
ಬೆಂಗಳೂರು(ಆ.19): ಪಾಲಿಕೆಯಲ್ಲಿ ಹಾಲಿ ಇರುವ ಯಾಂತ್ರಿಕ ಕಸ ಗುಡಿಸುವ ಯಂತ್ರಗಳ ಪೈಕಿ ಶೇ.90 ರಷ್ಟು ಕಾರ್ಯನಿರ್ವಹಿಸದೆ ಇರುವಾಗ ಹೊಸದಾಗಿ 25 ಹೊಸ ಯಂತ್ರ ಖರೀದಿ ಹಾಗೂ 7 ವರ್ಷದ ನಿರ್ವಹಣೆಗೆ ಬರೋಬ್ಬರಿ 227 ಕೋಟಿ ರು. ವೆಚ್ಚದ ಟೆಂಡರ್ ಆಹ್ವಾನಿಸಿರುವುದಕ್ಕೆ ಆಡಳಿತ ಪಕ್ಷದ ಸದಸ್ಯರೇ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಸೋಮವಾರ ಬಿಬಿಎಂಪಿ ಮಾಸಿಕ ಸಭೆ ಆರಂಭಗೊಳ್ಳುತ್ತಿದಂತೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಅವರು 227 ಕೋಟಿ ವೆಚ್ಚದಲ್ಲಿ 25 ಕಸ ಗುಡಿಸುವ ಯಂತ್ರ ಖರೀದಿ ಹಾಗೂ 7 ವರ್ಷಗಳ ನಿರ್ವಹಣೆಗೆ ಆಹ್ವಾನಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು, ಮಾಜಿ ಮೇಯರ್ ಮಂಜುನಾಥ ರೆಡ್ಡಿ ಸೇರಿದಂತೆ ಅನೇಕರು ಇದಕ್ಕೆ ದನಿಗೂಡಿಸಿದರು.
ಕೊರೋನಾ ತುರ್ತು ಸಂದರ್ಭದಲ್ಲಿ ಇವುಗಳ ಖರೀದಿಯ ಅವಶ್ಯಕತೆ ಏನಿದೆ. ಈ ಹಿಂದೆ ಪಾಲಿಕೆ ಖರೀದಿ ಮಾಡಿದ ಕಸಗುಡಿಸುವ ಯಂತ್ರಗಳು ಶೇ.9 ರಷ್ಟು ಕಾರ್ಯನಿರ್ವಹಿಸುತ್ತಿಲ್ಲ. ಹೀಗಿರುವಾಗ ಟೆಂಡರ್ ಅವಶ್ಯಕತೆ ಇದೆಯೇ ಎಂದು ಮುನೀಂದ್ರ ಕುಮಾರ್ ಪ್ರಶ್ನಿಸಿದರು.
ಬೆಂಗಳೂರಲ್ಲಿ ಕೊರೋನಾ ಕೇಸ್ ಹೆಚ್ಚಿದ್ರೂ ನಿಯಮ ಬದಲಿಸಿದ ಬಿಬಿಎಂಪಿ...!
27 ವಾಹನ ನನ್ನ ಗಮನಕ್ಕೂ ಬಂದಿಲ್ಲ:
ಈ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಪಾಲಿಕೆ ಪಕ್ಕದ ಮೈದಾನದಲ್ಲಿ ಎಲ್ಲ 27 ವಾಹನ ಪ್ರದರ್ಶನ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಮೂರ್ನಾಲ್ಕು ವಾಹನ ಪ್ರದರ್ಶನ ಮಾಡಿದ್ದಾರೆ ಅಷ್ಟೇ ಎಂದರು
ಈ ಕುರಿತು ಸಭೆಗೆ ಉತ್ತರಿಸಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಕಸಗುಡಿಸುವ ಯಂತ್ರ ಟೆಂಡರ್ ಕುರಿತು ಪಾಲಿಕೆ ಸದಸ್ಯರ ಅಭಿಪ್ರಾಯದಂತೆ ಈಗ ಕರೆದಿರುವ ಟೆಂಡರ್ ರದ್ದು ಮಾಡಿ, ಅಗತ್ಯವಿದ್ದರೆ ಕಸಗುಡಿಸುವ ಯಂತ್ರ ಖರೀದಿಗೆ ಹೊಸದಾಗಿ ಟೆಂಡರ್ ಕರೆಯುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಅಧಿಕಾರಿಗಳಿಗೆ 1 ಲಕ್ಷ ಬಹುಮಾನ ಘೋಷಣೆ
ಕಸಗುಡಿಸುವ ಯಂತ್ರ ದಿನಕ್ಕೆ 40 ಕಿ.ಮೀ. ಕಸ ಗುಡಿಸುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕಸಗುಡಿಸುವ ಯಂತ್ರ ಪ್ರತಿ ಗಂಟೆಗೆ 20 ಕಿ.ಮೀ. ಕಸ ಗುಡಿಸುತ್ತದೆ ಎಂದು ಪಾಲಿಕೆಯ ಯಾವುದೇ ಅಧಿಕಾರಿಯಾದರೂ ಸಾಬೀತು ಮಾಡಿದರೆ ಅವರಿಗೆ ವೈಯಕ್ತಿವಾಗಿ .1ಲಕ್ಷ ಬಹುಮಾನ ನೀಡುವುದಾಗಿ ಎಂದು ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಘೋಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ