ದುಡಿಯುವ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ಏಪ್ರಿಲ್ 1ರಿಂದ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು (ಫೆ.22): ದುಡಿಯುವ ಹೆಣ್ಣು ಮಕ್ಕಳಿಗೆ, ಶಾಲಾ ವಿದ್ಯಾರ್ಥಿನಿಯರಿಗೆ ಏಪ್ರಿಲ್ 1ರಿಂದ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಂಗಳವಾರ ವಿಧಾನಸೌಧದ ಎದುರು ಕೆಎಸ್‌ಆರ್‌ಟಿಸಿ 50 ವೋಲ್ವೋ ಮಲ್ಟಿಆಕ್ಸೆಲ್ ಬಿಎಸ್ 4-9600 ಸ್ಲೀಪರ್ ಬಸ್‌ಗಳ ಪೈಕಿ 15 ‘ಅಂಬಾರಿ ಉತ್ಸವ’ ಬಸ್‌ಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡುವ ಯೋಜನೆ ರೂಪಿಸಲಾಗಿದೆ.
ಹಾಗೆಯೇ ಪ್ರತಿ ತಾಲೂಕಿನಲ್ಲಿ ಕನಿಷ್ಠ ಐದು ಬಸ್ ಸಂಚಾರ ಆರಂಭ ಮಾಡಬೇಕು. ಅಗತ್ಯಬಿದ್ದರೆ ಇನ್ನಷ್ಟುಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ವೋಲ್ವೋ ಅಂಬಾರಿ ಸ್ಲೀಪರ್‌ನ ವಿಶೇಷ ಬಸ್ ಲೋಕಾರ್ಪಣೆ ಮಾಡಿದ್ದು, ದೂರ ಪ್ರಯಾಣಕ್ಕೆ ಅಗತ್ಯವಿರುವ ರೈಲ್ವೆ ಮಾದರಿಗಿಂತ ಉತ್ತಮವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದೆ ವೋಲ್ವೋ ಬಸ್‌ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ. ಹಿಂದಿನ ಸಮಸ್ಯೆಗಳನ್ನು ಅರಿತು ಈ ಬಸ್ ಗಳಲ್ಲಿ ಮಲ್ಟಿಎಕ್ಸೆಲ್ ವ್ಯವಸ್ಥೆ ಕಲ್ಪಿಸಿ, ಉತ್ತಮ ವ್ಯವಸ್ಥೆ ರೂಪಿಸಲಾಗಿದೆ. ಸುಲಭವಾಗಿ, ಸುಖವಾಗಿ ರಾತ್ರಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯ ಸಾರಿಗೆಗೆ ಇನ್ನಷ್ಟು ಬಸ್ಸುಗಳನ್ನು ಪಡೆದುಕೊಳ್ಳುವುದು ಸೂಕ್ತ ಎಂದರು.
ಜೆಪಿ ನಗರ ಡೆಲ್ಮಿಯಾ ಫ್ಲೈಓವರ್ ಬಚಾವ್: ಅದರ ಮೇಲೆಯೇ ಮೆಟ್ರೋ ಮಾರ್ಗ
ಸಾರಿಗೆ ನಿಗಮಗಳು ವಾಣಿಜ್ಯ ಮಾರ್ಗಗಳ ಸಂಚಾರ ಹಾಗೂ ಸೋರಿಕೆ ತಡೆಯುವ ಮೂಲಕ ಆದಾಯ ಹೆಚ್ಚಳಕ್ಕೆ ಪ್ರಯತ್ನ ಪಡಬೇಕು. ಖರೀದಿಯಲ್ಲಿನ ಪಾರದರ್ಶಕತೆ ತರಬೇಕು. ಬಿಡಿ ಭಾಗ, ಆಯಿಲ್, ಟೈಯರ್ ಖರೀದಿಯಲ್ಲಿ ಪಾರದರ್ಶಕತೆ ತಂದು ವೆಚ್ಚವನ್ನು ಕಡಿಮೆ ಮಾಡಬೇಕು. ಸಾರಿಗೆ ಸಂಸ್ಥೆಯನ್ನು ಮತ್ತೊಮ್ಮೆ ಲಾಭದಾಯಕವಾಗಿ ನಡೆಸುವ ಅಭಿಲಾಷೆಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ ಸರ್ಕಾರ ಹಣಕಾಸಿನ ಬೆಂಬಲ ನೀಡಿದ್ದು ಎರಡು ವರ್ಷವೂ ನೌಕರರಿಗೆ ವೇತನ, ಡೀಸೆಲ್ ಬಿಲ್‌ಗೆ ಅನುದಾನ ಒದಗಿಸಿದೆ. ನಷ್ಟದಲ್ಲಿದ್ದ ಸಾರಿಗೆ ನಿಗಮಗಳಿಗೆ 4600 ಕೋಟಿ ರು. ನೀಡಲಾಗಿದೆ. ಇತ್ತೀಚೆಗೆ ಒಂದು ಸಾವಿರ ಕೋಟಿ ರು.ಗಳನ್ನು ನೀಡಲಾಗಿದೆ. ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲು ಸಿದ್ಧವಿದ್ದು, ತೆರಿಗೆ ವಿನಾಯ್ತಿ ನೀಡಲು ಕೂಡ ಸಿದ್ಧವಿದೆ ಎಂದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಶಾಸಕ ಸೋಮಶೇಖರ್‌ರೆಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಜಾತ್ರೆ ನಂತರದ ಸ್ಟಾಕ್ ಕ್ಲಿಯರೆನ್ಸ್ ಬಜೆಟ್: ಎಚ್.ಡಿ.ಕುಮಾರಸ್ವಾಮಿ ಟೀಕೆ
ವೇತನ ಹೆಚ್ಚಳದ ಬಗ್ಗೆ ಸೂಕ್ತ ತೀರ್ಮಾನ: ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹಣಕಾಸಿನ ಇತಿಮಿತಿಯಲ್ಲಿ ನೌಕರರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದರು.