ಬೆಳಗಾವಿ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದ್ದು, ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕೃಷ್ಣಾ, ಭೀಮಾ ಹಾಗೂ ಅದರ ಉಪನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ನದಿ ತೀರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
ಬೆಂಗಳೂರು(ಜು.22): ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಹಾಗೂ ಬೆಳಗಾವಿ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದ್ದು, ಈ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಕೃಷ್ಣಾ, ಭೀಮಾ ಹಾಗೂ ಅದರ ಉಪನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ನದಿ ತೀರದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ 16 ಸೇತುವೆಗಳು ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಯಾದಗಿರಿ ಜಿಲ್ಲೆಯ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.
ಕಲಬುರಗಿ ಜಿಲ್ಲೆಯ ಮುಲ್ಲಾಮಾರಿ ಜಲಾಶಯ ಭರ್ತಿಯಾಗಿದ್ದು, ಜಲಾಶಯದ 4 ಗೇಟುಗಳ ಮೂಲಕ 2 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹೀಗಾಗಿ, ತಾಲೂಕಿನ 5 ಗ್ರಾಮಗಳ ಸೇತುವೆಗಳು ಜಲಾವೃತವಾಗಿವೆ. ಕಾಗಿಣಾ ನದಿ ತೀರದಲ್ಲಿರುವ ಮಳಖೇಡ ಉತ್ತರಾದಿ ಮಠ, ಅಕ್ಷೋಭ್ಯ ತೀರ್ಥರು ಹಾಗೂ ಜಯತೀರ್ಥ ಮೂಲ ವೃಂದಾವನಗಳು ಜಲಾವೃತವಾಗಿವೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕೊಂದರಲ್ಲೇ 22ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಇದೇ ವೇಳೆ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಸೇರಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ.
ತೊಗರಿ ಕಣಜ ಕಲಬುರಗಿಯಲ್ಲಿ ಪುನರ್ವಸು ಮಳೆ ಬಿರುಸು
ಅಪಾಯದ ಮಟ್ಟದಲ್ಲಿ ನದಿಗಳು:
ಬೆಳಗಾವಿ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂಧಗಂಗಾ, ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಖಾನಾಪುರ ತಾಲೂಕಿನ ಚಿಕಲೆ, ಪಾರವಾಡ ಹಾಗೂ ಚಿಗುಲೆಗಳನ್ನು ಹೊರತುಪಡಿಸಿ ಖಾನಾಪುರ ತಾಲೂಕಿನ ಇತರ ಎಲ್ಲಾ ಜಲಪಾತಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆಯ ಕಾಗಿಣಾ, ಕಮಲಾವತಿ, ಮುಲ್ಲಾಮಾರಿ, ಅಮರ್ಜಾ ನದಿಗಳಿಗೆ ಪ್ರವಾಹ ಬಂದಿದ್ದು, ಕಲಬುರಗಿ- ಮಳಖೇಡ, ಸೇಡಂ, ಕಲಬುರಗಿ-ಚಿತ್ತಾಪುರ ರಸ್ತೆ ಸಂಪರ್ಕ ಕಡಿತಗೊಂಡಿದೆ.
Chikkamagaluru Rain: ಮುಂಗಾರು ಮಳೆ ಅಬ್ಬರಕ್ಕೆ ಸಾಲು ಸಾಲು ಅನಾಹುತ, ಅಪಾರ ಪ್ರಮಾಣದ ಹಾನಿ
ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಒಳಹರಿವು 96,805 ಕ್ಯುಸೆಕ್‌ಗೆ ಏರಿಕೆಯಾಗಿದ್ದು, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಜಲಾಶಯದಿಂದ 5,000 ಕ್ಯುಸೆಕ್ ನೀರನ್ನು ಜಲಾಶಯದ ಬಲಭಾಗದ ಆಲಮಟ್ಟಿವಿದ್ಯುತ್ ಉತ್ಪಾದನಾ ಘಟಕದ ಮೂಲಕ ಹರಿಸಲಾಗಿದೆ. ಇದರಿಂದಾಗಿ ವಿದ್ಯುತ್ ಉತ್ಪಾದನಾ ಕೇಂದ್ರದ ಒಂದು ಘಟಕದ ಮೂಲಕ 25 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆರಂಭಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ಕಾರವಾರ ತಾಲೂಕಿನ ಕದ್ರಾ ಜಲಾಶಯದ 1 ಗೇಟ್ ತೆಗೆದು, 5 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ತಾಲೂಕಿನ ಜುಮನಾಳ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಾರ್ವಜನಿಕ ಶೌಚಾಲಯದ ಚಾವಣಿ ಕುಸಿದು ಬಿದ್ದು, ಮೂವರು ಮಹಿಳೆಯರು ಗಾಯಗೊಂಡಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಮಳೆಯಾಗುತ್ತಿದ್ದು, ಶರಾವತಿ, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಕೊಡಗಿನ ಸುಂಟಿಕೊಪ್ಪ ಸಮೀಪದ ಕೆದಕಲ್‌ನಲ್ಲಿ ಗುರುವಾರ ರಾತ್ರಿ ಭಾರಿ ಗಾಳಿ ಮಳೆಗೆ ಬೃಹತ್ ಮರ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸಬರಬೈಲು ಶಾಲೆ ಬಳಿ ಸುಮಾರು 200 ವರ್ಷಗಳಷ್ಟುಹಳೆಯದಾದ ಬೃಹತ್ ಗಾತ್ರದ ಮರ ಉರುಳಿ ಬಿದ್ದು, ಎರಡು ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಇದೇ ವೇಳೆ, ಉಡುಪಿಯ ಪಡುಬಿದ್ರಿಯಲ್ಲಿ ಕಡಲ್ಕೊರೆತ ಮರುಕಳಿಸಿದ್ದು, ಬೀಚ್‌ನಲ್ಲಿ ನಡೆದ ಅಭಿವೃದ್ಧಿ ಕಾಮಗಾರಿ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ರಂಗವೇದಿಕೆ, ಇಂಟರ್‌ಲಾಕ್ ಟೈಲ್ಸ್‌ಗಳು, ಶೌಚಾಲಯ ಸಮುದ್ರ ಪಾಲಾಗುವ ಸ್ಥಿತಿಯಲ್ಲಿವೆ.