ಉಗ್ರರು ಸಿಕ್ಕ ರಾಮನಗರದಲ್ಲೀಗ ಬಾಂಗ್ಲಾತಂಕ!
ಅಕ್ರಮ ವಲಸಿಗರ ವಿರುದ್ಧ ಕೇಂದ್ರ ಸರಕಾರ ಸಮರ ಸಾರಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಅಕ್ರಮ ವಲಿಸಿಗರ ಬಗ್ಗೆ ಸರಕಾರದ ಗಮನ ಎಳೆಯಲು ಯತ್ನಿಸುತ್ತಿದ್ದು, ಎಲ್ಲೆಡೆ ಅನ್ಯ ದೇಶೀಯರು ಇರುವುದು ಪತ್ತೆಯಾಗುತ್ತಿದೆ. ಕೇವಲ ಬೆಂಗಳೂರು ಮಾತ್ರವಲ್ಲ, ನೆರೆ ರಾಮನಗರದಲ್ಲಿಯೂ ಉಗ್ರರು ಪತ್ತೆಯಾಗಿದ್ದಾರೆ.
ಎಂ.ಅಫ್ರೋಜ್ ಖಾನ್
ರಾಮನಗರ (ಅ.30): ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದೀನ್ ಬಾಂಗ್ಲಾದೇಶ್ (ಜೆಎಂಬಿ) ಸಂಘಟನೆಗೆ ಸೇರಿದ ಉಗ್ರರು ಸೆರೆ ಸಿಕ್ಕ ನಂತರ ರೇಷ್ಮೆ ನಗರಿ ರಾಮನಗರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವ ಬಗ್ಗೆ ಸ್ಥಳೀಯರಿಗೆ ಆತಂಕ ಹೆಚ್ಚಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿರುವ ರಾಮನಗರ ಹಾಗೂ ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು. ಶಂಕಿತ ಉಗ್ರರಂತೆಯೇ ಅಕ್ರಮ ಬಾಂಗ್ಲಾ ವಲಸಿಗರು ಸಹ ಸುಲಭ ಮಾರ್ಗದಲ್ಲಿಯೇ ಆಗಮಿಸಿ ಸುತ್ತಮುತ್ತಲ ಪ್ರದೇಶದಲ್ಲಿ ನೆಲೆಸಿರುವ ಶಂಕೆ ಬಲವಾಗಿದೆ.
ಕಳೆದ 2018ರ ಆಗಸ್ಟ್‌ನಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರ ಮುನೀರ್ ಶೇಖ್ ವಾಸವಿದ್ದ ರಾಮನಗರದ ಟ್ರೂಪ್‌ಲೈನ್ ಬಡಾವಣೆ, ಈತನ ಅತ್ತೆ-ಮಾವ ಹಾಗೂ ಸಹಚರ ಹಬೀಬುರ್ ರೆಹಮಾನ್ ನೆಲೆಸಿದ್ದ ಟಿಪ್ಪು ಬಡಾವಣೆ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳಲ್ಲಿ ಮನೆಗಳು ಖಾಲಿ ಇದ್ದರೂ ಅವುಗಳನ್ನು ಬಾಡಿಗೆಗೆ ನೀಡಲು ಮಾಲಿಕರು ಧೈರ್ಯ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ.
ಕಡಿಮೆ ಕೂಲಿಗೆ ದುಡಿಯುವ ವಲಸಿಗರು:
ಜಿಲ್ಲೆಯ ಜನವಸತಿ ಪ್ರದೇಶಗಳಲ್ಲಿ ಅದರಲ್ಲೂ ಮುಸ್ಲಿಂ ಬಾಹುಳ್ಯವುಳ್ಳ ಸ್ಥಳಗಳಲ್ಲಿ ಬಟ್ಟೆವ್ಯಾಪಾರಿ, ಕೂಲಿಕಾರರು, ಕಾರ್ಮಿಕರ ಸೋಗಿನಲ್ಲಿ ಬರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪರ ಊರು, ಹೊರ ರಾಜ್ಯ ಮಾತ್ರವಲ್ಲದೆ ನೆರೆಯ ದೇಶಗಳಿಂದಲೂ ವಲಸೆ ಬಂದು ನೆಲೆಸಿದ್ದಾರೆ. ಎಷ್ಟುವರ್ಷಗಳಿಂದ ನೆಲೆಸಿದ್ದಾರೆ? ಅವರ ವೃತ್ತಿ, ಹಿನ್ನೆಲೆ ಏನೆಂಬುದು ಮಾತ್ರ ಯಾರಿಗೂ ತಿಳಿದಿಲ್ಲ.
ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಸೇರಿದಂತೆ ಇನ್ನಿತರ ರಾಜ್ಯಗಳ ನಾಗರಿಕರು ಎಂದು ರಾಮನಗರಕ್ಕೆ ಬರುವ ವಲಸಿಗರು ಹೇಳಿಕೊಳ್ಳುತ್ತಾರೆ. ಆದರೆ ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳನ್ನು ಅವರು ಮಾತನಾಡುವ ಶೈಲಿಯ ಮೂಲಕ ಅವರ ಮೂಲ ಅರಿಯುವುದು ಕಷ್ಟವಾಗಿದೆ.
ಕಟ್ಟಡ ಕಾರ್ಮಿಕರಾಗಿ, ಇಟ್ಟಿಗೆ ಕಾರ್ಖಾನೆ, ನೂಲು ಬಿಚ್ಚಣಿಕೆ ಕೇಂದ್ರಗಳು ಸೇರಿದಂತೆ ಕಡಿಮೆ ಕೂಲಿಗೆ ಕಾರ್ಮಿಕರನ್ನು ನಿರೀಕ್ಷಿಸುವ ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಮಿಕರು ನಿಗದಿತ ಪ್ರಮಾಣದ ವೇತನ, ಕೂಲಿಯನ್ನು ಕೇಳುತ್ತಾರೆ. ಆದರೆ, ಅಕ್ರಮ ವಲಸಿಗರು ಅತ್ಯಂತ ಕಡಿಮೆ ಕೂಲಿಗೆ ಕೆಲಸಕ್ಕೆ ಬರುತ್ತಾರೆ. ಕೆಲವು ವಲಸಿಗರಿಗೆ ಕನಿಷ್ಠ ಕೂಲಿ ಮೊತ್ತದ ಯಾವ ಜ್ಞಾನವೂ ಇರುವುದಿಲ್ಲ.
ಕಾರ್ಖಾನೆ ಮಾಲಿಕರು, ಮೇಸ್ತಿ್ರಗಳಿಗೆ ಹಣ ಉಳಿತಾಯಕ್ಕೆ ಕಮ್ಮಿ ಕೂಲಿ ನಿರೀಕ್ಷಿಸುವ ಕಾರ್ಮಿಕರೇ ಬೇಕು. ವಲಸಿಗರಿಗೆ ಕೆಲಸ ಮತ್ತು ಉಳಿದುಕೊಳ್ಳಲು ಇಲ್ಲಿ ಜಾಗ ಬೇಕು. ಈ ಎರಡು ಅವಕಾಶಗಳು ಹೇರಳವಾಗಿರುವ ಕಾರಣ ಅಕ್ರಮ ವಲಸಿಗರು ಇಲ್ಲಿ ಬಂದು ನೆಲೆಸುವುದು ಹೆಚ್ಚುತ್ತಿದೆ.
ಕಾರ್ಖಾನೆ ಮಾಲಿಕರು ಅಥವಾ ಮೇಸ್ತ್ರಿಗಳೇ ವಲಸಿಗರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಪಡೆದುಕೊಂಡಿದ್ದಾರೆ. ವೋಟ್ ಸಿಗುತ್ತದೆ ಎಂಬ ಕಾರಣಕ್ಕೆ ಕೆಲ ರಾಜಕಾರಣಿಗಳು ಇವರಿಗೆ ಇಲ್ಲಿನ ದಾಖಲೆ ಕೊಡಿಸಲು ನೆರವಾಗಿದ್ದಾರೆ ಎಂಬ ಆರೋಪಗಳು ಇವೆ.
ಕರ್ನಾಟಕದ ಆಧಾರ್ ಇದ್ದರೆ ಮನೆ ಬಾಡಿಗೆಗೆ
ಬಟ್ಟೆವ್ಯಾಪಾರಿ ಸೋಗಿನಲ್ಲಿ ಬಂದಿದ್ದ ಶಂಕಿತ ಉಗ್ರ ಮುನೀರ್ ಶೇಖ್ ತನ್ನ ಆಧಾರ್ ಕಾರ್ಡ್ ನೀಡಿಯೇ ಮನೆ ಬಾಡಿಗೆಗೆ ಗಿಟ್ಟಿಸಿಕೊಂಡಿದ್ದ. ಆಧಾರ್ ಕಾರ್ಡ್‌ನಲ್ಲಿ ಮುನೀರ್ ಭಾವಚಿತ್ರ ಮತ್ತು ದೆಹಲಿ ವಿಳಾಸವಿತ್ತು. ಹೀಗಾಗಿ ಬಹುತೇಕ ಮನೆ ಮಾಲಿಕರು ಅಪರಿಚಿತರು ಮಾತ್ರವಲ್ಲ ಪರಿಚಿತರಿಗೂ ಮನೆಯನ್ನು ಬಾಡಿಗೆಗೆ ನೀಡಲು ನಿರಾಕರಿಸುತ್ತಿದ್ದಾರೆ. ಕೆಲವರು ಮಾತ್ರ ಕರ್ನಾಟಕದ ಆಧಾರ್ ಕಾರ್ಡ್ ಹೊಂದಿದವರಿಗೆ ಮನೆ ಬಾಡಿಗೆಗೆ ನೀಡುತ್ತಿದ್ದಾರೆ.
ಶಂಕಿತ ಉಗ್ರರು ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದು ಹಾಗೂ ಕೆಲ ದಿನಗಳ ಹಿಂದಷ್ಟೇ ಶಂಕಿತ ಉಗ್ರ ಹಬೀಬುರ್ ರೆಹಮಾನ್ ಸುಳಿವಿನ ಮೇರೆಗೆ ಸುಧಾರಿತ ಸ್ಫೋಟಕಗಳನ್ನು ವಶ ಪಡಿಸಿಕೊಂಡ ಆತಂಕಕಾರಿ ಘಟನೆ ನಡೆದ ನಂತರ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ಬಾಡಿಗೆ ಮನೆಗಳಲ್ಲಿ ವಾಸವಿರುವವರ ಸಂಪೂರ್ಣ ಮಾಹಿತಿ ಕಲೆಹಾಕುವ ಕಾರ್ಯ ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ. ಬೀಟ್ ಪೊಲೀಸರ ಮೂಲಕ ಪ್ರತಿ ವಾರ್ಡಿನಲ್ಲಿ ವಾಸವಾಗಿರುವ ವಲಸಿಗರ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ರಾಮನಗರ ಮಾತ್ರವಲ್ಲದೆ ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿಯಲ್ಲಿಯೂ ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ.
ಅಲ್ಲದೆ, ಮನೆ ಮಾಲಿಕರು ಸ್ವಯಂಪ್ರೇರಿತರಾಗಿ ಬಾಡಿಗೆದಾರರ ವಿವರಗಳನ್ನು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸಬಹುದು. ನಿಗದಿತ ಅರ್ಜಿಯಲ್ಲಿ ಮನೆ ಮಾಲಿಕರ ಮಾಹಿತಿ ಜೊತೆಗೆ ಬಾಡಿಗೆದಾರರ ವಿವರ, ಭಾವಚಿತ್ರ, ಗುರುತಿನ ದಾಖಲೆ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಕ್ರಮ ವಲಸಿಗರ ಬಗ್ಗೆ ಸಾಕ್ಷ್ಯ ಕೊಟ್ಟರೂ ನಿರ್ಲಕ್ಷ್ಯ
ಆ ಮೂವರು ಉಗ್ರರು ಯಾರು?
2013ರ ಜುಲೈ 7ರಂದು ಬಿಹಾರದ ಪಟನಾ ಜಿಲ್ಲೆಯ ಬೋಧಗಯಾದ ಬುದ್ಧ ಮಂದಿರ ಆವರಣ ಹಾಗೂ 2014ರಲ್ಲಿ ಪಶ್ಚಿಮ ಬಂಗಾಳದ ಬರ್ಧಮಾನ್‌ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಉಗ್ರರಾದ ಮುನೀರ್ ಶೇಖ್ ಹಾಗೂ ಈತನ ಸಹಚರರಾದ ಹಸನ್ ಮತ್ತು ಹಬೀಬುರ್ ರೆಹಮಾನ್ ಪ್ರಮುಖ ರೂವಾರಿಗಳು.
ಈ ಬಾಂಬ್ ಸ್ಫೋಟ ಪ್ರಕರಣದ ನಂತರ ಇವರೆಲ್ಲರೂ ತಲೆ ಮರೆಸಿಕೊಂಡಿದ್ದರು. 2017ರಲ್ಲಿ ಕರ್ನಾಟಕಕ್ಕೆ ಬಂದಿದ್ದ ಆರೋಪಿಗಳು ಆರಂಭದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳು, ಕೋಲಾರ, ಮಾಲೂರಿನಲ್ಲಿ ಕೆಲಕಾಲ ನೆಲೆಸಿದ್ದರು. ಆನಂತರ ಎಲ್ಲರೂ ರಾಮನಗರದಲ್ಲಿ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿಯೇ ವಾಸವಾಗಿದ್ದರು.
ಬೆಂಗಳೂರಲ್ಲಿ ಬಾಂಗ್ಲಾ ವಲಸಿಗರ ಬಂಧನ
ಬಟ್ಟೆವ್ಯಾಪಾರಿ ಸೋಗಿನಲ್ಲಿ ಬಂದಿದ್ದ ಮುನೀರ್ ಶೇಖ್‌ನನ್ನು ಬಾಡಿಗೆ ಮನೆಯಲ್ಲಿ ವಶಕ್ಕೆ ಪಡೆದರೆ, ಈತನ ಸಹಚರನಾದ ಹಸನ್‌ನನ್ನು ರೈಲಿನಲ್ಲಿ ಹಾಗೂ ಹಬೀಬುರ್ ರೆಹಮಾನ್ನನ್ನು ದೊಡ್ಡಬಳ್ಳಾಪುರದಲ್ಲಿ ಬಂಧಿಸಲಾಗಿತ್ತು.
ಬಾಡಿಗೆದಾರರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸುವ ಮೂಲಕ ಕಾನೂನುಬಾಹಿರ, ಭಯೋತ್ಪಾದನೆಯಂಥ ಸಮಾಜಘಾತುಕ ಚಟುವಟಿಕೆಯನ್ನು ನಿಯಂತ್ರಿಸಲು ಸಾಧ್ಯ. ಮನೆ ಬಾಡಿಗೆ ಹಣಕ್ಕಿಂತ ಜೀವನ ಸುರಕ್ಷತೆ ಮಹತ್ವದ್ದಾಗಿದೆ. ಹೀಗಾಗಿ ಸಾರ್ವಜನಿಕರು ಸುರಕ್ಷತೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಬಾಡಿಗೆದಾರರ ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿವರೆಗೂ ಅಕ್ರಮ ಬಾಂಗ್ಲಾ ವಲಸಿಗರು ಯಾರೂ ಪತ್ತೆಯಾಗಿಲ್ಲ. ಮಾಹಿತಿ ಸಂಗ್ರಹ ಪೂರ್ಣಗೊಂಡ ನಂತರ ಅದನ್ನು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
- ಅನೂಪ್ ಎ.ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ