ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಸಹಕರಿಸದವರಿಗೆ ದಂಡ ವಿಧಿಸುವಂತಹ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸಲಹೆ ನೀಡಿದೆ. ಅಂತಿಮವಾಗಿ ಸರ್ಕಾರ, ಬಿಬಿಎಂಪಿ ಡೆಂಘೀ ಜ್ವರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಕೆಗೆ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು.
ಬೆಂಗಳೂರು(ಆ.08): ನಗರ ಸೇರಿದಂತೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಡೆಂಘೀ ಜ್ವರ ಪ್ರಕರಣಗಳ ನಿಯಂತ್ರಣಕ್ಕೆ ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು, ಡೆಂಘೀ ಜ್ವರಕ್ಕೆ ಕಾರಣವಾದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಸಹಕರಿಸದವರಿಗೆ ದಂಡ ವಿಧಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಸಲಹೆ ನೀಡಿದೆ. ಡೆಂಘೀ ಜ್ವರ ಹೆಚ್ಚಳದ ಬಗ್ಗೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಸಲಹೆ ನೀಡಿದೆ.
ಇದಕ್ಕೂ ಮುನ್ನ ಸರ್ಕಾರ ಮತ್ತು ಬಿಬಿಎಂಪಿ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ಡೆಂಘೀ ಜ್ವರ ಪ್ರಕರಣಗಳ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಪ್ರಮಾಣ ಪತ್ರ ಪರಿಶೀಲಿಸಿದ ನ್ಯಾಯಪೀಠ, ಡೆಂಘೀ ಜ್ವರಕ್ಕೆ ಚಿಕಿತ್ಸೆ ನೀಡಲು ಸರ್ಕಾರ ಮತ್ತು ಬಿಬಿಎಂಪಿ ಎಲ್ಲ ಕ್ರಮ ಕೈಗೊಂಡಿದೆ. ಆದರೆ ಅದನ್ನು ತಡೆಯಲು ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎನಿಸುತ್ತದೆ. ಹಾಗಾಗಿ ಡೆಂಘೀ ಮತ್ತಷ್ಟು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದಿತು.
undefined
ರಾಜ್ಯದಲ್ಲಿ 17 ಸಾವಿರ ಗಡಿ ದಾಟಿದ ಡೆಂಘೀ ಪ್ರಕರಣ: ಮಳೆ ಜೋರಾದರೂ ಇಳಿಯದ ಸೋಂಕು
ಬೆಂಗಳೂರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ 51 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ ಎಂಬ ಪಾಲಿಕೆಯ ವಾದವನ್ನು ಇದೇ ವೇಳೆ ತಿರಸ್ಕರಿಸಿದ ಹೈಕೋರ್ಟ್, ಇಷ್ಟು ಕಡಿಮೆ ಹಾಟ್‌ಸ್ಪಾಟ್‌ಗಳಿರಲು ಸಾಧ್ಯವಿಲ್ಲ. ಜನವಸತಿ, ವಾಣಿಜ್ಯ ಮತ್ತು ಕಟ್ಟಡ ನಿರ್ಮಾಣ ವಲಯ ಅತಿ ದೊಡ್ಡದಾಗಿದೆ. ಸೊಳ್ಳೆಗಳ ಉತ್ಪತ್ತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದವರಿಗೆ ದಂಡ ವಿಧಿಸುವ ಪ್ರಸ್ತಾವ ಇಲ್ಲ. ಆದ್ದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಸಹಕರಿಸದವರಿಗೆ ದಂಡ ವಿಧಿಸುವಂತಹ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸಲಹೆ ನೀಡಿದೆ. ಅಂತಿಮವಾಗಿ ಸರ್ಕಾರ, ಬಿಬಿಎಂಪಿ ಡೆಂಘೀ ಜ್ವರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಕೆಗೆ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿತು.