
ಬೆಂಗಳೂರು(ಮೇ.30): ಹಿಂದಿನ ಸರ್ಕಾರ ಅರಣ್ಯ ಇಲಾಖೆಯಲ್ಲಿ ಯಾವುದೇ ಅಕ್ರಮ ನಡೆದಿರುವುದು ಪತ್ತೆಯಾದರೆ ಅದರ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹೇಳಿರುವ ಅರಣ್ಯ ಇಲಾಖೆ ನೂತನ ಸಚಿವ ಈಶ್ವರ ಖಂಡ್ರೆ ಅವರು, ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ನಮ್ಮ ಇಲಾಖೆಯಲ್ಲಿ ಈ ಹಿಂದಿನ ಸರ್ಕಾರ ಯಾವುದೇ ಅಕ್ರಮ ನಡೆಸಿದ್ದರೂ ಅದರ ಬಗೆಗೂ ತನಿಖೆ ನಡೆಸುತ್ತೇವೆ. ಜನತೆ ಇಲಾಖೆಯಲ್ಲಿನ ಅಕ್ರಮದ ಬಗ್ಗೆ ಗಮನಕ್ಕೆ ತಂದರೆ ತಕ್ಷಣ ಕ್ರಮ ವಹಿಸಲಾಗುವುದು. ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ, ಮರಗಳ ನಾಶ ಸೇರಿ ಯಾವುದೇ ಕಾನೂನುಬಾಹಿರ ಚಟುವಟಿಕೆ ಸಹಿಸುವುದಿಲ್ಲ. ಕಾನೂನು ಉಲ್ಲಂಘಿಸುವವರು ಯಾರೇ ಆದರೂ ಕ್ರಮ ವಹಿಸುತ್ತೇವೆ. ಇದು ನಾನು ನೀಡುತ್ತಿರುವ ಎಚ್ಚರಿಕೆ’ ಎಂದು ಅವರು ಹೇಳಿದರು.
ಬಿಜೆಪಿಯ ಹುಸಿ ಭರವಸೆಗಳನ್ನು ಜನ ನಂಬಬಾರದು: ಈಶ್ವರ ಖಂಡ್ರೆ
‘ಹಿಂದಿನ ಸರ್ಕಾರ ಆನೆ ಸೆರೆ, ಸಂರಕ್ಷಣೆ ಕಾರ್ಯಾಚರಣೆಗೆ ಹೆಚ್ಚಿನ ಅನುದಾನ ನೀಡಿಲ್ಲ ಎಂದು ಆರೋಪ ಇದೆ. ಅದರ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆಯುತ್ತೇವೆ. ಜನರ ಜೀವ ಉಳಿಸಲು ಮಾನವ ಮತ್ತು ವನ್ಯ ಮೃಗಗಳ ಸಂಘರ್ಷ ತಪ್ಪಿಸಲು ಎಲ್ಲ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಮುಂದೆ ಅರಣ್ಯ ಅತಿಕ್ರಮಣ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿದ ಖಂಡ್ರೆ, ಅನೇಕ ಜನರು ಕಂದಾಯ ಭೂಮಿ ಎಂದು ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿದ್ದಾರೆ. ಈ ಬಗ್ಗೆ ಸಾಕಷ್ಟುದೂರುಗಳಿವೆ. ಇವುಗಳನ್ನು ಗುರುತಿಸಿ ಡಿನೋಟಿಫೈ ಮಾಡಬೇಕಾಗುತ್ತದೆ. ಕಂದಾಯ ಮತ್ತು ಅರಣ್ಯ ಭೂಮಿಗಳ ಸಮಸ್ಯೆ ಇತ್ಯರ್ಥಕ್ಕೆ ಜಂಟಿ ಸರ್ವೇ ನಡೆಸುವ ಅಗತ್ಯವಿದೆ ಎಂದರು.
ಇನ್ನು, ‘ಈ ಖಾತೆ ಬಗ್ಗೆ ನನಗೆ ತೃಪ್ತಿಯಿದೆ. ಯಾವುದೇ ಖಾತೆಯಾದರೂ ನಾವು ದಕ್ಷತೆಯಿಂದ ನಿರ್ವಹಿಸಿದರೆ ಅದಕ್ಕೆ ಮೆರುಗು ಬರುತ್ತದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡುವೆ’ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ