
ಬೆಂಗಳೂರು (ಏ.25): ಉಗ್ರ ನಮ್ಮ ಟೆಂಟ್ ಬಳಿ ಬಂದಾಗ ನಾನು ಮಗನನ್ನು ಬಚ್ಚಿಟ್ಟೆ. ಮಗು ಸಣ್ಣದಿದೆ ಬಿಟ್ಟುಬಿಡಿ, ಏನೂ ಮಾಡಬೇಡಿ ಎಂದು ಕೈಮುಗಿದು ಬೇಡಿಕೊಂಡೆ. ಭೂಷಣ್‌ಗೆ ಒಂದು ನಿಮಿಷವೂ ಅವಕಾಶ ಕೊಡಲಿಲ್ಲ. ನೇರವಾಗಿ ತಲೆಗೆ ಶೂಟ್ ಮಾಡಿ ಹೊರಟುಹೋದ. ನಾನು ಓಡಿ ಬರುವಾಗ ತಲೆಗೆ ಗುಂಡು ಹೊಡೆದ ಶವಗಳು ಅಲ್ಲಲ್ಲಿ ಬಿದ್ದಿದ್ದು ನೋಡಿದೆ...! ಕಣ್ಣೀರು ಹಾಕುತ್ತಲೇ ಭರತ್‌ಭೂಷಣ್ ಪತ್ನಿ ಡಾ। ಸುಜಾತಾ ಘಟನೆಯ ಭೀಕರತೆ ತೆರೆದಿಟ್ಟಿದ್ದು ಹೀಗೆ. ನಾವು ಏ.18ಕ್ಕೆ ಕಾಶ್ಮೀರಕ್ಕೆ ಹೋಗಿದ್ದೆವು. ಕೊನೆಯ ಎರಡು ದಿನ ನಾವು ಮತ್ತು ಇನ್ನೊಂದು ಕುಟುಂಬದವರು ಜೊತೆಯಾಗಿ ಓಡಾಡುತ್ತಿದ್ದೆವು.
ಪ್ರವಾಸದ ಕೊನೆಯ ದಿನ ಪಹಲ್ಗಾಂ ಬೈಸರನ್ ಹುಲ್ಲುಗಾವಲಿಗೆ ಹೋಗಿದ್ದೆವು. ಮಗುವಿನ ಜೊತೆ ಆಟವಾಡಿಕೊಂಡಿದ್ದೆವು. ಮೈದಾನದಲ್ಲಿ ಇದ್ದ ಟೆಂಟ್‌ನಲ್ಲಿ ಕಾಶ್ಮೀರದ ದಿರಿಸು ಧರಿಸಿ ಫೋಟೋ ತೆಗೆದುಕೊಳ್ಳಬಹುದಿತ್ತು. ಫೋಟೋ ತೆಗೆಸಿಕೊಳ್ಳುತ್ತ ಮಧ್ಯಾಹ್ನ ಆಗಿರಬಹುದು. ಊಟಕ್ಕೆ ಮತ್ತೆ ಕೆಳಗೆ ಹೋಗಬೇಕಿತ್ತು. ಆಗ ಪಟಾಕಿ ರೀತಿಯ ಶಬ್ದ ಕೇಳಿಸಿತು. ಯಾವುದೋ ಪಕ್ಷಿ, ಪ್ರಾಣಿ ಓಡಿಸಲು ಗನ್‌ನಿಂದ ಶೂಟ್ ಮಾಡುತ್ತಿರಬಹುದು ಅಂತ ಅಂದುಕೊಂಡೆವು. ಆದರೆ, ಶಬ್ದ ಜೋರಾಗಿ ಕೇಳಿಸಿದಾಗ ದಾಳಿ ನಡೆಯುತ್ತಿದೆ ಎನ್ನುವುದು ಗೊತ್ತಾಗಿ ನಾನು, ಪತಿ, ಮಗು ಟೆಂಟ್ ಹಿಂಭಾಗದಲ್ಲಿ ಅಡಗಿ ಕೂತೆವು.
ಸುಮಾರು ನೂರು ಅಡಿ ದೂರದಲ್ಲಿ ಉಗ್ರ ಒಬ್ಬರನ್ನು ಮಾತನಾಡಿಸಿ ಶೂಟ್ ಮಾಡಿದ. ಆತ ಬಿದ್ದ ಮೇಲೂ ಮೂರ್ನಾಲ್ಕು ಬಾರಿ ಶೂಟ್ ಮಾಡಿದ. ಹಿಂದಿಯಲ್ಲಿ ಮಾತನಾಡುತ್ತ ನೀವೆಲ್ಲ ಹೇಗೆ ಖುಷಿಯಲ್ಲಿದ್ದೀರಿ. ಅಲ್ಲಿ ನಮ್ಮ ಮಕ್ಕಳು ಸಾಯುತ್ತಿದ್ದಾರೆ. ಇಲ್ಲಿ ನೀವು ಮಕ್ಕಳೊಂದಿಗೆ ಹೇಗೆ ಆಟ ಆಡುತ್ತಿದ್ದೀರಿ ಎಂದು ಪ್ರಶ್ನಿಸಿದ. ಅದಕ್ಕವರು ನಾವು ಯಾವ ರೀತಿ ಸಹಾಯ ಮಾಡಬೇಕು ಎಂದು ಕೇಳಿದರು. ಆದರೆ, ಅವರ ಮಾತು ಕೇಳದೇ ಅವನು ಶೂಟ್ ಮಾಡಿ ನೂಕಿದ. ಕೊನೆಯ ಕ್ಷಣದಲ್ಲಿ ಭೂಷಣ್, ‘ಏನು ಆಗಲ್ಲ, ಡೋಂಟ್ ವರಿ’ ಎಂದು ನಮಗೆ ಧೈರ್ಯ ತುಂಬುತ್ತಿದ್ದರು. ಉಗ್ರ ನಮ್ಮ ಟೆಂಟ್ ಬಳಿ ಬಂದಾಗ ನಾನು ಮಗುವನ್ನು ಬಚ್ಚಿಟ್ಟುಕೊಂಡೆ. ಸಣ್ಣ ಮಗು ಇದೆ ಬಿಟ್ಟುಬಿಡಿ ಅಂತ ಕೈ ಮುಗಿದು ನಮ್ಮನ್ನು ಏನೂ ಮಾಡಬೇಡಿ ಅಂತ ಬೇಡಿದೆ. ಆಗ ಆತ ಒಂದು ನಿಮಿಷವೂ ಅವಕಾಶ ಕೊಡದೆ ಭೂಷಣ್ ಮೇಲೆ ಶೂಟ್ ಮಾಡಿ ಹೋದ.
ಭರತ್ ಮನೆಯಲ್ಲಿ ಮಡುಗಟ್ಟಿದ ಶೋಕ: ಪಹಲ್ಗಾಂ ಉಗ್ರರ ದಾಳಿಗೆ ಜೀವತೆತ್ತ ಭೂಷಣ್
ಉಗ್ರ ಹೋಗುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಲು ಮುಂದಾದರು. ನಾನು ಮೂರು ವರ್ಷದ ಮಗುವನ್ನು ಎತ್ತಿಕೊಂಡು ಓಡಲು ಆರಂಭಿಸಿದೆ. ನಾನೂ ಸತ್ತರೆ ಮಗ ಅನಾಥವಾಗುತ್ತಾನೆ ಅನಿಸಿತು. ಓಡುವ ಮೊದಲು ಭೂಷಣ್ ಕಿಸೆಯಲ್ಲಿದ್ದ ಮೊಬೈಲ್, ಐಡಿ, ಬ್ಯಾಗ್ ತೆಗೆದುಕೊಂಡಿದ್ದೆ. ಹೀಗೆ ಬರುವಾಗ ಅಲ್ಲಲ್ಲಿ ತಲೆಗೆ ಗುಂಡು ಹೊಡೆದಿದ್ದ ಶವಗಳು ಚದುರಿ ಬಿದ್ದಿದ್ದವು. ಕುದುರೆಗಳೂ ಅಲ್ಲಿರಲಿಲ್ಲ, ನಾವು ಸಮೀಪ ಇದ್ದ ಸೇನಾ ಮೆಸ್‌ಗೆ ಬಂದು ಸೇರಿಕೊಂಡೆವು. ಮೊಬೈಲ್ ಬ್ಯಾಟರಿಯೂ ಮುಗಿಯುತ್ತಾ ಬಂದಿತ್ತು. ಅಣ್ಣನಿಗೆ ಕರೆ ಮಾಡಿ ವಿಷಯ ತಿಳಿಸಿದೆ ಎಂದು ಅವರು ಏ.22ರ ಕರಾಳ ಘಟನೆಯನ್ನು ನೆನೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ