
ಬೆಂಗಳೂರು(ನ.07): ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕಳೆದ ಐದು ತಿಂಗಳಿಂದ ಮಧ್ಯಾಹ್ನದ ಬಿಸಿಯೂಟ ನೀಡದೇ ಇರುವುದಕ್ಕೆ ಬದಲಾಗಿ ನಿಗದಿತ ಪ್ರಮಾಣದ ಅಕ್ಕಿ, ಗೋಧಿ ಮತ್ತು ತೊಗರಿ ಬೇಳೆಯನ್ನು ವಿತರಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜೂನ್‌ನಿಂದ ಅಕ್ಟೋಬರ್‌ವರೆಗೆ ನೀಡಬೇಕಿದ್ದ ಬಿಸಿಯೂಟಕ್ಕೆ ಬದಲಾಗಿ ರಜಾ ದಿನಗಳನ್ನು ಹೊರತುಪಡಿಸಿ 108 ದಿನಗಳಿಗೆ ಅನ್ವಯಿಸುವಂತೆ ಆಹಾರ ಧಾನ್ಯಗಳನ್ನು ನೀಡಲು ಸೂಚಿಸಲಾಗಿದೆ. ಆದರೆ, ದಾಸ್ತಾನು ಸಮಸ್ಯೆ ಉಂಟಾಗುವ ಕಾರಣ ಎರಡು ಹಂತದಲ್ಲಿ ಧಾನ್ಯಗಳನ್ನು ವಿತರಿಸುವಂತೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮೊದಲ ಹಂತದಲ್ಲಿ ಜೂನ್‌ಮತ್ತು ಜುಲೈ ತಿಂಗಳ 53 ದಿನಗಳಿಗೆ ಅನ್ವಯಿಸುವಂತೆ ಆಹಾರ ಧಾನ್ಯ ಪೂರೈಸಬೇಕು. ಈಗಾಗಲೇ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ (ಕೆಎಫ್‌ಸಿಎಸ್‌ಸಿ) ಮೊದಲ ಹಂತದ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಮುಗಿದಿದ್ದು, ಪ್ರತಿ ಜಿಲ್ಲೆ, ತಾಲೂಕುಗಳಿಗೆ ಸರಬರಾಜು ಆರಂಭಿಸಲಾಗಿದೆ.
ಯಾವ ತರಗತಿ ಮಕ್ಕಳಿಗೆ ಎಷ್ಟೆಷ್ಟು?
1 ರಿಂದ 5ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿ ದಿನ ತಲಾ 100 ಗ್ರಾಂ. ಅಕ್ಕಿ ಅಥವಾ ಗೋಧಿ ಮತ್ತು 4.97 ರು. ಅಡುಗೆ ತಯಾರಿಕಾ ವೆಚ್ಚಕ್ಕೆ ಸಮನಾಗಿ 58 ಗ್ರಾಂ. ತೊಗರಿ ಬೇಳೆ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ 6ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪ್ರತಿ ನಿತ್ಯ 150 ಗ್ರಾಂ ಅಕ್ಕಿ/ಗೋಧಿ ಮತ್ತು 7.45 ರು. ಮೊತ್ತಕ್ಕೆ ಸಮನಾಗಿ 87 ಗ್ರಾಂ ತೊಗರಿ ಬೇಳೆ ನೀಡಲು ತೀರ್ಮಾನಿಸಲಾಗಿದೆ. ಈ ಪೈಕಿ 1ರಿಂದ 8ನೇ ತರಗತಿ ಮಕ್ಕಳಿಗೆ ಮೊದಲ ಹಂತದ 53 ದಿನಗಳಲ್ಲಿ 45 ದಿನಗಳಿಗೆ ಅಕ್ಕಿ ಮತ್ತು ಬಾಕಿ 8 ದಿನಗಳಿಗೆ ಗೋಧಿ ಲೆಕ್ಕ ನೀಡಲು ನಿರ್ಧರಿಸಲಾಗಿದೆ. 9 ಮತ್ತು 10ನೇ ತರಗತಿ ಮಕ್ಕಳಿಗೆ ಪೂರ್ತಿ 53 ದಿನಗಳಿಗೂ ಅಕ್ಕಿಯನ್ನೇ ನೀಡಲು ಸೂಚಿಸಿದೆ.
ಆನ್‌ಲೈನ್ ಕ್ಲಾಸ್ ನಿಯಮ ಉಲ್ಲಂಘಿಸಿದರೆ ದೂರು ನೀಡಿ: ಸಚಿವ ಸುರೇಶ ಕುಮಾರ್
ಅದರಂತೆ 1ರಿಂದ 5ನೇ ತರಗತಿಯ ಪ್ರತಿ ಮಕ್ಕಳಿಗೆ ಮೊದಲ ಹಂತದ 53 ದಿನಗಳ ಲೆಕ್ಕದಲ್ಲಿ ತಲಾ 4.50 ಕೆ.ಜಿ. ಅಕ್ಕಿ, 800 ಗ್ರಾಂ. ಗೋಧಿ ಮತ್ತು 3.74 ಕೆ.ಜಿ. ತೊಗರಿ, 6ರಿಂದ 8ನೇ ತರಗತಿ ಮಕ್ಕಳಿಗೆ 6.75 ಕೆ.ಜಿ. ಅಕ್ಕಿ, 1.20 ಕೆ.ಜಿ ಗೋಧಿ, 4.61 ಕೆ.ಜಿ ಬೇಳೆ, 9 ಮತು 10ನೇ ತರಗತಿ ಮಕ್ಕಳಿಗೆ 7.95 ಕೆ.ಜಿ ಅಕ್ಕಿ, 4.61 ಕೆ.ಜಿ. ಬೇಳೆ ವಿತರಣೆಗೆ ಆದೇಶಿಸಲಾಗಿದೆ.
ತಮ್ಮ ಜಿಲ್ಲೆ, ತಾಲೂಕು ವ್ಯಾಪ್ತಿಯ ಶಾಲಾ ಮಕ್ಕಳಿಗೆ ಪೂರೈಸಬೇಕಾದ ಧಾನ್ಯ ಬಂದ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು ವಿತರಣೆ ಪ್ರಕ್ರಿಯೆ ಆರಂಭಿಸಬೇಕು. ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಬಾಕಿ 55 ದಿನಗಳ ಆಹಾರ ಧಾನ್ಯ ಪೂರೈಕೆಗೆ ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗುವುದು ಎಂದು ಇಲಾಖೆ ಆಯುಕ್ತ ವಿ.ಅನ್ಬುಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ