ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯನ್ನು 10 ವರ್ಷಗಳ ಹಿಂದೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ, ದಶಮಾನೋತ್ಸವ ಸಂಭ್ರಮಕ್ಕೂ ಚಾಲನೆ ನೀಡಿದ್ದಾರೆ.
ತುಮಕೂರು (ಸೆ.06): ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿ ಶಾಲೆಗಳ ಮಕ್ಕಳಿಗೆ ಹಾಗೂ ಅಂಗನವಾಡಿ ಶಾಲೆಯ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು. ಹೀಗಾಗಿ, ಅವರನ್ನು ಕರ್ನಾಟಕ ಕ್ಷೀರ ಭಾಗ್ಯ ಪಿತಾಮಹ ಎಂತಲೇ ಕರೆಯಲಾಗುತ್ತಿದೆ. ಈಗ ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಆಚರಣೆ ಮಾಡುತ್ತಿದ್ದು, ಅದೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಬಹು ಮುಖ್ಯ ಕಾರ್ಯಕ್ರಮ ಕ್ಷೀರಭಾಗ್ಯವಾಗಿದೆ. ಈ ಯೋಜನೆಗೆ ಹತ್ತು ವರ್ಷ ತುಂಬಿದೆ. 2013ರಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಉದ್ಘಾಟನೆ ಆಯ್ತು. ಅವತ್ತು ನಾನೇ ಸಿಎಂ ಆಗಿದ್ದೆನು. ಇವತ್ತು ದಶಮಾನೋತ್ಸವ ಕಾರ್ಯಕ್ರಮದಲ್ಲೂ ನಾನೇ ಸಿಎಂ ಆಗಿದ್ದೇನೆ. ನಮ್ಮ ಸರ್ಕಾರದ ಪ್ರಮುಖ ಫ್ಲಾಗ್ ಶೀಪ್ ಕಾರ್ಯಕ್ರಮದಲ್ಲಿ ಇದು ಒಂದಾಗಿದೆ ಎಂದು ಹೇಳಿದರು.
ನಾನು ಸಿಎಂ ಆಗಿದ್ದಾಗ ಹಾಲು ಉತ್ಪಾದಕರ ಒಕ್ಕೂಟಗಳ ಅಧ್ಯಕ್ಷರು, ಸಹಕಾರ ಸಚಿವರು, ಪಶುಸಂಗೋಪನ ಸಚಿವರು ಸೇರಿಕೊಂಡು ನನ್ನ ಬಳಿ ಬಂದು ಕರ್ನಾಟಕದಲ್ಲಿ ಹಾಲು ಉತ್ಪಾದನೆ ಜಾಸ್ತಿಯಾಗಿದೆ. ಹಾಲು ಮಾರಾಟ ಮಾಡಲು ಆಗುತ್ತಿಲ್ಲ, ನಮಗೆ ನಷ್ಟವಾಗುತ್ತಿದೆ. ಹಿಗಾಗಿ, ಸರ್ಕಾರ ಏನಾದ್ರೂ ಮಾಡಬೇಕೆಂದು ನನ್ನಲ್ಲಿ ಪ್ರಸ್ತಾಪ ಮಾಡಿದ್ದರು. ಆಗ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ 100ರಲ್ಲಿ ಶೇ.80 ರಷ್ಟು ಮಕ್ಕಳು ದಲಿತ, ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ಕುಟುಂಬದವರಾಗಿದ್ದರು. ಆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಹಾಲು ಕೊಡಬೇಕು ಚಿಂತನೆ ಮಾಡಲಾಯಿತು. ಈ ಮೂಲಕ ಕೆಎಂಎಫ್‌ಗೆ ಅನುಕೂಲವಾಗುತ್ತೆ ಅಂತ ತೀರ್ಮಾನ ಮಾಡಿದ್ದೆವು ಎಂದರು.
ನಂತರ, ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲು ಕೊಡಬೇಕು ಅಂತ ತೀರ್ಮಾನ ಮಾಡಿದೆವು. ಒಬ್ಬ ಮಗುವಿಗೆ 150 ಮಿಲಿ ಲೀಟರ್ ಹಾಲು ಕೊಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಒಟ್ಟು 54,68,000 ಮಕ್ಕಳಿಗೆ ಈಗ ಹಾಲು ಕೊಡುತ್ತಿದ್ದೇವೆ. ಹಾಲು ಕ್ಯಾಲಿಷಿಯಂ ಇರುವಂತಹ ಪರಿಪೂರ್ಣ ಆಹಾರವಾಗಿದೆ. ಈ ಕಾರ್ಯಕ್ರಮ 10 ವರ್ಷದಿಂದ ಯಶಸ್ವಿಯಾಗಿ ನಡೆದು, ಇದೀಗ 11 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಅದರ ದಶಮಾನೋತ್ಸವ ಕಾರ್ಯಕ್ರಮವನ್ನು ಇಲ್ಲಿ ಮಾಡುತ್ತಿದ್ದೇವೆ. ಕ್ಷೀರಭಾಗ್ಯ ಯೋಜನೆಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಡೈರಿ ಫೆಡ್ರೇಷನ್‌ನವರು ಪ್ರಶಸ್ತಿ ಕೊಟ್ಟಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಶೂ ಭಾಗ್ಯ ಯೋಜನೆ ಘೋಷಣೆ ಮಾಡಿದ್ದು ಮಧುಗಿರಿಯಲ್ಲೇ ಎಂದು ಹೇಳಿದರು.
ಯಾರು ಹಸಿದು ಮಲಗಬಾರದು, ಹಸಿವಿನಿಂದ ಇರಬಾರದು. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕೆಂದು ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ವಿ.ಚನಾವು ತಲಾ 7 ಕೆಜಿ ಅಕ್ಕಿಕೊಡ್ತಿದ್ವಿ, ಆದರೆ ಬಿಜೆಪಿಯವರು 5 ಕೆಜಿ ಮಾಡಿದರು. ಚುನಾವಣೆ ಸಂದರ್ಭದಲ್ಲಿ ಅಕ್ಕಿ ಹೆಚ್ಚಳ ಮಾಡುತ್ತೇವೆ ಎಂದು ಹೇಳಿದ್ದೆನು. ಪುಡ್ ಕಾರ್ಪೋರೇಷನ್ ಗೆ ನಾವು ಪತ್ರ ಬರೆದೆವು. ನಮ್ಮ ಹತ್ತಿರ ಸಾಕಷ್ಟು ಅಕ್ಕಿ ಇದೆ ಕೊಡುತ್ತೇನೆ ಅಂತ ಉತ್ತರ ಕೊಟ್ಟರು ಅವರು. ಆದರೆ ಕೇಂದ್ರ ಸರ್ಕಾರ ಅಕ್ಕಿಕೊಡದಂತೆ ಮಾಡಿಬಿಟ್ಟರು. ಬಿಜೆಪಿ ಸರ್ಕಾರ ಬಡವರ ಪರ ಇಲ್ಲ. ನಾವು ಪುಕ್ಕಟ್ಟೆ ಕೇಳಿರಲಿಲ್ಲ, ಹಣ ಕೊಡ್ತೀವಿ ಅಂತಹೇಳಿದ್ವಿ. ಬಿಜೆಪಿ ಬಡವರ ವಿರೋಧಿಗಳು. ಮನುಷ್ಯತ್ವ ಇಲ್ಲದ ಜನ. ಅಕ್ಕಿ ಸಿಗೋವರೆಗೂ ನಾವು ಅಕ್ಕಿ ಬದಲು ಹಣ ನೀಡುತ್ತಿದ್ದೇವೆ. ಈಗ ಅಕ್ಕಿ ಸಿಗುತ್ತಿದೆ, ಅದ್ಕೆ ನಾವು ಯೋಚನೆ ಮಾಡ್ತಿದ್ದೇವೆ, ಮುಂದೆ ಅಕ್ಕಿ ಕೊಡ್ಬೇಕಾ, ದುಡ್ಡು ಕೊಡ್ಬೇಕಾ ಅಂತ. ಅಕ್ಕಿ ಕೊಡ್ತೀವಿ ಆದರೆ ಅಕ್ಕಿಯನ್ನು ಮಾರಿಕೊಳ್ಳಬೇಡಿ. ಬಡವರು ಮೂರು ಹೊತ್ತು ಊಟ ಮಾಡ್ಬೇಕು. ಕರ್ನಾಟಕದಲ್ಲಿ ಯಾರು ಕೂಡ ಹಸಿವಿನಿಂದ ಇರಬಾರದು ಎಂದರು.
ರಾಜ್ಯದಲ್ಲಿ 7 ಲಕ್ಷ ಕುಟುಂಬಗಳಿವೆ. ಅದರಲ್ಲಿ 4.42 ಲಕ್ಷ ಕುಟುಂಬಗಳಿಗೆ ಅಕ್ಕಿ ಕೊಡುತ್ತಿದ್ದೇವೆ. ಜನರಿಗೆ ಫ್ರೀಯಾಗಿ ಯೋಜನೆ ಕೊಟ್ಟರೆ ರಾಜ್ಯ ಹಾಳಾಗಿ ಹೋಗುತ್ತವೆ ಅಂತ ಮಿಸ್ಟರ್ ನರೇಂದ್ರ ಮೋದಿ ಹೇಳ್ತಾರೆ. ನಾವು 5 ಗ್ಯಾರಂಟಿಗಳನ್ನು ಜಾರಿಗೆ ಮಾಡುತ್ತೇವೆ. ರಾಜ್ಯವನ್ನು ದಿವಾಳಿ ಆಗಲು ಬಿಡಲ್ಲ, ಅಂತ ಮಿಸ್ಟರ್ ನರೇಂದ್ರ ಮೋದಿಗೆ ಈ ಮೂಲಕ ಹೇಳುತ್ತೇನೆ. ನಿನ್ನೆಯವರೂ 53 ಕೋಟಿ ಮಹಿಳೆಯರು ಫ್ರೀಯಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಮಹಿಳೆಯರು ದೇವಸ್ಥಾನ, ನೆಂಟರ ಮನೆಗೆ ಹೋಗಿದ್ದಾರೆ. ಪ್ರತಿ ದಿನ 55 ಲಕ್ಷ ಜನ ಹೆಣ್ಣು ಮಕ್ಕಳು ಫ್ರೀಯಾಗಿ ಓಡಾಡ್ತಿದ್ದಾರೆ ಎಂದರು.