ಡಿಕೆಶಿ ರೋಡ್‌ ಶೋನಲ್ಲಿದ್ದ ‘ಕೈ’ ಕಾರ್ಯಕರ್ತರ ವಿರುದ್ಧ FIR

By Kannadaprabha NewsFirst Published Oct 30, 2019, 8:41 AM IST
Highlights

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ರೋಡ್‌ ಶೋ ವೇಳೆ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹದಿನೈದು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು(ಅ.30): ದೆಹಲಿಯಿಂದ ನಗರಕ್ಕೆ ಬಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ರೋಡ್‌ ಶೋ ವೇಳೆ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಹದಿನೈದು ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಚಿಕ್ಕಜಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈಶಾನ್ಯ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್‌ ಗುಳೇದ್‌ ಅವರ ಗನ್‌ಮ್ಯಾನ್‌ ಭರಮಪ್ಪ ಸುನಾಗರ್‌ ಕೊಟ್ಟದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಂಡು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕೆಂಪು ಈರುಳ್ಳಿ ರಫ್ತು ನಿಷೇಧ ತೆರವು: ಕೇಂದ್ರಕ್ಕೆ ಥ್ಯಾಂಕ್ಸ್ ಎಂದ್ರು ಡಿಸಿಎಂ

ಮಾಜಿ ಸಚಿವ ಶಿವಕುಮಾರ್‌ ಅ.26ರಂದು ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಶಿವಕುಮಾರ್‌ರನ್ನು ಸ್ವಾಗತಿಸಲು ರಸ್ತೆಯುದ್ದಕ್ಕೂ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಈಶಾನ್ಯ ವಿಭಾಗದಲ್ಲಿ ಮುಂಜಾಗೃತ ಕ್ರಮವಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಶಿವಕುಮಾರ್‌ ಅವರ ವಾಹನ ಮಧ್ಯಾಹ್ನ ಸುಮಾರು 3.30ರ ಸುಮಾರಿಗೆ ಸರ್ಕಾರಿ ವಾಹನದಲ್ಲಿ ಸಾದಹಳ್ಳಿ ಟೋಲ್‌ ಬಳಿ ಬಂದಾಗ, ಶಿವಕುಮಾರ್‌ರನ್ನು ಸ್ವಾಗತಿಸಲು ಸುಮಾರು 15ಕ್ಕೂ ಹೆಚ್ಚು ಮಂದಿ ಗುಂಪು ಕಟ್ಟಿಕೊಂಡು, ಕಾಂಗ್ರೆಸ್‌ ಬಾವುಟಗಳನ್ನು ಹಿಡಿದು ನಿಂತಿತ್ತು. ಇದರಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿ, ಸಾರ್ವಜನಿಕರಿಗೆ ತೊಂದರೆಯಾಗಿತ್ತು.

ಉಗ್ರರು ಸಿಕ್ಕ ರಾಮನಗರದಲ್ಲೀಗ ಬಾಂಗ್ಲಾತಂಕ!

ಈ ವೇಳೆ ಕರ್ತವ್ಯ ನಿರತ ಕಾನ್ಸ್‌ಟೇಬಲ್‌ ಭರಮಪ್ಪ, ಮಧ್ಯಪ್ರವೇಶಿಸಿ ರಸ್ತೆಯಿಂದ ಪಕ್ಕಕ್ಕೆ ಹೋಗುವಂತೆ ಗುಂಪಿನಲ್ಲಿದ್ದವರಿಗೆ ಸೂಚಿಸಿದ್ದರು. ಈ ವೇಳೆ ಗುಂಪು ನೀನು ಯಾರು ಕೇಳುವುದಕ್ಕೆ ನಾವು ಯಾರು ಗೊತ್ತ ನಿನಗೆ ಎಂದು ನಿಂದಿಸಿ, ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ಭರಮಪ್ಪ ಕೊಟ್ಟದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಲ್ಲಿದ್ದವರ ವಿಡಿಯೋ ಮಾಡಲಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.

ಇನ್ನು ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ನಾಯಕರಿದ್ದ ನಾಮಫಲಕಗಳನ್ನು ಹಾಕಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ವಿರುದ್ಧ ದೂರು ದಾಖಲಾಗಿದೆ. ಟೋಲ್‌ ಪ್ಲಾಜಾ-1ರಲ್ಲಿ ಭಾರತಿನಗರ ಗೇಟ್‌ವರೆಗೆ ಕಾಂಗ್ರೆಸ್‌ ನಾಯಕರ ಫೋಟೋಗಳಿರುವ ಫ್ಲೆಕ್ಸ್‌ಗಳನ್ನು ಹಾಕಲಾಗಿತ್ತು. ಸರ್ಕಾರ ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್‌ ಮತ್ತು ಬ್ಯಾನರ್‌ ಕಟ್ಟದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಅಕ್ರಮವಾಗಿ ಫ್ಲೆಕ್ಸ್‌ಗಳನ್ನು ಕಟ್ಟಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೆಡ್‌ಕಾನ್ಸ್‌ಟೇಬಲ್‌ ರಾಜು ಎಂಬುವರು ದೂರು ನೀಡಿದ್ದಾರೆ.

click me!