ಜಮಖಂಡಿಯಲ್ಲಿ ಜಾತಿ ಲೆಕ್ಕಾಚಾರದ ಮಾಸ್ಟರ್ ಪ್ಲ್ಯಾನ್ ಮಾಡಿದ್ರಾ ಸಿದ್ದು! ಹಿಂದುತ್ವದ ಅಲೆಯಲ್ಲಿ ತೇಲುತ್ತಿದ್ದ ಬಿಜೆಪಿಗೆ ಸಿದ್ದರಾಮಯ್ಯ ಶಾಕ್! ಪಕ್ಷದಲ್ಲಿ ಆಯಾ ಜಾತಿ ನಾಯಕರನ್ನೇ ಪ್ರಚಾರಕ್ಕಿಳಿಸಿದ ಸಿದ್ದರಾಮಯ್ಯ! ಅಸಮಾಧಾನಿತ ಕಾಂಗ್ರೆಸ್ ಮುಖಂಡರನ್ನ ಬಳ್ಳಾರಿಗೆ ಶಿಫ್ಟ್ ಮಾಡಿದ ಸಿದ್ದು
ಮಲ್ಲಿಕಾರ್ಜುನ್ ಹೊಸಮನಿ
ಜಮಖಂಡಿ(ಅ.27): ರಾಜ್ಯದಲ್ಲಿ ನಡೆಯುತ್ತಿರುವ 5 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ, ಜಮಖಂಡಿ ಮತಕ್ಷೇತ್ರಕ್ಕೆ ನಡಿಯುತ್ತಿರುವ ಬೈಎಲೆಕ್ಷನ್ ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಪಾಳೆಯದಲ್ಲಿ ಮಾಜಿ ಸಿಎಂಗಳ ಪ್ರತಿಷ್ಠೆಯ ಕಾಳಗದ ಕ್ಷೇತ್ರವೆಂದೇ ಬಣ್ಣಿಸಲಾಗುತ್ತಿದೆ.
ಇತ್ತ ಹಿಂದುತ್ವದ ಅಲೆಯಲ್ಲಿ ತೇಲುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಆಂತರಿಕ ಪ್ಲ್ಯಾನ್ ರೂಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಜಾತಿ ನಾಯಕರನ್ನು ಹಿಡಿದು ಬಿಜೆಪಿಗೆ ಖೆಡ್ಡಾ ತೋಡಲು ಶುರು ಮಾಡಿದ್ದಾರೆ.
ಹೌದು, ಜಮಖಂಡಿ ಮತಕ್ಷೇತ್ರ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇತ್ತ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯನವರ ಮಧ್ಯೆದ ಕಾಳಗವೆಂದೇ ಬಿಂಬಿತವಾಗಿದೆ. ಈ ಮದ್ಯೆ ಜಮಖಂಡಿ ಮತಕ್ಷೇತ್ರದಲ್ಲಿ ಹಿಂದುತ್ವದ ಅಲೆ ಜೋರಾಗಿದ್ದು, ಈ ಮಧ್ಯೆ ಬಿಜೆಪಿಯಲ್ಲಿನ ಭಿನ್ನಮತ ಶಮನವಾಗುತ್ತಿರುವ ಅಂಶ ಮನಗಂಡ ಸಿದ್ದರಾಮಯ್ಯ ಇದೀಗ ಜಾತಿ ಲೆಕ್ಕಾಚಾರದಲ್ಲೇ ಬಿಜೆಪಿಗೆ ಶಾಕ್ ನೀಡೋಕೆ ಮುಂದಾಗಿದ್ದಾರೆ.
ಯಾವ ನಾಯಕ ಯಾವ ಜಾತಿಗೆ?:
ಜಾತಿವಾರು ಲೆಕ್ಕಾಚಾರದಲ್ಲಿ ಕ್ಷೇತ್ರದಲ್ಲಿ ಆಯಾ ನಾಯಕರನ್ನ ಬೀಡುಬಿಡುವಂತೆ ಮಾಡಿ ಜಾತಿ ಲೆಕ್ಕಾಚಾರದ ಖೆಡ್ಡಾವೊಂದನ್ನು ತೋಡಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯದ ಮತ ಸೆಳೆಯುವ ನಿಟ್ಟಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಮತ್ತೊಂದೆಡೆ ದಲಿತ ಮತ ಸೆಳೆಯೋಕೆ ಡಿಸಿಎಂ ಪರಮೇಶ್ವರ, ಮುಸ್ಲಿಂ ಮತಗಳನ್ನ ಸೆಳೆಯೋಕೆ ಜಮೀರ ಅಹ್ಮದ್, ಸಿಎಂ ಇಬ್ರಾಹಿಂ ಹಾಗೂ ಬ್ರಾಹ್ಮಣ ಮತಗಳನ್ನ ಸೆಳೆಯಲು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ದಿನೇಶ ಗುಂಡೂರಾವ್ ಹೀಗೆ ತಮ್ಮ ಪಕ್ಷದ ಎಲ್ಲಾ ಜಾತಿಯ ಮುಖಂಡರನ್ನು ಕ್ಷೇತ್ರದಲ್ಲಿರುವಂತೆ ನೋಡಿಕೊಂಡು ಶತಾಯಗತಾಯ ಜಾತಿ ಲೆಕ್ಕಾಚಾರದಲ್ಲೇ ಗೆಲುವು ಕಂಡುಕೊಳ್ಳಲು ಮುಂದಾಗಿದ್ದಾರೆ.
ಭಿನ್ನಮತ ಶಮನಕ್ಕೆ ಸಿದ್ದು ಹೊಸ ಪ್ಲ್ಯಾನ್:
ಇನ್ನು ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿದ್ದ ಅಸಮಾಧಾನಿತ ಮುಖಂಡರನ್ನ ಬಳ್ಳಾರಿಗೆ ಶಿಪ್ಟ್ ಮಾಡುವ ಮೂಲಕ ಸಿದ್ದರಾಮಯ್ಯ ರಾಜಕೀಯ ಮುತ್ಸದ್ದಿತನ ಮೆರೆದಿದ್ದಾರೆ. ಅಸಮಾಧಾನಿತ ಸುಶೀಲಕುಮಾರ್ ಬೆಳಗಲಿ ಜಮಖಂಡಿಯಲ್ಲೇ ಉಳಿದಲ್ಲಿ ಭಿನ್ನಮತ ಮುಂದುವರೆಯೋದು ಪಕ್ಕಾ ಆಗಿತ್ತು.
ಆದರೆ ಇದೀಗ ಸುಶೀಲಕುಮಾರ್ ಅವರನ್ನು ಬಳ್ಳಾರಿ ಎಲೆಕ್ಷನ್ ಗೆ ಹಾಕಿ ಉಳಿದವರನ್ನು ಒಗ್ಗೂಡಿಸಿ ನಿತ್ಯವೂ ತಂತ್ರ ಪ್ರತಿತಂತ್ರದೊಂದಿಗೆ ಸಿದ್ದರಾಮಯ್ಯ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಮಧ್ಯೆ ಹೋದಲ್ಲೆಲ್ಲಾ ಅನುಕಂಪದ ಅಲೆ ಮೂಡಿ ಬರುವಂತೆ ಸಿದ್ದರಾಮಯ್ಯ ಭಾಷಣ ಮಾಡುವ ಮೂಲಕ ಸಿದ್ದು ನ್ಯಾಮಗೌಡರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನೀವು ಅವರ ಪುತ್ರ ಆನಂದ ನ್ಯಾಮಗೌಡರನ್ನ ಗೆಲ್ಲಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಜಮಖಂಡಿ ಮತಕ್ಷೇತ್ರದ ಈಗಿನ ರಾಜಕೀಯ ಲೆಕ್ಕಾಚಾರದಲ್ಲಿ ರಾಜಕೀಯ ಮುತ್ಸದ್ದಿತನ ಮೆರೆಯುತ್ತಿರುವ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಇನ್ನಿಲ್ಲದ ಕಸರತ್ತು ನಡೆಸಿದ್ದು, ಇನ್ನೂ ನಾಲ್ಕೈದು ದಿನಗಳ ಕಾಲ ಯಾವ್ಯಾವ ನಾಯಕರು ಇನ್ಯಾವ ಕಾರ್ಯತಂತ್ರ ರೂಪಿಸ್ತಾರೆ ಅಂತ ಕಾದು ನೋಡಬೇಕಿದೆ.