ಮೂರು ವರ್ಷಗಳ ಹಿಂದಷ್ಟೇ ಭಾರೀ ಕಾಡ್ಗಿಚ್ಚಿಯಿಂದ ನಲುಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಮತ್ತೊಂದು ಬೆಂಕಿಯ ರುದ್ರನರ್ತನಕ್ಕೆ ಸಾಕ್ಷಿಯಾಗುತ್ತಿದೆ.
ಅಪರೂಪದ ಜೀವ ಪ್ರಭೇದಗಳ ಆವಾಸ ಸ್ಥಾನವಾಗಿರುವ ಈ ದಟ್ಟ ಕಾನನವನ್ನು ಮೂರು ದಿನಗಳಿಂದ ಆವರಿಸಿಕೊಂಡಿರುವ ಬೆಂಕಿ ಕೆನ್ನಾಲಗೆ ದಿನೇ ದಿನೆ ವಿಸ್ತರಿಸುತ್ತಿದೆ.
ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಕ್ಯಾಂಪಸ್ ಸುತ್ತಮುತ್ತಲಿನ ಸಾವಿರಾರು ಎಕರೆ ಪ್ರದೇಶದ ಮರ, ಗಿಡಗಳು ಸುಟ್ಟು ಕರಕಲಾಗಿವೆ.
ಪರಿಸ್ಥಿತಿ ಹೀಗೇ ಮುಂದುವರಿದರೆ ನೆರೆಯ ಕೇರಳ ರಾಜ್ಯದ ಕಾಡಿಗೂ ಬೆಂಕಿಯ ಕೆನ್ನಾಲಗೆ ವ್ಯಾಪಿಸುವ ಆತಂಕ ಶುರುವಾಗಿದೆ.
ಏತನ್ಮಧ್ಯೆ, ಕಾಡ್ಗಿಚ್ಚಿನಿಂದಾಗಿ ಬಂಡೀಪುರದಲ್ಲಿ ಒಂದು ವಾರಗಳ ಕಾಲ ಸಫಾರಿ ಬಂದ್ ಮಾಡಲಾಗಿದೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಬೆಂಕಿಯ ರುದ್ರನರ್ತನ ಮೈಸೂರು-ಊಟಿ ಹೆದ್ದಾರಿಯ ಬದಿಯಲ್ಲಿರುವ ಗೋಪಾಲಸ್ವಾಮಿ ಬೆಟ್ಟದ ವಲಯ ಕಚೇರಿಯನ್ನು ದಾಟಿ ಮುಂದೆ ಸಾಗಿದೆ.
ಬೆಂಕಿ ಶನಿವಾರ ಬೆಳಗ್ಗೆಯೇ ಕಾಣಿಸಿಕೊಂಡಿದೆ. ಆದರೆ ಆ ಪ್ರದೇಶ ನಮ್ಮ ವ್ಯಾಪ್ತಿಗೆ ಸೇರಿದ್ದಲ್ಲ ಎಂದು ಅಧಿಕಾರಿಗಳು ಕೈ ಕಟ್ಟಿ ಕುಳಿತದ್ದೇ ಈ ಅನಾಹುತಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಬೇಸಿಗೆ ಆರಂಭಕ್ಕೂ ಮುನ್ನ ವಿಶ್ವ ಪ್ರಸಿದ್ಧ ನಂದಿಗಿರಿಧಾಮ ವ್ಯಾಪ್ತಿಗೆ ಸೇರಿದ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಬೆಟ್ಟದ ಮೇಲೆ ವ್ಯಾಪಿಸುವ ಭೀತಿ ಎದುರಾಗಿದೆ.
ಬಂಡೀಪುರ ಮಾತ್ರವಲ್ಲದೆ ಪಕ್ಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು ೩೫ಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಿದೆ.
ಬಂಡೀಪುರ ಅಭಯಾರಣ್ಯ ಪ್ರದೇಶದಲ್ಲಿ ಹಿಂದೆ ಕಾಣಿಸಿಕೊಂಡಿರುವ ಬೆಂಕಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
ಸಫಾರಿಗಾಗಿ ಪ್ರತಿ ನಿತ್ಯ ಬಂಡೀಪುರಕ್ಕೆ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದು, ಇದರಿಂದ ಲಕ್ಷಾಂತರ ರು. ಆದಾಯ ಸಂದಾಯವಾಗುತ್ತಿತ್ತು. ಆದರೆ ಇದೀಗ ಕಾಡ್ಗಿಚ್ಚಿನಿಂದ ಬಂಡಿಪುರದ 5 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಿದೆ.
ಅರಣ್ಯ ಇಲಾಖೆ, ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಹರಸಾಹಸದಿಂದ ಸದ್ಯ ಈ ಪ್ರದೇಶದಲ್ಲಿ ಬೆಂಕಿ ಹತೋಟಿಗೆ ಬಂದಿದೆ