ಶೀಘ್ರ ರಾಜ್ಯಕ್ಕೆ ಮೊದಲ ನಮೋ ಭಾರತ್‌ ರ್‍ಯಾಪಿಡ್‌ ರೈಲು: ಅಶ್ವಿನ್ ವೈಷ್ಣವ್ ಭರವಸೆ

By Kannadaprabha News  |  First Published Oct 6, 2024, 6:29 AM IST

ರಾಜಧಾನಿ ಬೆಂಗಳೂರಿಗೆ ಸುತ್ತಲಿನ ಜಿಲ್ಲೆಗಳ ಉದ್ಯೋಗಿಗಳ ಸುಗಮ ಸಂಚಾರಕ್ಕೆ ಹಾಗೂ ಇಂಟರ್ ಸಿಟಿ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಬೆಂಗಳೂರು- ಮೈಸೂರು ಹಾಗೂ ಬೆಂಗಳೂರು-ತುಮಕೂರು ನಡುವೆ ಶೀಘ್ರ ‘ನಮೋ ಭಾರತ್ ರ್‍ಯಾಪಿಡ್‌ ರೈಲು’ ಸಂಚಾರ ಆರಂಭ ಆಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ. 
 


ಬೆಂಗಳೂರು (ಅ.06): ರಾಜಧಾನಿ ಬೆಂಗಳೂರಿಗೆ ಸುತ್ತಲಿನ ಜಿಲ್ಲೆಗಳ ಉದ್ಯೋಗಿಗಳ ಸುಗಮ ಸಂಚಾರಕ್ಕೆ ಹಾಗೂ ಇಂಟರ್ ಸಿಟಿ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಬೆಂಗಳೂರು- ಮೈಸೂರು ಹಾಗೂ ಬೆಂಗಳೂರು-ತುಮಕೂರು ನಡುವೆ ಶೀಘ್ರ ‘ನಮೋ ಭಾರತ್ ರ್‍ಯಾಪಿಡ್‌ ರೈಲು’ ಸಂಚಾರ ಆರಂಭ ಆಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ. ಇದು ರಾಜ್ಯದ ಮೊದಲ ರ್‍ಯಾಪಿಡ್‌ ರೈಲು ಆಗಲಿದೆ. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಂಡೋ ಟ್ರೇಲಿಂಗ್ ತಪಾಸಣೆ ನಡೆಸಿ ಬಳಿಕ ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಇತ್ತೀಚೆಗೆ ದೇಶದ ಮೊದಲ ರ್‍ಯಾಪಿಡ್ ರೈಲು (ವಂದೇ ಮೆಟ್ರೋ) ಗುಜರಾತ್‌ನ ಅಹ್ಮದಾಬಾದ್‌-ಭುಜ್‌ ನಡುವೆ ಆರಂಭವಾಗಿತ್ತು. ಅಂತರ್‌ ನಗರಗಳ ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ಈ ರೈಲಿನ ಅಗತ್ಯವಿದೆ. ಹೀಗಾಗಿ ರಾಜ್ಯದಲ್ಲಿ ಮೊದಲ ಹಂತದಲ್ಲಿ ಈ ರೈಲನ್ನು ಬೆಂಗಳೂರಿಂದ ತುಮಕೂರು, ಮೈಸೂರಿಗೆ ಆರಂಭ ಮಾಡಲಾಗುವುದು ಎಂದರು.

Tap to resize

Latest Videos

ಜಾತಿ ಗಣತಿ ವರದಿ ಕುರಿತು ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ವಂದೇ ಭಾರತ್‌ ಶೇ.100: ರಾಜ್ಯದಲ್ಲಿ ವಂದೇ ಭಾರತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಹುತೇಕ ರೈಲುಗಳು ಶೇ.100 ಪ್ರಯಾಣಿಕರಿಂದ ತುಂಬಿವೆ. ಬೆಂಗಳೂರು-ಮಧುರೈ: ಚೆನ್ನೈ ರೈಲು ಶೇ.120, ಕಾಚಿಗುಡ ಶೇ.106, ಕೋಯಿಮತ್ತೂರು ಶೇ.90, ಹೊಸದಾದ ಹುಬ್ಬಳ್ಳಿ-ಪುಣೆ ರೈಲು ಶೇ.65 ಹಾಗೂ ಬೆಂಗಳೂರು ಧಾರವಾಡ ವಂದೇ ಭಾರತ್‌ ರೈಲು ಶೇ.86 ರಷ್ಟು ಪ್ರಯಾಣಿಕರಿಂದ ಭರ್ತಿ ಆಗುತ್ತಿವೆ ಎಂದು ಸಚಿವರು ತಿಳಿಸಿದರು.

ಶೀಘ್ರವೇ ಅಮೃತ್ ಭಾರತ್ 2.0 ನಿರ್ಮಾಣ: ಅಮೃತ್ ಭಾರತ್‌ ರೈಲು ಸದ್ಯ ಬೆಂಗಳೂರು - ಮಾಲ್ಡಾ ನಡುವೆ ಸಂಚರಿಸುತ್ತಿದ್ದು, ಇದು ಕೂಡ ಹೆಚ್ಚಿನ ಪ್ರಯಾಣಿಕರಿಂದ ಭರ್ತಿಯಾಗುತ್ತಿದೆ. ರೈಲ್ವೆ ಇಲಾಖೆ ಶೀಘ್ರದಲ್ಲೇ ಅಮೃತ್ ಭಾರತ್ ರೈಲುಗಳ ಆವೃತ್ತಿ 2.O ನ ದೊಡ್ಡ ಪ್ರಮಾಣದ ಉತ್ಪಾದನೆ ಆರಂಭಿಸಲಿದೆ. ಈಗಿನ ರೈಲಿಗಿಂತ ಹೆಚ್ಚಿನ ಸುಧಾರಣೆಗಳೊಂದಿಗೆ ರೈಲನ್ನು ನಿರ್ಮಿಸಲಾಗುವುದು ಎಂದು ಹೇಳಿದರು. ಬಿಇಎಂಎಲ್ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್ ಸ್ಲೀಪರ್ ರೈಲನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದ್ದು, ಶೀಘ್ರವೇ ಅದರ ಸಂಚಾರ ಆರಂಭವಾಗಲಿದೆ ಎಂದರು.ಬಾಕ್ಸ್...

ವಿಶ್ವ ದರ್ಜೆಯ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ: ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿ ₹480 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ವಿಶ್ವ ದರ್ಜೆಯ ವ್ಯವಸ್ಥೆ ಇಲ್ಲಿರಲಿದೆ. 28,023 ಚದರ ಅಡಿಯಲ್ಲಿ ನಿಲ್ದಾಣ ತಲೆ ಎತ್ತಲಿದೆ. ನೆಲಮಹಡಿಯಲ್ಲಿ ಏಕಕಾಲಕ್ಕೆ 250 ದ್ವಿಚಕ್ರ ಹಾಗೂ 250 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು. ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ ಎಂದು ಅಶ್ವಿನ್ ವೈಷ್ಣವ್ ತಿಳಿಸಿದರು.

ಕೆಐಎ ಹತ್ತಿರವೇ ರೈಲ್ವೆ ನಿಲ್ದಾಣ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವೇ ರೈಲ್ವೆ ನಿಲ್ದಾಣವನ್ನು ನಿರ್ಮಿಸುವ ಸಂಬಂಧ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುವುದು. ನಗರ ಹಾಗೂ ವಿಮಾನ ನಿಲ್ದಾಣ ನಡುವೆ ಹೋಗಿ ಬರುವವರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ, ಸಂಸದ ಪಿ.ಸಿ.ಮೋಹನ್, ನೈಋತ್ಯ ರೈಲ್ವೆ ಪ್ರದಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ, ಮುಖ್ಯ ಆಡಳಿತಾಧಿಕಾರಿ ಅಜಯ್ ಶರ್ಮಾ, ವಿಭಾಗಗಳ ಪ್ರಧಾನ ಮುಖ್ಯಸ್ಥ ಯೋಗೀಶ್ ಮೋಹನ್, ಅಧಿಕಾರಿಗಳು ಇದ್ದರು.

2 ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟ: ಹರ್‍ಯಾಣದಲ್ಲಿ ಕಾಂಗ್ರೆಸ್‌, ಕಾಶ್ಮೀರದಲ್ಲಿ ಅತಂತ್ರ?

ಡಿಸೆಂಬರ್‌ಗೆ ವರ್ತುಲ ರೈಲು ಡಿಪಿಆರ್: ಬೆಂಗಳೂರಿನ ಹೊರವಲಯದಲ್ಲಿ ₹23 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದ ಭಾರತ ಅತೀ ದೊಡ್ಡದಾದ 287 ಕಿ.ಮೀ. ವರ್ತುಲ ರೈಲ್ವೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯಕ್ಕೆ ಯೋಜನೆಯ ಡಿಪಿಆರ್ ಪೂರ್ಣಗೊಳ್ಳಲಿದೆ. ಇದು ಬೆಂಗಳೂರು ಉಪನಗರ ರೈಲು ಯೋಜನೆ ಮತ್ತು ನಮ್ಮ ಮೆಟ್ರೋಗೆ ಪೂರಕವಾಗಿರಲಿದ್ದು, ನಗರದ ಸಂಚಾರ ದಟ್ಟಣೆ ನಿರ್ವಹಿಸಲುವಲ್ಲಿ ಗೇಮ್‌ ಚೇಂಜರ್‌ ಆಗಲಿದೆ ಎಂದು ಅಶ್ವಿನ್‌ ವೈಷ್ಣವ್‌ ಹೇಳಿದರು. 

click me!