ಜಮೀರ್‌ಗೆ ಕರೆ ಮಾಡಿ ವಾರ್ನಿಂಗ್ ಕೊಟ್ಟ ಸಿದ್ದರಾಮಯ್ಯ!

By Kannadaprabha NewsFirst Published Apr 22, 2020, 8:50 AM IST
Highlights

ಜಮೀರ್‌ಗೆ ಕರೆ ಮಾಡಿ ಸಿದ್ದು ವಾರ್ನಿಂಗ್‌| ಪಾದರಾಯನಪುರ ಗಲಾಟೆ ಬಗ್ಗೆ ಅಸಮಾಧಾನ| ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ಳಲು ಎಚ್ಚರಿಕೆ

ಬೆಂಗಳೂರು(ಏ.22): ಪಾದರಾಯನಪುರ ಘಟನೆ ಸಂಬಂಧ ತೀವ್ರ ಟೀಕೆಗೆ ಗುರಿಯಾಗಿರುವ ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ರನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತರಾಟೆ ತೆಗೆದುಕೊಂಡಿದ್ದಾರೆ.

ಮಂಗಳವಾರ ಜಮೀರ್‌ ಅವರನ್ನು ಕರೆಸಿಕೊಂಡು ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೊರೋನಾ ಸೋಂಕಿನ ವಿರುದ್ಧ ರಾಜ್ಯವೇ ಸೆಣಸುತ್ತಿರುವಾಗ ಪಾದರಾಯನಪುರದಲ್ಲಿ ನಡೆದ ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇನ್ನು ಮುಂದೆ ಕ್ಷೇತ್ರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೊರೋನಾ ಯೋಧರ ಮೇಲೆ ರಾಜ್ಯದಲ್ಲಿ ಮತ್ತೆ ದೌರ್ಜನ್ಯ!

ಕೊರೋನಾದಿಂದ ಪರಿಸ್ಥಿತಿ ತೀರ ಹದಗೆಟ್ಟಿರುವುದರಿಂದ ಎಚ್ಚರಿಕೆಯಿಂದ ಇರಬೇಕು. ಕ್ಷೇತ್ರದಲ್ಲಿ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ಜನರಿಗೆ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಇಂತಹÜ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಸಿದ್ದರಾಮಯ್ಯ ಅವರು ಜಮೀರ್‌ಗೆ ತಾಕೀತು ಮಾಡಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕೊರೋನಾ ಸೋಂಕಿಯರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಿರುವ ಪಾದರಾಯನಪುರದಲ್ಲಿ ಭಾನುವಾರ ಸಂಜೆ ಕೆಲವರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಿಬಿಎಂಪಿ ಸಿಬ್ಬಂದಿ ಹೋದಾಗ, ಕೆಲ ಉದ್ರಿಕ್ತರ ಗುಂಪು ಏಕಾಏಕಿ ದಾಂಧಲೆ ನಡೆಸಿ, ಬಿಬಿಎಂಪಿ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿತ್ತು. ರಸ್ತೆಗಳಿಗೆ ಅಳವಡಿಸಿದ್ದ ಬ್ಯಾರಿಕೇಡ್‌ ಕಿತ್ತೆಸೆದು ಸಿಬ್ಬಂದಿ ಮೇಲೆ ಹಲ್ಲೆಗೈಯಲು ಯತ್ನಿಸಿತ್ತು.

ಪಾದರಾಯನಪುರ ಆರೋಪಿಗಳು ರಾಮನಗರಕ್ಕೆ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಎಚ್‌ಡಿಕೆ

ಈ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಜಮೀರ್‌, ನಾನು ಬಿಬಿಎಂಪಿ ಸಿಬ್ಬಂದಿಗೆ ರಾತ್ರಿ ಹೊತ್ತು ಹೋಗುವುದು ಬೇಡ, ಹಗಲಿನಲ್ಲಿ ಹೋಗೋಣ ಎಂದಿದ್ದೆ. ಆದರೂ ಅವರು ರಾತ್ರಿ ಹೊತ್ತು ಹೋಗಿದ್ದರಿಂದ ಈ ಘಟನೆ ಜರುಗಿದೆ ಎಂದಿದ್ದರು. ಜಮೀರ್‌ ಅವರ ಈ ಹೇಳಿಕೆಗೆ ಎಲ್ಲೆಡೆ ತೀವ್ರ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿದ್ದರಾಮ್ಯ ಅವರು ಅವರನ್ನು ಕರೆಸಿಕೊಂಡು ತರಾಟೆ ತೆಗೆದುಕೊಂಡರು ಎನ್ನಲಾಗಿದೆ.

click me!