* ರಾಜ್ಯದಲ್ಲಿ 5815 ಮಂದಿಗೆ ಸೋಂಕು, 161 ಸಾವು
* ಒಟ್ಟು ಸೋಂಕಿತರ ಸಂಖ್ಯೆ 28 ಲಕ್ಷ
* ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.3.3 ಕ್ಕೆ ಇಳಿಕೆ
ಬೆಂಗಳೂರು(ಜೂ.20): ರಾಜ್ಯದಲ್ಲಿ ಶನಿವಾರ ಕಳೆದ ಒಂದೂವರೆ ತಿಂಗಳಲ್ಲಿಯೇ ಅತಿ ಹೆಚ್ಚು ಕೊರೋನಾ ಸೋಂಕು ಪರೀಕ್ಷೆಗಳು ನಡೆದಿದ್ದು, ಶೇ.3.38 ಪಾಸಿಟಿವಿಟಿ ದರದಂತೆ 5,815 ಮಂದಿಗೆ ಸೋಂಕು ವರದಿಯಾಗಿದೆ.
ರಾಜ್ಯದಲ್ಲಿ ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 29 ಸಾವಿರ (1.71 ಲಕ್ಷ) ಹೆಚ್ಚಳವಾಗಿವೆ. ಆದರೆ, ಹೊಸ ಪ್ರಕರಣಗಳು ಐದು ಸಾವಿರ ಆಸುಪಾಸಿನಲ್ಲಿಯೇ ಇವೆ. ಶನಿವಾರ 5,815 ಮಂದಿಗೆ ಸೋಂಕು ತಗುಲಿದ್ದು, 161 ಸೋಂಕಿತರ ಸಾವಾಗಿದೆ. 15,290 ಸೋಂಕಿತರು ಗುಣಮುಖರಾಗಿದ್ದಾರೆ.
undefined
ಇನ್ನು ಒಟ್ಟಾರೆ ಮೊದಲ ಅಲೆ, ಎರಡನೇ ಅಲೆ ಸೇರಿ ಒಟ್ಟು ಸೋಂಕಿತರ ಸಂಖ್ಯೆ 28 ಲಕ್ಷ ಗಡಿ ದಾಟಿದೆ. ಈ ಪೈಕಿ 18.5 ಲಕ್ಷ ಎರಡನೇ ಅಲೆಯಲ್ಲಿ ವರದಿಯಾಗಿವೆ. ಒಟ್ಟಾರೆಯಾಗಿ 26.3 ಲಕ್ಷ ಮಂದಿ ಗುಣಮುಖರಾಗಿದ್ದು, 33,763 ಮಂದಿ ಸಾವನ್ನಪ್ಪಿದ್ದಾರೆ. ಉಳಿದ 1.30 ಲಕ್ಷ ಮಂದಿ ಚಿಕಿತ್ಸೆ/ಆರೈಕೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಶುಕ್ರವಾರಕ್ಕೆ ಹೋಲಿಸಿದರೆ 29 ಸಾವಿರ ಪರೀಕ್ಷೆ ಹೆಚ್ಚಾಗಿದ್ದರೂ ಹೊಸ ಪ್ರಕರಣಗಳು 32 ಮಾತ್ರ ಏರಿಕೆಯಾಗಿದೆ. ಸೋಂಕಿತರ ಸಾವು ಏಳು ಕಡಿಮೆಯಾಗಿದೆ.
ರಾಜ್ಯದಲ್ಲಿ ಮತ್ತಷ್ಟು ಲಾಕ್‌ಡೌನ್ ಸಡಿಲಿಕೆ, ಬಸ್ ಓಡಾಡುತ್ತವೆ, ಕಂಡೀಷನ್ಸ್ ಅಪ್ಲೈ
ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.3.3 ಕ್ಕೆ ಇಳಿಕೆಯಾಗಿದ್ದು, ಶೇ.2.76 ರಷ್ಟುಸಾವಿನ ದರ ವರದಿಯಾಗಿದೆ. ಕೊರೋನಾ ಸೋಂಕು ಪರೀಕ್ಷೆಗಳು ಮೇ 1ರಂದು 1.77 ಲಕ್ಷ ನಡೆದಿದ್ದವು. ಬಳಿಕ ಕ್ರಮೇಣ ಪರೀಕ್ಷೆ ಪ್ರಮಾಣ ಇಳಿಕೆ ಮಾಡಲಾಗಿತ್ತು. ಇದೀಗ ಮೇ ತಿಂಗಳಿಗೆ ಹೋಲಿಸಿದರೆ ಪಾಸಿಟಿವಿಟಿ ದರ ಎಂಟು ಪಟ್ಟು ಇಳಿಮುಖವಾದಂತಾಗಿದೆ.
ಬೆಂಗಳೂರಿನಲ್ಲಿ 1,263 ಸೋಂಕು:
ಶನಿವಾರ ಬೆಂಗಳೂರು 1,263 ಮಂದಿಗೆ ಸೋಂಕು ತಗುಲಿದ್ದು, 23 ಸೋಂಕಿತರು ಮೃತಪಟ್ಟಿದ್ದಾರೆ. ಉಳಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ 832, ಮೈಸೂರು 594, ಹಾಸನ 391, ಬೆಳಗಾವಿ 222, ಮಂಡ್ಯ 208, ಶಿವಮೊಗ್ಗ 223 ಪ್ರಕರಣಗಳು ವರದಿಯಾಗಿವೆ. 11 ಜಿಲ್ಲೆಗಳಲ್ಲಿ 200ಕ್ಕಿಂತ ಕಡಿಮೆ, 12 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಮಂದಿಗೆ ಸೋಂಕು ತಗುಲಿದೆ. ಮೈಸೂರು 17, ದಕ್ಷಿಣ ಕನ್ನಡ 16, ದಾವಣಗೆರೆ 11, ಬಳ್ಳಾರಿ ಜಿಲ್ಲೆಗಳಲ್ಲಿ (10 ಸಾವು) ಹೆಚ್ಚು ಸಾವು ವರದಿಯಾಗಿದೆ.