ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿಚಾರ್ಜ್‌ಗೆ ಮಾಜಿ ಸಚಿವ ಮುರುಗೇಶ ನಿರಾಣಿ ಸಿದ್ದರಾಮಯ್ಯ ಸರ್ಕಾರವನ್ನು ಹಿಟ್ಲರ್ ಸರ್ಕಾರಕ್ಕೆ ಹೋಲಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋರಾಟಗಾರರ ಮನವೊಲಿಸುವ ಬದಲು ಲಾಠಿಚಾರ್ಜ್ ಮಾಡಿಸಿರುವುದನ್ನು ಖಂಡಿಸಿದ್ದಾರೆ.
ಬಾಗಲಕೋಟೆ (ಡಿ.10): ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿಸಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಹಿಟ್ಲರ್ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿರುವ ವಿಚಾರವಾಗಿ ಇಂದು ಬಾಗಲಕೋಟೆಯಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಮುರುಗೇಶ ನಿರಾಣಿ ಅವರು, ಪಂಚಮಸಾಲಿ ಹೋರಾಟಗಾರರಿಗೆ ಸ್ಪಂದಿಸಬೇಕಿತ್ತು. ಸ್ಥಳಕ್ಕೆ ಬಂದು ಹೋರಾಟಗಾರರಿಗೆ ಸ್ಪಂದಿಸಬೇಕಿತ್ತು. ಆದರೆ ಸ್ಥಳಕ್ಕೂ ಬಂದರೂ ಮನವಿ ಪಡೆಯದೇ ನೆಪಮಾತ್ರಕ್ಕೆ 10 ಜನರನ್ನು ಭೇಟಿಯಾಗಲು ಹೇಳಿ ಹೊರಟರು ಬಳಿಕ ಹೋರಾಟಗಾರರೇ ಬರಲಿಲ್ಲ ಎಂದು ಸಿಎಂ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಪಂಚಮಸಾಲಿ ಹೋರಾಟ ಹತ್ತಿಕ್ಕಲು ಸಿದ್ದು ಸರ್ಕಾರ ಹಿಟ್ಲರ್ ಮಾರ್ಗ ಆಯ್ಕೆ ಮಾಡಿಕೊಂಡಿರೋದು ದುರದೃಷ್ಟಕರ: ಎಚ್‌ಡಿಕೆ
ಈ ಸರ್ಕಾರ ಹಿಟ್ಲರ್ ರೀತಿಯ ವರ್ತನೆಯಿಂದ ಹೋರಾಟಗಾರರ ಸಹನೆಯ ಕಟ್ಟೆ ಒಡೆದಿದೆ. ಆದರೂ ಶಾಂತರೀತಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರು. ಸರ್ಕಾರ ಹೋರಾಟಗಾರರ ಮನವೊಲಿಸುವ ಬದಲು ಅವರ ಮೇಲೆ ಲಾಠಿಚಾರ್ಜ್ ಮಾಡಿಸಿ ಬೆದರಿಸುವ ಮೂಲಕ ಈ ಸರ್ಕಾರ ಹಿಟ್ಲರ್ ಧೋರಣೆ ಅನುಸರಿಸಿದೆ. ಪೊಲೀಸರು ನಡೆಸಿರುವ ಲಾಠಿಚಾರ್ಜ್ ನಲ್ಲಿ ಅಮಾಯಕರ ಕೈಗಳು ಮುರಿದಿವೆ. ತಲೆ ಒಡೆದು ಗಂಭೀರ ಗಾಯಗಳಾಗಿವೆ. ನಮ್ಮ ಬಿಜೆಪಿ ಸರ್ಕಾರವಿದ್ದಾಗ ಎಂದೂ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡಿಲ್ಲ. ಆದರೆ ಈ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಮಾಯಕ ಹೋರಾಟಗಾರರ ಮೇಲೆ ದಬ್ಬಾಳಿಕೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಪಂಚಮಸಾಲಿಗಳು ತಕ್ಕ ಪಾಠ ಕಲಿಸುತ್ತಾರೆ:
ಪಂಚಮಸಾಲಿ ಸಮುದಾಯ ಇದನ್ನು ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಸಿದ್ದರಾಮಯ್ಯ ತಕ್ಷಣ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಉತ್ತರ ನೀಡಬೇಕು. ಪಂಚಮಸಾಲಿ ಸಮುದಾಯ ಕೃಷಿ ಕುಟುಂಬದಿಂದ ಬಂದವರು. ರೈತರೇ ದೇಶಕ್ಕೆ ಅನ್ನ ಹಾಕುವವರು. ಅಂತವರ ಮೇಲೆ ಅಧಿಕಾರ ದರ್ಪದಿಂದ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿಸಲಾಗಿದೆ. ಇನ್ನು ಪಂಚಮಸಾಲಿ ಸಮುದಾಯದ ಸಹನೆಯ ಕಟ್ಟೆ ಒಡೆದಿದೆ. ಮುಂಬರುವ ದಿನಗಳಲ್ಲಿ ಸಮಾಜದ ಜನ ಬಡ್ಡಿ ಸಮೇತ ಇದಕ್ಕೆ ಉತ್ತರ ನೀಡ್ತಾರೆ. ಮುಂದೆ ಇದಕ್ಕಿಂತಲೂ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪಂಚಮಸಾಲಿ ಹೋರಾಟಕ್ಕೆ ಸರ್ಕಾರ ಶಾಕ್: ಜಿಲ್ಲಾಡಳಿತ ನಿರ್ಧಾರದ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಆಕ್ರೋಶ
ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನವರು ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿರುವ ಪ್ರಕರಣಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು