KIADB : 'ಭೂಮಿ ಬಿಡೋ ಮಾತೇ ಇಲ್ಲ' ಭೂ ಸ್ವಾಧೀನಕ್ಕೆ ಬಂದ ಅಧಿಕಾರಿಗಳನ್ನೇ ಬಂಧನ ಮಾಡಿ, ಅನ್ನದಾತರು ಆಕ್ರೋಶ!

Published : Feb 27, 2026, 11:06 PM IST
Farmers Fury in Anekal Officials KIADB Land Acquisition Protest

ಸಾರಾಂಶ

ಆನೇಕಲ್ ತಾಲೂಕಿನಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 2500 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾದ ಕೆಐಎಡಿಬಿ ಅಧಿಕಾರಿಗಳಿಗೆ ರೈತರು ಘೇರಾವ್ ಹಾಕಿ ಪ್ರತಿಭಟಿಸಿದ್ದಾರೆ. ತಮ್ಮ ಫಲವತ್ತಾದ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ಬೆಂಗಳೂರು (ಫೆ.27): ಆನೇಕಲ್ ತಾಲೂಕಿನ ಎಸ್. ಮೇಡಹಳ್ಳಿ ಗ್ರಾಮದಲ್ಲಿ ಇಂದು ಹೈಡ್ರಾಮಾ ನಡೆದಿದೆ. ಕೈಗಾರಿಕಾ ಉದ್ದೇಶಕ್ಕಾಗಿ ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ (KIADB) ಕ್ರಮಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ರೈತರ ಹೊಲಗಳಿಗೆ ಭೇಟಿ ನೀಡಿ ಭೂ ಸ್ವಾಧೀನದ ನೋಟಿಸ್ ನೀಡಲು ಬಂದಿದ್ದ ವಿಶೇಷ ಭೂ ಸ್ವಾಧೀನ ಅಧಿಕಾರಿ ಮಮತಾ ಮತ್ತು ಅವರ ತಂಡಕ್ಕೆ ರೈತರು ಘೇರಾವ್ ಹಾಕಿದ್ದಾರೆ. ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ರೈತರು ರೊಚ್ಚಿಗೆದ್ದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

2500 ಎಕರೆ ಭೂಮಿಗಾಗಿ ರೈತರ ಬದುಕು ಬೀದಿಗೆ?

ಆನೇಕಲ್ ತಾಲೂಕಿನ ಸರ್ಜಾಪುರ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸುಮಾರು 2500 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ನೋಟಿಸ್ ಜಾರಿ ಮಾಡಲು ಮುಂದಾಗಿತ್ತು. ತಮ್ಮ ತುತ್ತಿನ ಚೀಲವನ್ನೇ ಕಿತ್ತುಕೊಳ್ಳಲು ಅಧಿಕಾರಿಗಳು ಬಂದಿದ್ದಾರೆ ಎಂದು ರೈತರು, ಅಧಿಕಾರಿಗಳ ತಂಡವನ್ನು ಬಂಧಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು. ಎಸಿ (ಸಹಾಯಕ ಆಯುಕ್ತರು) ಸ್ಥಳಕ್ಕೆ ಆಗಮಿಸುವವರೆಗೂ ಅಧಿಕಾರಿಗಳನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು: ಮನವೊಲಿಕೆ ವಿಫಲ

ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಹೆಚ್ಚಿನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಲು ಹರಸಾಹಸ ಪಟ್ಟರು. ಆದರೆ, ಯಾವುದೇ ಕಾರಣಕ್ಕೂ ತಾವು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು. 'ನಮ್ಮ ಭೂಮಿಯೇ ನಮಗೆ ಉಸಿರು, ಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು' ಎಂದು ಒಕ್ಕೊರಲಿನಿಂದ ಆಗ್ರಹಿಸಿದರು. ಅಧಿಕಾರಿಗಳ ಭರವಸೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ ರೈತರು ಹೋರಾಟದಿಂದ ಹಿಂದೆ ಸರಿಯಲಿಲ್ಲ.

ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ

ಸದ್ಯ ಅಧಿಕಾರಿಗಳ ತಂಡವನ್ನು ರೈತರು ಬಿಡುಗಡೆ ಮಾಡಿದರಾದರು, ಸರ್ಕಾರಕ್ಕೆ ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಕೂಡಲೇ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ಈ ಘಟನೆಯಿಂದಾಗಿ ಆನೇಕಲ್ ಮತ್ತು ಸರ್ಜಾಪುರ ಭಾಗದಲ್ಲಿ ಕೆಐಎಡಿಬಿ ವಿರುದ್ಧದ ಪ್ರತಿರೋಧ ಕಿಚ್ಚು ಹೆಚ್ಚಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇದೊಂದು ಅಪರೂಪದ ಕನಕಾಭಿಷೇಕ; ಉತ್ತರ ಕನ್ನಡ-ಸಿದ್ದಾಪುರದ ಗೋಳಿಕೈನಲ್ಲಿ 'ಮರಿಮಗ'ನನ್ನು ನೋಡಿದ ಅಜ್ಜ-ಅಜ್ಜಿಗೆ ಅದೆಷ್ಟು ಖುಷಿ!
ಮಾಧ್ಯಮದವರನ್ನ ನಿರ್ಬಂಧಿಸಿದ್ರೆ ವಿಧಾನಸೌಧದ ಗೇಟಿಗೆ ಮಲಗುವೆ: ರಾಜ್ಯ ಸರ್ಕಾರಕ್ಕೆ 15 ದಿನಗಳ ಡೆಡ್‌ಲೈನ್ ಕೊಟ್ಟ ವಾಟಾಳ್!