BBMP: ಪಾಲಿಕೆ ಲ್ಯಾಬ್‌ಗೆ ಬೆಂಕಿ: ದೂರು ಕೊಟ್ಟಅಧಿಕಾರಿಗೇ ಪೊಲೀಸರಿಂದ ನೋಟಿಸ್‌!

Published : Aug 15, 2023, 04:42 AM IST
BBMP: ಪಾಲಿಕೆ ಲ್ಯಾಬ್‌ಗೆ ಬೆಂಕಿ: ದೂರು ಕೊಟ್ಟಅಧಿಕಾರಿಗೇ ಪೊಲೀಸರಿಂದ ನೋಟಿಸ್‌!

ಸಾರಾಂಶ

ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿನ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿನ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರಹ್ಲಾದ್‌ ಅವರಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

ಬೆಂಗಳೂರು (ಆ.15) :  ಬಿಬಿಎಂಪಿಯ ಕೇಂದ್ರ ಕಚೇರಿಯ ಆವರಣದಲ್ಲಿನ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿನ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರಹ್ಲಾದ್‌ ಅವರಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ.

ಕಳೆದ ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಗುಣ ನಿಯಂತ್ರಣ ಪ್ರಯೋಗಾಲಯಲ್ಲಿ ಬೆಂಕಿ ಅವಘಡ ಸಂಭವಿಸಿ ವಿಭಾಗದ ಮುಖ್ಯ ಎಂಜಿನಿಯರ್‌ ಸೇರಿದಂತೆ ಒಂಬತ್ತು ಮಂದಿ ಬೆಂಕಿಯಿಂದ ಸುಟ್ಟು ಗಾಯಗೊಂಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಗೇಟ್‌ ಪೊಲೀಸರು ಪ್ರಹ್ಲಾದ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ನಾನೇ ದೂರು ನೀಡಿದ್ದೇನೆ, ಆದರೆ, ತಮಗೇ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಕಾನೂನು ಕೋಶದ ತಜ್ಞರಿಂದ ಸಲಹೆ ಪಡೆಯಲಾಗುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ, ಪೊಲೀಸರ ವರ್ತನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಪೊಲೀಸರು ನೀಡಿರುವ ನೋಟಿಸ್‌ ತಮಗೆ ತಲುಪಿಲ್ಲ, ಕಚೇರಿಗೂ ಬಂದಿಲ್ಲ ಎಂದರು.

ಅಗ್ನಿದುರಂತವಾದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!

ಅವಘಡದಲ್ಲಿ ಗಾಯಗೊಂಡ ಅಧಿಕಾರಿ ಸಿಬ್ಬಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ನೋಟಿಸ್‌ನಲ್ಲಿ ಏನಿದೆ?

ಬೆಂಕಿ ಅವಘಡ ಸಂಭವಿಸಿದ ಗುಣ ನಿಯಂತ್ರಣ ಕೊಠಡಿಯಲ್ಲಿ ಏನೆಲ್ಲಾ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಯಾವ್ಯಾವ ಮುನ್ನೆಚ್ಚರಿಕೆ ಕ್ರಮ ಇರಬೇಕಾಗಿತ್ತು, ಯಾವ ಹಂತದ ಅಧಿಕಾರಿಗಳು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸುತ್ತಿದ್ದಾರೆ. ಅವರ ವಿದ್ಯಾರ್ಹತೆ ಏನು, ತಂತ್ರಜ್ಞರೇ, ರಾಸಾಯನಿಕ ತಜ್ಞರೇ, ಯಾವೆಲ್ಲಾ ವಸ್ತು ಮತ್ತು ಕಾಮಗಾರಿಯ ಪರೀಕ್ಷೆ ನಡೆಸಲಾಗುತ್ತದೆ ಎಂಬ ಸಮಗ್ರ ಮಾಹಿತಿಯನ್ನು ದಾಖಲೆ ಸಮೇತ ನೀಡಿ ತನಿಖೆಗೆ ಸಹಕರಿಸುವಂತೆ ಹಲಸೂರು ಗೇಟ್‌ ಪೊಲೀಸರು ಪ್ರಹ್ಲಾದ್‌ ಅವರಿಗೆ ನೋಟಿಸ್‌ ನೀಡಿದ್ದಾರೆ.

ಗಾಯಗೊಂಡವರು ಚೇತರಿಕೆ

ಗಾಯಗೊಂಡ ಒಂಬತ್ತು ಮಂದಿ ಪೈಕಿ ಆರು ಮಂದಿಯ ಆರೋಗ್ಯದಲ್ಲಿ ಸುಧಾರಿಸಿದ್ದು, ನಾಲ್ಕೈದು ದಿನದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಉಳಿದ ಮೂರು ಮಂದಿಯ ಆರೋಗ್ಯ ಸ್ಥಿತಿ ತುಂಬಾ ಗಂಭೀರವಾಗಿತ್ತು. ಸೋಮವಾರ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಬಿಬಿಎಂಪಿ: ಮುಂದುವರಿದ ರಾಜ್ಯ ಗುತ್ತಿಗೆದಾರರ ಕಮಿಷನ್‌ ಗದ್ದಲ

ಲ್ಯಾಬ್‌ ಸ್ಥಳಾಂತರ?

ಬೆಂಕಿ ಅವಘಡ ಸಂಭವಿಸಿದ ಗುಣ ನಿಯಂತ್ರಣ ಲ್ಯಾಬ್‌ ಸ್ಥಳಾಂತರ ಮಾಡಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಸೂಚಿಸಿರುವ ಹಿನ್ನೆಲೆಯಲ್ಲಿ ಕೆಂಪೇಗೌಡ ಪೌರ ಸಭಾಂಗಣದಲ್ಲಿರುವ ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಿ ಅಲ್ಲಿಗೆ ಸ್ಥಳಾಂತರ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ