
ಬೆಂಗಳೂರು(ಏ.22): ಪಾದರಾಯನಪುರ ಘಟನೆಗೆ ನನ್ನ ವಿಷಾದವಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಘಟನೆ ಸಂಬಂಧ ತೀವ್ರ ಟೀಕೆ ಎದುರಿಸಿದ ಬೆನ್ನಲ್ಲೇ ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ತಮ್ಮನ್ನು ಉಳಿಸಲು ಬಂದವರ ಮೇಲೆಯೇ ಜನ ಹಲ್ಲೆಗೆ ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ. ನನ್ನ ಜನ ಈ ರೀತಿ ವರ್ತಿಸುತ್ತಾರೆ ಎಂದು ನಾನು ಎಂದೂ ಭಾವಿಸಿರಲಿಲ್ಲ. ಯಾರೋ ಒಂದಷ್ಟುಜನರ ದುರ್ವರ್ತನೆಗೆ ಇಡೀ ಸಮುದಾಯವನ್ನು ದೂರುವುದು ಸರಿಯಲ್ಲ. ಧರ್ಮಾತೀತವಾಗಿ ಕೊರೋನಾ ವಿರುದ್ಧ ದೇಶ ಹೋರಾಡುತ್ತಿದೆ. ಇದು ಒಂದಾಗಬೇಕಾದ ಸಮಯವೇ ಹೊರತು ಸಮಾಜ ಒಡೆಯುವ ಸಮಯವಲ್ಲ ಎಂದಿದ್ದಾರೆ.
ಪಾದರಾಯನಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ ಎಂಬುದನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಅಗತ್ಯ ಮುಂಜಾಗ್ರತೆ ವಹಿಸಲಾಗುತ್ತದೆ. ನನ್ನ ಕ್ಷೇತ್ರದ ಜನತೆ ಎಂದಿನಂತೆ ಮುಂದೆಯೂ ಸರ್ಕಾರ, ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುತ್ತಾರೆ.
ನನ್ನ ಜನ ಹೀಗೆ ಮಾಡಿದರು ಎಂದು ನಂಬಲಾಗುತ್ತಿಲ್ಲ: ಕೊನೆಗೂ ಜಮೀರ್ ವಿಷಾದ!
ಪಾದರಾಯನಪುರ ಘಟನೆಗೆ ನನ್ನ ವಿಷಾದವಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ನನ್ನ ಕ್ಷೇತ್ರವೂ ಸೇರಿದಂತೆ ಇಡೀ ರಾಜ್ಯದಲ್ಲಿ ಎಲ್ಲಿಯೂ ನಡೆಯದಂತೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಮನವಿ ಮಾಡಿದ್ದಾರೆ.
ನಾನು ಯಾರಿಗೂ ನನ್ನ ಅಪ್ಪಣೆ ಪಡೆದು ಚಾಮರಾಜಪೇಟೆಗೆ ಬರಬೇಕು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವುದೂ ಇಲ್ಲ. ನನ್ನ ಕ್ಷೇತ್ರವೂ ಇತರ ಕ್ಷೇತ್ರಗಳಂತೆ ಒಂದು ಸಾಮಾನ್ಯ ಕ್ಷೇತ್ರ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಕ್ಕೆ ಸಾಕಷ್ಟುನೋವಾಗಿದೆ. ಈ ಒಂದು ಘಟನೆಯಿಂದ ನನ್ನ ಹೆಸರಿಗೆ ಮಸಿ ಬಳಿಯಲು ಎಷ್ಟೇ ಪ್ರಯತ್ನಿಸಿದರೂ ನಾನು ಜನಸೇವೆಯಿಂದ ಹಿಂದೆ ಸರಿಯುವವನಲ್ಲ. ಮಾನವೀಯತೆಯೇ ನನ್ನ ಧರ್ಮ. ಹಣ, ಅಧಿಕಾರ ಯಾವುದೂ ಶಾಶ್ವತವಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳು. ನಮ್ಮ ದೇಶ, ರಾಜ್ಯವನ್ನು ಕೊರೊನಾದಿಂದ ಕಾಪಾಡಬೇಕು. ಇದಕ್ಕೆ ನನ್ನ ಕ್ಷೇತ್ರದ ಜನರ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ