
ಬೆಂಗಳೂರು(ಜೂ.20): ನೆರೆಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಮತ್ತು ಬೆಳಗಾವಿಗಳಲ್ಲಿ ಶನಿವಾರವೂ ಮಳೆ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿದ್ದು ನದಿ ತೀರ ಪ್ರದೇಶಗಳಲ್ಲಿ ಪ್ರವಾಹಾತಂಕ ಎದುರಾಗಿದೆ. ಒಟ್ಟಾರೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ 21ಕ್ಕೂ ಅಧಿಕ ಸೇತುವೆಗಳು ಜಲಾವೃತವಾಗಿ 45ಕ್ಕೂ ಅಧಿಕ ಗ್ರಾಮಗಳ ಜನರು ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಮೂರು ಮಂದಿ ನದಿನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಪ್ರತ್ಯೇಕ ಘಟನೆಗಳು ನಡೆದಿದ್ದು ಅವರಲ್ಲಿ ಒಬ್ಬನನ್ನು ರಕ್ಷಿಸಲಾಗಿದೆ.
ಕೃಷ್ಣೆಗಾಗಿ ತೆಲಂಗಾಣ ವಿರುದ್ಧ ರಾಜ್ಯ, ಮಹಾ ಜಂಟಿ ಸಮರ!
ಏತನ್ಮಧ್ಯೆಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಬಹುಭಾಗಗಳಲ್ಲೂ ಉತ್ತಮ ಮಳೆಯಾಗುತ್ತಿದ್ದು ಒಟ್ಟಾರೆ 20ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಮಳೆ ತೀವ್ರತೆ ಕಡಿಮೆಯಾಗಿದ್ದು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಹಲವೆಡೆ ತುಂತುರು ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ 1.15 ಲಕ್ಷ ಕ್ಯುಸೆಕ್ ನೀರು ಹರಿದುಬಂದಿರುವುದರಿಂದ ನದಿಮಟ್ಟದಲ್ಲಿ ತೀವ್ರ ಏರಿಕೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 13 ಸೇತುವೆಗಳು ಜಲಾವೃತಗೊಂಡು 30ಕ್ಕೂ ಅಧಿಕ ಗ್ರಾಮಗಳ ಜನರಿಗೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಇನ್ನು ಮಳೆ ಅಬ್ಬರಕ್ಕೆ ಬೆಳಗಾವಿ ತಾಲೂಕಿನ ಉಚಗಾಂವದಲ್ಲಿ ರಸ್ತೆಯೇ ಕೊಚ್ಚಿಕೊಂಡುಹೋಗಿದ್ದು ಉಚಗಾಂವ- ಗೋಜಗಾ ನಡುವಿನ ಸಂಪರ್ಕ ಕಡಿತವಾಗಿದೆ. ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ 30 ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಬಿಡಲಾಗಿದ್ದರಿಂದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ 9ಕ್ಕೂ ಹೆಚ್ಚು ಸೇತುವೆಗಳು ಹಾಗೂ ರಸ್ತೆಗಳು ಜಲಾವೃತವಾಗಿವೆ. ಇದರಿಂದಾಗಿ 15ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕವು ಸಹ ಕಡಿತವಾಗಿದೆ.
17 ಕೆರೆಗೆ ಕೃಷ್ಣಾ ನೀರು ತುಂಬಿಸಲು 457 ಕೋಟಿ
ಇಬ್ಬರು ಬಲಿ, ಒಬ್ಬನ ರಕ್ಷಣೆ: ಪ್ರವಾಹದ ತೀವ್ರತೆಗೆ ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ ಮಲಪ್ರಭಾ ನದಿಯಲ್ಲಿ ಮೀನುಗಾರ ಹುಸೇನಸಾಬ್ ಅತ್ತಾರ(52) ಮತ್ತು ಬೆಳಗಾವಿ ತಾಲೂಕಿನ ಕಾಕತಿ ಬಳಿ ಮಾರ್ಕೆಂಡೇಯ ನದಿಯಲ್ಲಿ ಸಿದ್ರಾಯಿ ಸುತಗಟ್ಟಿ( 65) ಕೊಚ್ಚಿಕೊಂಡು ಹೋಗಿದ್ದರು. ಇವರಲ್ಲಿ ಹುಸೇನ್ ಸಾಬ್ ಶವ ಪತ್ತೆಯಾಗಿದೆ. ಈ ಮಧ್ಯೆ ನಿಪ್ಪಾಣಿ ತಾಲೂಕಿನ ಸಿದ್ನಾಳ ಗ್ರಾಮದಲ್ಲಿ ವೇದಗಂಗಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಹುಕ್ಕೇರಿ ತಾಲೂಕಿನ ಮತ್ತಿವಾಡೆ ಗ್ರಾಮದ ದಿಗ್ವಿಜಯ ಮಹಾರುದ್ರ ಕುಲಕರ್ಣಿ ಎಂಬಾತನನ್ನು ಎನ್‌ಡಿಆರ್‌ಎಫ್ ತಂಡದವರು ಸತತ 7 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಬಿಟ್ಟುಬಿಡದೆ ಮಳೆ ಸುರಿಯುತ್ತಿರುವುದಿಂದ ತಾಲೂಕಿನ ಕಂಬಾರಗಣವಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಿದೆ. ಹುಬ್ಬಳ್ಳಿ ನಗರದಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು ಜಿಲ್ಲೆಯಲ್ಲಿ ಒಟ್ಟು 7ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿವೆ. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಕಡಿಮೆಯಾಗಿದ್ದ ಮಳೆ ಶನಿವಾರ ಮತ್ತೆ ಚುರುಕಾಗಿದ್ದು ವರದಾ ನದಿ ತುಂಬಿ ಹರಿದಿದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅರೆಂದೂರು ಭಾಗದಲ್ಲಿ ಕೃಷಿಭೂಮಿ ಜಲಾವೃತವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ತುಂಗಾ ಮತ್ತು ಭದ್ರಾ ನದಿ ಮಟ್ಟವ್ಯಾಪಕವಾಗಿ ಏರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ