
ಮಂಗಳೂರು(ಜು.27): ಕೊರೋನಾ ಮರಣ ಪ್ರಮಾಣ(ಡೆತ್ ರೇಟ್)ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿದ್ದರೂ ವಿವಿಧ ಕಾರಣಗಳಿಂದಾದ ಒಟ್ಟು ಸಾವಿನ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಗಣನೀಯವಾಗಿ ತಗ್ಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಲಾಕ್‌ಡೌನ್ ಹೇರಿದ್ದ ವೇಳೆ ಅಪಘಾತ, ಅಪರಾಧ ಚಟುವಟಿಕೆಗಳ ಸಂಖ್ಯೆ ಇಳಿಕೆಯಾದದ್ದು, ಜೊತೆಗೆ ಜನತೆ ಜಾಗೃತರಾಗಿ ಮನೆಯಲ್ಲುಳಿದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದೂ ಸಾವಿನ ಸಂಖ್ಯೆ ಇಳಿಮುಖಕ್ಕೆ ಕಾರಣಗಳಲ್ಲೊಂದು ಎಂದು ಹೇಳಲಾಗಿದೆ.
ಜು.24ರ ರಾಜ್ಯ ಬುಲೆಟಿನ್ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4214 ಕೋವಿಡ್ ಸೋಂಕಿತರ ಪೈಕಿ 99 ಮಂದಿ ಮೃತಪಟ್ಟು ಡೆತ್‌ರೇಟ್ ಶೇ.2.34ಕ್ಕೇರಿದೆ. ಇಷ್ಟಾದರೂ ಮಂಗಳೂರಿನ ಒಟ್ಟು ಸಾವಿನ ಸಂಖ್ಯೆಯಲ್ಲಿ ಈ ಬಾರಿ ಏರಿಕೆಯೇ ಆಗದೆ, ಇಳಿಮುಖವಾಗಿರುವುದು ವಿಶೇಷ.
ದೇಶದಲ್ಲಿ ಮತ್ತೆ 50218 ಕೇಸ್: ಕೊರೋನಾಗೆ 725 ಬಲಿ!
ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ ಜ.1ರಿಂದ ಜು.19ರವರೆಗೆ ವಿವಿಧ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ ಒಟ್ಟು 4,787. ಆದರೆ ಈ ಬಾರಿ ಕೊರೋನಾ ಸಾವುಗಳನ್ನು ಸೇರಿಸಿಯೂ ಜು.20ರವರೆಗೆ ಮೃತಪಟ್ಟಿರುವವರ ಸಂಖ್ಯೆ 3403. ಅಂದರೆ ಕೋವಿಡ್ ಅಬ್ಬರದ ನಡುವೆಯೂ ಈ ವರ್ಷ 1,384 ಕಡಿಮೆ ಮರಣ ದಾಖಲಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್ ಅಂತ್ಯದವರೆಗೆ ಮಂಗಳೂರಲ್ಲಿ 1,032 ಅಪಘಾತಗಳು ಸಂಭವಿಸಿ ಅದರಲ್ಲಿ 148 ಮಂದಿ ಸಾವಿಗೀಡಾಗಿದ್ದರು. 1075 ಮಂದಿ ಗಾಯಗೊಂಡಿದ್ದರು. ಈ ವರ್ಷ ಇದೇ ಅವಧಿಯಲ್ಲಿ ಕೇವಲ 326 ಅಪಘಾತಗಳು ಸಂಭವಿಸಿ 50 ಮಂದಿ ಮೃತಪಟ್ಟಿದ್ದಾರೆ. 364 ಮಂದಿ ಮಾತ್ರ ಗಾಯಗೊಂಡಿದ್ದಾರೆ.
ಅಪಘಾತ ಪ್ರಕರಣಗಳು ಇಳಿಮುಖವಾಗಿರುವುದು ಒಂದು ಕಾರಣವಾದರೆ ಕೇರಳದಿಂದ ಬರುವ ರೋಗಿಗಳ ಸಂಖ್ಯೆ, ಹೊರ ಜಿಲ್ಲೆಗಳಿಂದ ದಕ್ಷಿಣ ಕನ್ನಡಕ್ಕೆ ಬರುವ ರೋಗಿಗಳ ಸಂಖ್ಯೆಯೂ ಇಳಿಮುಖವಾಗಿರುವುದು ಈ ರೀತಿ ಸಾವಿನ ಪ್ರಮಾಣ ತಗ್ಗಲು ಮತ್ತೊಂದು ಕಾರಣ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.
ದೈಹಿಕ ಅಂತರ ಕಾಪಾಡುತ್ತೆ ‘ಡಿಸ್ಟೋಸಿಟ್’ ಉಪಕರಣ!
ಲಾಕ್‌ಡೌನ್‌ನಿಂದಾಗಿ ಅಪಘಾತದಿಂದ ಸಾವಿನ ಸಂಖ್ಯೆಯೂ ಈ ಬಾರಿ ಇಳಿದಿದೆ. ಉತ್ತಮ ವೈದ್ಯಕೀಯ ವ್ಯವಸ್ಥೆಯಿರುವ ಮಂಗಳೂರಿನ ಆಸುಪಾಸಿನ ಎಂಟು ಜಿಲ್ಲೆಗಳಲ್ಲದೆ ನೆರೆಯ ಕೇರಳದಿಂದಲೂ ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬಾರಿ ಲಾಕ್‌ಡೌನ್‌ನಿಂದಾಗಿ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ಆರೋಗ್ಯ ಜಾಗೃತಿಯೂ ಹೆಚ್ಚಿದೆ. ಸಾವಿನ ಸಂಖ್ಯೆ ಕ್ಷೀಣಿಸಲು ಇದು ಕೂಡ ಬಹುಮುಖ್ಯ ಕಾರಣವಾಗಿರಬಹುದು ಎಂದು ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ