ಐದು ಜಿಲ್ಲೆಗಳಲ್ಲಿ ಭಾರೀ ಮಳೆ: ಮಂಗ್ಳೂರಲ್ಲಿ ಪ್ರವಾಹ, ಜನಜೀವನ ಸಂಪೂರ್ಣ ಅಸ್ತವ್ಯಸ್ತ

By Kannadaprabha News  |  First Published Jul 1, 2022, 6:00 AM IST

*  ಚುರುಕಾದ ಮುಂಗಾರು ಮಳೆ
*  ಮನೆ, ಶಾಲೆ, ಅಪಾರ್ಚ್‌ಮೆಂಟ್‌ಗೆ ನೀರು
*  ಮಂಗಳೂರು- ಕುಕ್ಕೆ ಬಳಿ ಹಳಿಗೆ ಗುಡ್ಡ ಕುಸಿದು ರೈಲು ಸಂಚಾರ ಅಸ್ತವ್ಯಸ್ತ
 


ಬೆಂಗಳೂರು(ಜು.01): ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿ ರಾಜ್ಯದ ಐದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುರುವಾರ ಭರ್ಜರಿ ಮಳೆಯಾಗಿದೆ. ಮಂಗಳೂರಿನಲ್ಲಂತೂ ಭಾರೀ ಮಳೆಗೆ ಸೃಷ್ಟಿಯಾದ ನೆರೆಯಿಂದಾಗಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಪ್ಪಳ, ಹಾಸನದ ಕೆಲ ಭಾಗಗಳಲ್ಲಿ ಭರ್ಜರಿ ಮಳೆಯಾಗಿದ್ದು, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸಾಧಾರಣ ಮಳೆ ಸುರಿದಿದೆ. ಕೊಪ್ಪಳ ಜಿಲ್ಲೆ ಕುಕನೂರಿನಲ್ಲಿ ದಿಢೀರ್‌ ಮಳೆಗೆ ಹಳ್ಳ ತುಂಬಿ ಹರಿದಿದ್ದರಿಂದ 250ಕ್ಕೂ ಹೆಚ್ಚು ಮಕ್ಕಳು ಮನೆಗೆ ತೆರಳಲು ಪರದಾಡಬೇಕಾಯಿತು. ನಂತರ ಅವರನ್ನು ಬೇರೊಂದು ಮಾರ್ಗದಿಂದ ಬಂದ ಬಸ್‌ ಮೂಲಕ ಸ್ಥಳಾಂತರಿಸಲಾಗಿದೆ.

Tap to resize

Latest Videos

ಬಾರದ ಮಳೆ: ರೈತರ ಮೊಗದಲಿಲ್ಲ ಕಳೆ..!

ಮಂಗಳೂರಿನಲ್ಲಿ ಕೃತಕ ಪ್ರವಾಹ:

ಕಳೆದೊಂದು ತಿಂಗಳಿಂದ ಸುಮ್ಮನಿದ್ದ ಮುಂಗಾರು ಮಳೆ ದಿಢೀರ್‌ ಅಬ್ಬರಿಸಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಂತೂ ಭಾರೀ ಅನಾಹುತ ಸೃಷ್ಟಿಯಾಗಿದೆ. ಪ್ರವಾಹಕ್ಕೆ ಮಹಾನಗರ ಸಂಪೂರ್ಣ ತತ್ತರಿಸಿದೆ. ಧಾರ್ಮಿಕ ಕೇಂದ್ರ, ಮನೆ, ಶಾಲೆ, ಅಪಾರ್ಚ್‌ಮೆಂಟ್‌, ರಸ್ತೆಗಳಿಗೆ ನೀರು ನುಗ್ಗಿ ಜನ ಪರದಾಡುವಂತೆ ಮಾಡಿದೆ. ರಸ್ತೆಯಲ್ಲಿ ಪ್ರವಾಹದ ರೀತಿ ನೆರೆ ಸೃಷ್ಟಿಯಾಗಿ, ನಾಲ್ಕೈದು ಗಂಟೆಗಳ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಕೆಲವೆಡೆ ಸಂತ್ರಸ್ತರನ್ನು ಎನ್‌ಡಿಆರ್‌ಎಫ್‌ ತಂಡ ಬೋಟ್‌ ಮೂಲಕ ರಕ್ಷಿಸಲಾಗಿದೆ.

ಇನ್ನು ಪಡೀಲು ಸಮೀಪ ಹಳಿಗೆ ಗುಡ್ಡ ಕುಸಿದ ಪರಿಣಾಮ ಮಂಗಳೂರು-ಕುಕ್ಕೆ ಸುಬ್ರಹ್ಮಣ್ಯ ನಡುವೆ ಎರಡು ವಿಶೇಷ ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು. ಮಧಾಹ್ನ 2.25ಕ್ಕೆ ಹಳಿಯಿಂದ ಮಣ್ಣು ತೆರವುಗೊಳಿಸಿ ರೈಲು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲೂ ಭರ್ಜರಿ ಮಳೆಯಾಗುತ್ತಿರುವ ಕಾರಣ ನಗರದ ತಗ್ಗುಪ್ರದೇಶಗಳಲ್ಲಿ ನೀರಿನಮಟ್ಟನಿಧಾನವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಆತಂಕ ಶುರುವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿವರೆಗೂ ನೀರು ನಿಂತಿದೆ. ಇನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ, ಹಂಪಿ, ಮರಿಯಮ್ಮನಹಳ್ಳಿ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 2 ಗಂಟೆ ಕಾಲ ಉತ್ತಮ ಮಳೆ ಸುರಿದಿದೆ. ಮಳೆ ನೀರಿನ ಹಿನ್ನೆಲೆಯಲ್ಲಿ ಹಂಪಿಯ ಸ್ಮಾರಕಗಳ ಪ್ರತಿಬಿಂಬ ನೀರಿನಲ್ಲಿ ಕಾಣುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸಿತು.

Karnataka Rain ಕರ್ನಾಟಕದಲ್ಲಿಯೇ ಉಡುಪಿಯ ನಾಡ ಗ್ರಾಮದಲ್ಲಿ ಅತಿ ಹೆಚ್ಚು ಮಳೆ

ದ.ಕ, ಉಡುಪಿಯಲ್ಲಿಂದು ಶಾಲಾ-ಕಾಲೇಜುಗಳಿಗೆ ರಜೆ

ಮುಂಗಾರು ಮಳೆಯ ಅಬ್ಬರದಿಂದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡೂ ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ಜು.1ರಂದು ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಬಳಿಕ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದ್ದು, ಮಳೆ ಬಿರುಸು ಮುಂದುವರಿದ ಕಾರಣ ಶುಕ್ರವಾರವೂ ರಜೆ ಘೋಷಿಸಲಾಗಿದೆ.

ಮಂಗಳೂರಲ್ಲಿ 7 ಸೆಂ.ಮೀ. ಮಳೆ

ದಕ್ಷಿಣ ಕನ್ನಡ ಜಿಲ್ಲೆಗೆ ಹೋಲಿಸಿದರೆ ಮಂಗಳೂರು ನಗರ ಹಾಗೂ ಸುತ್ತಮುತ್ತಲಲ್ಲೇ ಭರ್ಜರಿ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 42 ಮಿ.ಮೀ. ಮಳೆಯಾಗಿದ್ದರೆ, ಮಂಗಳೂರು ನಗರದಲ್ಲಿ ಅತ್ಯಧಿಕ ಅಂದರೆ 74.5 ಮಿ.ಮೀ. ಮಳೆ ದಾಖಲಾಗಿದೆ. ಇದೇ ಕಾರಣದಿಂದಾಗಿ ಮಂಗಳೂರು ನಗರದಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.
 

click me!