ಮಂಡ್ಯ (ಮೇ.09): ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಬಳಲುತ್ತಿರುವವರ ನೆರವಿಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ 100 ಜಂಬೋ ಆಕ್ಸಿಜನ್ ಸಿಲಿಂಡರ್ ಮತ್ತು ಕೊರೋನಾ ಯೋಧರಾಗಿ ದುಡಿಯುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ 20 ಸಾವಿರ ಎನ್-95 ಮಾಸ್ಕ್‌ಗಳನ್ನು ನೀಡಲು ಮುಂದೆ ಬಂದಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಎಸ್.ಎಂ.ಕೃಷ್ಣ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆಂದು ಈ ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದ್ದು, ಅಗತ್ಯ ಇರುವ ಕಡೆ ಬಳಸಿಕೊಂಡು ಯಾವುದೇ ವ್ಯಕ್ತಿಗೆ ಆಕ್ಸಿಜನ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸ್ವಂತ ದುಡ್ಡಿನಲ್ಲಿ ಪ್ರತಿದಿನ ಆಕ್ಸಿಜನ್.. ಮಂಡ್ಯ ಸಂಸದೆ ಮಾದರಿ ಹೆಜ್ಜೆ
ಅದೇ ರೀತಿ ಕೋವಿಡ್ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಹಗಲು-ರಾತ್ರಿ ದುಡಿಯುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ 20 ಸಾವಿರ ಎನ್-95 ಮಾಸ್ಕ್‌ಗಳನ್ನು ಹಸ್ತಾಂತರಿಸಲಾಗುವುದು. ಇವುಗಳನ್ನು ಸೂಕ್ತವಾಗಿ ಬಳಸಿಕೊಂಡು ಜನರ ಆರೋಗ್ಯ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.
ಕೊರೋನಾ ಸಂಕಷ್ಟಕಾಲದಲ್ಲಿ ಜನರ ಪ್ರಾಣ ಉಳಿಸುವುದಕ್ಕಾಗಿ ಆಕ್ಸಿಜನ್ ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದೆ. ಅವುಗಳು ಜನರ ಪ್ರಾಣ ಉಳಿವಿಗೆ ಬಳಕೆಯಾದರೆ ಅದೇ ನನಗೆ ತೃಪ್ತಿ. ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸೇರಿ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆಂದು ಈ ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದೆ.
- ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona