ಪತ್ರಿಕಾ ಭವನಗಳ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಕಾನಿಪ ಸಂಘಕ್ಕೆ ವಹಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಈ ನಿರ್ವಹಣೆ ಸಂಘದಿಂದ ಸಾಧ್ಯವೇ ಎಂಬುದನ್ನು ಸಂಘವೂ ಇನ್ನೊಮ್ಮೆ ಪುನರ್ ಪರಿಶೀಲನೆ ನಡೆಸುವುದು ಅಗತ್ಯವಿದೆ ಎಂದರು.
ಕ್ರಿಕೆಟಿಗ ಧೋನಿ ಶಾಲೆ ಸೇರಿ 500+ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ನೋಟಿಸ್
ಗಂಡ-ಹೆಂಡತಿ ಸಂಬಂಧ: ರಾಜಕಾರಣಿ ಹಾಗೂ ಪತ್ರಕರ್ತರ ನಡುವೆ ಅವಿನಾಭಾವ ಸಂಬಂಧವಿದೆ. ಒಂದು ರೀತಿಯಲ್ಲಿ ಗಂಡ-ಹೆಂಡತಿಯರ ಸಂಬಂಧದಂತೆ. ಆದರೆ, ಈ ಸಂಬಂಧ ಪ್ರಾಮಾಣಿಕವಾಗಿರಬೇಕು. ಈ ಗಡಿಯನ್ನು ಇಬ್ಬರೂ ದಾಟಬಾರದು. ಈ ಗಡಿದಾಟದ ಆರೋಗ್ಯಕರ ಸಂಬಂಧವಿದ್ದರೆ ಇಡೀ ರಾಜ್ಯಕ್ಕೆ ಶ್ರೇಯಸ್ಸು ಎಂದರು. ರಾಜಕಾರಣಿಗಳು ಹಾಗೂ ಪತ್ರಕರ್ತರು ಒಬ್ಬರನ್ನು ಬಿಟ್ಟು ಇನ್ನೊಬ್ಬರಿಲ್ಲ. ಪತ್ರಕರ್ತರು ಇರದಿದ್ದರೆ ರಾಜಕಾರಣಿಗಳನ್ನು ಮಾತನಾಡಿಸುವವರು ಯಾರೂ ಇರುತ್ತಿರಲಿಲ್ಲ. ಇನ್ನೊಂದೆಡೆ ರಾಜಕಾರಣಿಗಳು ಇರದೇ ಇದ್ದರೆ ಪತ್ರಿಕೆಗಳನ್ನು ಯಾರು ಓದಬೇಕು, ರಾಜಕಾರಣ ಸುದ್ದಿಯಿಂದಲೇ ಪ್ರಥಮ ಪುಟ ರಾರಾಜಿಸುತ್ತದೆ. ಹೀಗಾಗಿ ನಮ್ಮದು ಅವಿನಾಭಾವ ಸಂಬಂಧ, ನಾವು ಜಗಳವಾಡಬಹುದು, ಒಂದು ರೀತಿ ಗಂಡ-ಹೆಂಡತಿಯ ಸಂಬಂಧದಂತೆ ಎಂದರು.
ಉತ್ತರ, ದಕ್ಷಿಣ ಎಂಬ ಭೇದ ಪತ್ರಕರ್ತರಲ್ಲಿ ಇರಬಾರದು. ಈ ಬೇಧದಿಂದ ಯಾವ ಪ್ರಯೋಜನವೂ ಇಲ್ಲ. ಪತ್ರಕರ್ತರು ಅಖಂಡ ಕರ್ನಾಟಕದ ಬಗ್ಗೆ ಚಿಂತನೆ ನಡೆಸಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ. ಓದುಗನೇ ಪತ್ರಕರ್ತನಾಗಿರುವ ಈಗಿನ ಕಾಲಘಟ್ಟದಲ್ಲಿ ಪತ್ರಕರ್ತರು ವಿಶ್ವಾಸಾರ್ಹತೆ ಹಾಗೂ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದರು. ನನಗೆ ರಾಜ್ಯದ ದೊರೆ ಎನ್ನಬೇಡಿ. ದೊರೆ ಎಂದರೆ ನನಗೆ ಕಸಿವಿಸಿಯಾಗುತ್ತದೆ. ಈಗ ಪ್ರಜಾಪ್ರಭುತ್ವದ ಕಾಲ. ಜನರೇ ಇಲ್ಲಿ ದೊರೆಗಳು. ನಾನಿರುವುದು ಜನರ ಸೇವಕನ ಸ್ಥಾನದಲ್ಲಿ. ಈ ಭಾವನೆ ಇದ್ದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೇಳಿದರು.
BMTCಯಲ್ಲಿನ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಬಯಲು: ಗುಜರಿ ವಸ್ತುಗಳ ಮಾರಾಟದಲ್ಲಿ ಅಕ್ರಮ
ದಾವಣಗೆರೆಯಲ್ಲಿ ಮುಂದಿನ ಸಮ್ಮೇಳನ: 38ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ದಾವಣಗೆರೆಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಸಮ್ಮೇಳನ ಆಯೋಜನೆಗೆ ದಾವಣಗೆರೆ, ಚಿತ್ರದುರ್ಗ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳ ಸಂಘಟಕರು ಉತ್ಸಾಹ ತೋರಿದ್ದರು. ಕೊನೆಗೆ, ದಾವಣಗೆರೆಯಲ್ಲಿ ನಡೆಸಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.