ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಅವಕಾಶ ಕೋರಿ ನಾವು ಮೂರು ಬಾರಿ ನೋಟಿಸ್ ಕೊಟ್ಟಿದ್ದೇವೆ. ಆದರೆ, ಚರ್ಚೆಗೆ ಅವಕಾಶ ಕೊಡಲಿಲ್ಲ.ರೈತರ ಸಮಸ್ಯೆಗಳ ಬಗ್ಗೆ ನಿಯಮ 69ರಡಿ ಸುದೀರ್ಘವಾಗಿ ಮಾತನಾಡಿದ್ದೇನೆ. ಆದರೆ, ಯಾವುದಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ. ಹೀಗಾದರೆ ಯಾವ ಪುರುಷಾರ್ಥಕ್ಕೆ ಇವರು ಅಧಿವೇಶನ ನಡೆಸುತ್ತಾರೆ?: ಸಿದ್ದರಾಮಯ್ಯ
ಸುವರ್ಣಸೌಧ(ಡಿ.30): ಸದನದಲ್ಲಿ ಪ್ರತಿಪಕ್ಷದವರು ಚರ್ಚಿಸಿದ ವಿಷಯಗಳಿಗೆ ಉತ್ತರ ನೀಡಲಾಗುವುದಿಲ್ಲ ಎನ್ನುವುದಾದರೆ, ನಾವು ನೋಟಿಸ್ ನೀಡಿದ ವಿಚಾರಗಳ ಚರ್ಚೆಗೆ ಅವಕಾಶವನ್ನೇ ನೀಡುವುದಿಲ್ಲವಾದರೆ ಸರ್ಕಾರ ಮತ್ತು ಸ್ಪೀಕರ್ ಅಧಿವೇಶನವನ್ನು ಯಾವ ಪುರುಷಾರ್ಥಕ್ಕೆ ಕರೆಯುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದ್ದಾರೆ.
ಗುರುವಾರ ಉಭಯ ಸದನಗಳ ಕಾರ್ಯಕಲಾಪಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಹೊರಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಅವಕಾಶ ಕೋರಿ ನಾವು ಮೂರು ಬಾರಿ ನೋಟಿಸ್ ಕೊಟ್ಟಿದ್ದೇವೆ. ಆದರೆ, ಚರ್ಚೆಗೆ ಅವಕಾಶ ಕೊಡಲಿಲ್ಲ.ರೈತರ ಸಮಸ್ಯೆಗಳ ಬಗ್ಗೆ ನಿಯಮ 69ರಡಿ ಸುದೀರ್ಘವಾಗಿ ಮಾತನಾಡಿದ್ದೇನೆ. ಆದರೆ, ಯಾವುದಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ. ಹೀಗಾದರೆ ಯಾವ ಪುರುಷಾರ್ಥಕ್ಕೆ ಇವರು ಅಧಿವೇಶನ ನಡೆಸುತ್ತಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ: ಕಾಂಗ್ರೆಸ್‌ಗೆ ಬಿಜೆಪಿ ಚೆಕ್‌ಮೇಟ್..!
ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ಮಿತಿ ಮೀರಿ ಹೋಗಿದೆ. ಶೇ.40ರಷ್ಟುಭ್ರಷ್ಟಾಚಾರ ಎನ್ನುತ್ತೇವೆ. ಆದರೆ, ಕೆಲವೊಂದು ಇಲಾಖೆಗಳಲ್ಲಿ ಹೇಳೋಕೆ ಆಗದಷ್ಟುದೊಟ್ಟಮಟ್ಟದ ಭ್ರಷ್ಟಾಚಾರ ನಡೆದಿದೆ. ಕೆಲಸ ಮಾಡದಿದ್ದರೂ ಬಿಲ್ ಮೊತ್ತ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಕುಮ್ಮಕ್ಕು ಇಲ್ಲದೆ ಇಂತಹ ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಚರ್ಚೆಗೆ ನೋಟಿಸ್ ನೀಡಿದರೆ ಅವಕಾಶ ನೀಡಲಿಲ್ಲ. ಸ್ಪೀಕರ್ ಕೂಡ ಪಕ್ಷಾತೀತವಾಗಿ ನಿಲುವು ತೆಗೆದುಕೊಳ್ಳದೆ ಸರ್ಕಾರದ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.