ವಂಚನೆ ಪ್ರಕರಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

Published : Apr 25, 2025, 11:22 AM ISTUpdated : Apr 25, 2025, 11:53 AM IST
ವಂಚನೆ ಪ್ರಕರಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಸಾರಾಂಶ

ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹದ ನಾಲ್ಕು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಂದ (ಡಿಸಿಸಿ) ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಂಪನಿ ಸ್ಥಾಪನೆ ಮತ್ತು ವಿಸ್ತರಣೆಗೆ ಸಾಲ ಪಡೆದು ಮಾಜಿ ಸಚಿವರು ಹಾಗೂ ಅವರ ಆಪ್ತರು ವಂಚಿಸಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಏ.25): ಹೈಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಸಹಕಾರ ಬ್ಯಾಂಕ್‌ಗಳಿಗೆ ₹439.12 ಕೋಟಿ ವಂಚನೆ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಮತ್ತವರ ಇಬ್ಬರು ಆಪ್ತರ ವಿರುದ್ಧ ನ್ಯಾಯಾಲಯಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚಿನ ಪುಟಗಳ ಬೃಹತ್‌ ದೋಷಾರೋಪ ಪಟ್ಟಿಯನ್ನು ಸಿಐಡಿ ಸಲ್ಲಿಸಿದೆ. 

ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ಅದರ ಸಮೂಹದ ನಾಲ್ಕು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಂದ (ಡಿಸಿಸಿ) ಗೋಕಾಕ್ ತಾಲೂಕಿನಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಂಪನಿ ಸ್ಥಾಪನೆ ಮತ್ತು ವಿಸ್ತರಣೆಗೆ ಸಾಲ ಪಡೆದು ಮಾಜಿ ಸಚಿವರು ಹಾಗೂ ಅವರ ಆಪ್ತರು ವಂಚಿಸಿರುವುದು ತನಿಖೆಯಲ್ಲಿ ರುಜುವಾತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಸಿಐಡಿ ಉಲ್ಲೇಖಿಸಿದೆ. ಸಕ್ಕರೆ ಕಂಪನಿಯ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರೂ ಆಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ನಿರ್ದೇಶಕರಾದ ವಸಂತ್.ವಿ.ಪಾಟೀಲ ಹಾಗೂ ಶಂಕರ್.ವಿ.ಪಾವಡೆ ಅವರಿಗೆ ಸಂಕಷ್ಟ ಎದುರಾಗಿದೆ. ತಮ್ಮ ವಿರುದ್ಧದ ವಂಚನೆ ಪ್ರಕರಣವನ್ನು ರದ್ದುಪಡಿಸುವಂತೆ ಹೈಕೋರ್ಟ್‌ಗೆ ಜಾರಕಿಹೊಳಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಸಿಐಡಿಗೆ ದೋಷಾರೋಪ ಪಟ್ಟಿ ಸಲ್ಲಿಕೆಗೆ ಅನುಮತಿ ನೀಡಿತ್ತು.

ಮಲೆ ಮಹದೇಶ್ವರ ಬೆಟ್ಟ ಮದ್ಯಪಾನ ಮುಕ್ತ: ಸಿಎಂ ಸಿದ್ದರಾಮಯ್ಯ

ಏನಿದು ಪ್ರಕರಣ?: ಬ್ಯಾಂಕ್ ವಂಚನೆ ಸಂಬಂಧ 2024ರ ಜನವರಿಯಲ್ಲಿ ವಿ.ವಿ.ಪುರ ಪೊಲೀಸ್ ಠಾಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅವರ ಆಪ್ತರ ವಿರುದ್ಧ ರಾಜ್ಯ ಆಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ರಾಜಣ್ಣ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿತ್ತು. ಈಗ ಡಿಜಿಪಿ ಡಾ। ಎಂ.ಸಲೀಂ ಅವರ ಮಾರ್ಗದರ್ಶನದಲ್ಲಿ ತನಿಖೆ ಪೂರ್ಣಗೊಳಿಸಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

ಆಪೆಕ್ಸ್ ಬ್ಯಾಂಕ್, ನಾಲ್ಕು ಡಿಸಿಸಿ ಬ್ಯಾಂಕ್‌ಗೆ ಮೋಸ?: 2013ರಲ್ಲಿ ತಮ್ಮ ಸ್ವಕ್ಷೇತ್ರ ಗೋಕಾಕ್‌ನಲ್ಲಿ ಸೌಭಾಗ್ಯ ಶುಗರ್ಸ್ ಹೆಸರಿನಲ್ಲಿ ಸಕ್ಕರೆ ಕಂಪನಿ ಆರಂಭ ಹಾಗೂ ವಿಸ್ತರಣೆಗೆ ಸಾಲಕ್ಕೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ಗೆ ಆ ಕಂಪನಿಯ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಅವರ ಆಪ್ತರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬ್ಯಾಂಕ್ ಪುರಸ್ಕರಿಸಿತ್ತು. ಅಂತೆಯೇ ಷರತ್ತಿಗೆ ಅನುಗುಣವಾಗಿ 2013ರ ಜುಲೈ 12ರಿಂದ 2017 ಮಾರ್ಚ್ 3ರ ಅವಧಿಯಲ್ಲಿ ಅಪೆಕ್ಸ್ ಬ್ಯಾಂಕ್ ಹಾಗೂ ವಿಜಯಪುರ, ತುಮಕೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸೇರಿ ನಾಲ್ಕು ಜಿಲ್ಲೆಗಳ ಸಹಕಾರ ಬ್ಯಾಂಕ್‌ಗಳಿಂದ ಹಂತ ಹಂತವಾಗಿ ರಮೇಶ್ ಜಾರಕಿಹೊಳಿ ಅ‍ವರ ಕಂಪನಿಗೆ ₹232.88 ಕೋಟಿ ಸಾಲ ಮಂಜೂರು ಮಾಡಿದ್ದರು. ಆದರೆ ಪೂರ್ವ ಷರತ್ತಿನನ್ವಯ ಅಸಲು ಮತ್ತು ಬಡ್ಡಿಯನ್ನು ಮರು ಪಾವತಿಸದ ಕಾರಣ ಒಟ್ಟು ₹439.7 ಕೋಟಿ ವಂಚನೆಯಾಗಿದೆ ಎಂದು ಅಪೆಕ್ಸ್ ಬ್ಯಾಂಕ್‌ ವ್ಯವಸ್ಥಾಪಕರು ದೂರಿದ್ದರು. ಈ ಆರೋಪಕ್ಕೆ ಪೂರಾವೆಗಳು ಪತ್ತೆಯಾಗಿವೆ ಎಂದು ಸಿಐಡಿ ಹೇಳಿದೆ.

ಸಾಲ ಪಡೆದು ಹುದ್ದೆ ಬಿಟ್ಟಿದ್ದ ಜಾರಕಿಹೊಳಿ: ಸಾಲ ಪಡೆದು ಸಾಲ ಮರುಪಾವತಿ ಆಗುವವರೆಗೂ ಬ್ಯಾಂಕಿನ ಪೂರ್ವಾನುಮತಿಯಿಲ್ಲದೆ ಸೌಭಾಗ್ಯ ಲಕ್ಷ್ಮೀ ಶುಗರ್ಸ್‌ ಕಂಪನಿಯ ಆಡಳಿತ ಮಂಡಳಿ ಬದಲಿಸುವಂತಿಲ್ಲ ಎಂದು ಬ್ಯಾಂಕ್‌ ಷರತ್ತು ವಿಧಿಸಿತ್ತು. ಆದರೆ ಸಾಲ ಪಡೆದ ನಂತರ ಆಡಳಿತ ಮಂಡಳಿಯ ತಮ್ಮ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿರ್ದೇಶಕ ಹುದ್ದೆಗಳಿಗೆ ರಮೇಶ್ ಜಾರಕಿಹೊಳಿ ಮತ್ತು ಅವರ ಇಬ್ಬರು ಆಪ್ತರು ರಾಜೀನಾಮೆ ನೀಡಿದ್ದರು. ತರುವಾಯ ತಮ್ಮಿಂದ ತೆರವಾದ ಸ್ಥಾನಗಳಿಗೆ ಕಂಪನಿಗೆ ಸಂಬಂಧವಿಲ್ಲದವರನ್ನು ಮಾಜಿ ಸಚಿವರು ನೇಮಿಸಿದ್ದರು ಎಂದು ಮೂಲಗಳು ಹೇಳಿವೆ.

ಆರೋಪ ಪಟ್ಟಿ ವಿವರ?: ಈ ವಂಚನೆ ಸಂಬಂಧ 4888 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇದರಲ್ಲಿ ಆರೋಪಿ ರಮೇಶ್ ಜಾರಕಿಹೊಳಿ, ಅವರ ಆಪ್ತರು ಹಾಗೂ ಬ್ಯಾಂಕ್‌ ಅಧಿಕಾರಿಗಳ ಹೇಳಿಕೆಗಳು ಸಹ ಲಗತ್ತಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ವಿಷಕಾರಿ ತ್ಯಾಜ್ಯ ಹಳ್ಳಕ್ಕೆ, ಅಲ್ಲಿಂದ ಭೀಮೆಯೊಡಲಿಗೆ: ಜನ-ಜಲ-ಜೀವನದ ಮೇಲೆ ದುಷ್ಪರಿಣಾಮ

‘ನನಗೆ ಗೊತ್ತಿಲ್ಲದೆ ತಪ್ಪಾಗಿದೆ’: ನನಗೆ ಗೊತ್ತಿಲ್ಲದೆ ತಪ್ಪಾಗಿದೆ. ನಾನು ನಿರ್ದೇಶಕ ಸ್ಥಾನ ತೊರದ ನಂತರ ಸರಿಯಾಗಿ ಆಡಳಿತ ನಿರ್ವಹಣೆ ನಡೆಸಿಲ್ಲ ಎಂದು ವಿಚಾರಣೆ ವೇಳೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌