ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳಿಗೆ ಡಿಕೆಶಿ ಅವರು ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಬೂತ್ ಮಟ್ಟದಿಂದಲೇ ಹೋರಾಡಲು ಕರೆ ನೀಡಿದ್ದಾರೆ. ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ವಿಶ್ವಾಸ ಗಳಿಸಲು ಸೂಚಿಸಿದ್ದಾರೆ.
ಬೆಂಗಳೂರು (ಮಾ.18): ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಒಗ್ಗಟ್ಟಾಗಿ ಸೈದ್ಧಾಂತಿಕ ರಾಜಕೀಯ ಎದುರಾಳಿಗಳಾದ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಬೂತ್ ಮಟ್ಟದಿಂದಲೇ ಹೋರಾಡಬೇಕು ಎಂದು ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಸೋಮವಾರ ನಗರದ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ‘ಯುವ ಸಂಕಲ್ಪ’ದಲ್ಲಿ ನೂತನ ಅಧ್ಯಕ್ಷ ಮಂಜುನಾಥ ಗೌಡ ಅವರಿಗೆ ಕಾಂಗ್ರೆಸ್ ಧ್ವಜ ಹಸ್ತಾಂತರಿಸಿ, ಎಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಡಿಸಿಎಂ, ಸರ್ಕಾರದ ಸಾಧನೆಗಳನ್ನು ಬೂತ್ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಜನರ ವಿಶ್ವಾಸ ಗಳಿಸಬೇಕು. ಪಕ್ಷದ ಸಂಘಟನೆಗಾಗಿ ತಾಲೂಕು ಅಧ್ಯಕ್ಷರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಬೇಕು. ಸದಸ್ಯರಾಗಿರುವ ಎಲ್ಲರನ್ನೂ ಆಹ್ವಾನಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಕೇಂದ್ರಕ್ಕೆ ನಮ್ಮ ತೆರಿಗೆ ಪಾವತಿ 5 ಲಕ್ಷ ಕೋಟಿ, ನಮಗೆ ಬರುವುದು ಕೇವಲ 51 ಸಾವಿರ ಕೋಟಿ - ಸಿಎಂ ಕಿಡಿ
ಯುವ ಸದಸ್ಯರ ನಡೆಯು ಹಳ್ಳಿ ಕಡೆ, ಬೂತ್ ಕಡೆ ಹಾಗೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕಡೆ ಇರಬೇಕು. ವ್ಯಕ್ತಿ ಪೂಜೆ ಮಾಡದೇ ಪಕ್ಷದ ಪೂಜೆ ಮಾಡಬೇಕು. ಬಿಜೆಪಿಯು ಜನರ ಭಾವನೆಗಳ ಮೇಲೆ ರಾಜಕೀಯ ಮಾಡುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರು ಅಧಿಕಾರಕ್ಕೆ ಬಂದಂತೆ. ಚುನಾವಣೆಗಳಲ್ಲಿ ಜನರು ಕೇವಲ ನಿಮ್ಮ ಮುಖ ನೋಡಿ ಮತ ಹಾಕುವುದಿಲ್ಲ. ಹಸ್ತದ ಚಿಹ್ನೆ ನೋಡಿ ಮತ ಹಾಕುತ್ತಾರೆ ಎಂದು ಶಿವಕುಮಾರ್ ಎಚ್ಚರಿಸಿದರು.
ಪಕ್ಷ ಸಂಘಟನೆ, ಸೈದ್ಧಾಂತಿಕ ಹೋರಾಟ, ಶಿಸ್ತು ನಿಮ್ಮ ಮೂಲಮಂತ್ರವಾಗಬೇಕು. ಕೇವಲ ಪೋಸ್ಟರ್, ಬ್ಯಾನರ್, ಕಟೌಟ್ ಹಾಕುವುದು, ನಾಯಕರ ಹಿಂದೆ ಸುತ್ತಾಡುವುದರಿಂದ ನಾಯಕನಾಗುವುದಿಲ್ಲ. ಪ್ರತಿ ಬೂತ್‌ನಲ್ಲಿ 25 ಕಾರ್ಯಕರ್ತರ ಪಡೆ ರಚಿಸಿ ಅವರಿಗೆ ಜವಾಬ್ದಾರಿ ವಹಿಸಬೇಕು. ಬೂತ್ ಮಟ್ಟದಲ್ಲಿ ಹೆಚ್ಚು ಮತ ತರುವವರೇ ನಿಜವಾದ ನಾಯಕ. ಅಲ್ಲದೇ ಪ್ರತಿ ಬೂತ್‌ಗಳಲ್ಲಿ ಡಿಜಿಟಲ್ ತಂಡ ಇರಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮೀಸಲಾತಿ ಜಾರಿಯಾದರೆ 74 ಮಹಿಳೆಯರಿಗೆ ಟಿಕೆಟ್ ನಿಶ್ಚಿತ. ಅವುಗಳನ್ನು ನನ್ನ ಹೆಂಡತಿ-ಮಕ್ಕಳಿಗೆ, ನಾಯಕರ ಹೆಂಡತಿ-ಮಕ್ಕಳಿಗೆ ನೀಡುವುದಿಲ್ಲ. ಇಲ್ಲಿ ಕುಳಿತಿರುವ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಪಕ್ಷ ಸಂಘಟಿಸಿ ನಾಯಕತ್ವ ಬೆಳೆಸಿಕೊಳ್ಳಬೇಕು. ಟಿಕೆಟ್ ಪಡೆಯುವಷ್ಟು ಶಕ್ತಿಶಾಲಿಗಳಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಶಾಸಕ ರಿಜ್ವಾನ್ ಅರ್ಷದ್, ಸೇರಿದಂತೆ ಇನ್ನಿತರರು ಮಾತನಾಡಿದರು. ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ಎಚ್.ಆಂಜನೇಯ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಹಮ್ಮದ್ ನಲಪಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿಮ್ಮ ಆಲೋಚನೆಗಳು ನಿಮ್ಮ ನಾಯಕತ್ವ ರೂಪಿಸುತ್ತವೆ. ಗೆದ್ದವರು, ಸೋತವರು ಒಬ್ಬರನ್ನೊಬ್ಬರು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದರೆ ನಿಮಗೆ ಮತ್ತೆ ಯಾವುದೇ ಅವಕಾಶ ನೀಡುವುದಿಲ್ಲ. ವೈಯಕ್ತಿಕ ವಿಚಾರ ಬಿಟ್ಟು ಪಕ್ಷದ ಕೆಲಸ ಮಾಡುವವರಿಗೆ ಕಾಂಗ್ರೆಸ್ ಪಕ್ಷ ಗೌರವ ಕೊಡುತ್ತದೆ. 2029ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆಗಾಗಿ ದಿನದ 24 ತಾಸು ಕೆಲಸ ಮಾಡುತ್ತೇನೆ. ಬೂತ್ ಮಟ್ಟದಿಂದ ಹಿಡಿದು ಮೇಲಿನ ಹಂತದವರೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಪಕ್ಷ ಸಂಘಟಿಸುತ್ತೇನೆ ಎಂದರು.
ಇದನ್ನೂ ಓದಿ: ಮುಸ್ಲಿಮರಿಗೆ 4% ಮೀಸಲಾತಿ, ಕಾನೂನು ಹೋರಾಟಕ್ಕೆ ಬಿಜೆಪಿ ಸಜ್ಜು, ರಾಜ್ಯ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಕಿಡಿ!
ದೇಶದಲ್ಲಿ ಕೋಮುವಾದ ಹೆಚ್ಚಾಗಿದೆ. ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆಏರಿಕೆ ಕಾಡುತ್ತಿದೆ. ಚಾಯ್‌ವಾಲಾ ಮೋದಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಆರ್‌ಎಸ್‌ಎಸ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಳಿದು ಹೋರಾಟ ಮಾಡುತ್ತೇನೆ ಎಂದು ಹೇಳಿದರು.
ಈಗ ನಡೆದಿರುವುದು ಆಂತರಿಕ ಚುನಾವಣೆ. 25 ಲಕ್ಷ ಯುವ ಕಾಂಗ್ರೆಸ್ ಸದಸ್ಯರು ತಮ್ಮ ನಿಜವಾದ ಸಾಮರ್ಥ್ಯವನ್ನು ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಪಾಲಿಕೆ ಚುನಾವಣೆಗಳಲ್ಲಿ ತೋರಿಸಬೇಕು.
- ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ