ಬೆಂಗಳೂರು (ಸೆ.14): ರೈತ ವಿರೋಧಿ ಕೃಷಿ ಕಾಯ್ದೆಗಳ ಅನುಷ್ಠಾನ ವಿರೋಧಿಸಿ ಭಾರತ್ ಕಿಸಾನ್ ಮೋರ್ಚಾ ಸೆ.27 ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಇದಕ್ಕೆ ಬೆಂಬಲಿಸಿ ರಾಜ್ಯ ರೈತ ಸಂಘಟನೆಗಳು ಅಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸೋಮವಾರ ಸ್ವಾತಂತ್ರ್ಯ ಉದ್ಯಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ಮುಂದುವರೆಯಲಿದೆ. ರಾಜ್ಯದಲ್ಲಿ ಸೆ.27 ರಂದು ಸಂಪೂರ್ಣ ಬಂದ್ ಆಗಬೇಕು. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು, ಅಂಗಡಿ ಮುಗ್ಗಟ್ಟುಗಳು ಬಂದ್ ಆಗಬೇಕು ಎಂದು ಕರೆ ನೀಡಿದರು.
ಭಾರತ್ ಬಂದ್ ಬೆಂಬಲಿಸಿ ಸೆ.27ಕ್ಕೆ ಕರ್ನಾಟಕ ಬಂದ್
ರಾಜ್ಯದ ಹಲವು ರೈತ ಸಂಘಟನೆಗಳು, ಕಾರ್ಮಿಕರು, ಆಟೋ ಮತ್ತು ಬಸ್ ಚಾಲಕರು, ಮಹಿಳಾ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಇನ್ನೂ ಕೆಲ ಸಂಘಟನೆಗಳೊಂದಿಗೆ ಚರ್ಚೆ ಮಾಡಲು ಸೆ.15 ರಂದು ಸಭೆ ಕರೆಯಲಾಗಿದೆ. ಅವರೂ ಬೆಂಬಲ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಜಿಲ್ಲೆ, ತಾಲೂಕು, ಹೋಬಳಿ ಕೇಂದ್ರಗಳಲ್ಲೂ ಬಂದ್ ಯಶಸ್ವಿಯಾಗಲು ಎಲ್ಲರೂ ಸಹಕಾರ ನಿಡಬೇಕು. ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.