ರಾಮಚಂದ್ರಾಪುರ ಮಠ- ಪ್ರಧಾನ ಮಠದ ಪುನರ್ನಿರ್ಮಾಣ ಸಹಸ್ರಮಾನದ ಕಾರ್ಯ; ಅಯೋಧ್ಯೆಯ ಪುಣ್ಯ ಮಣ್ಣಿನ ಸ್ಪರ್ಶ

Published : Feb 27, 2026, 06:41 PM IST
Ramachandrapura Math

ಸಾರಾಂಶ

ಹೊಸನಗರದ ಶ್ರಿರಾಮಚಂದ್ರಾಪುರ ಮಠದ ಶರಾವತಿ ತೀರದಲ್ಲಿ ಪ್ರಧಾನಮಠ ಪುನ ನಿರ್ಮಾಣ ಸಮಿತಿಯವರು ಏರ್ಪಡಿಸಿದ್ದ ನವ ನಿರ್ಮಾಣದ ರಾಮಸಾನ್ನಿಧ್ಯದ ಶಿಲಾನ್ಯಾಸ ಕಾರ್ಯಕ್ರದಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಶಿಲಾನ್ಯಾಸ ನೆರವೇರಿಸಿ ನಂತರದ ಧರ್ಮಸಭೆಯ ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಪುನರ್ನಿರ್ಮಾಣಕ್ಕೆ 1008 ದಿನಗಳ ಗುರಿ, ನಾಡಿನ ವಿವಿಧ ಭಾಗಗಳ ಸಹಸ್ರಾರು ಜನರು ಭಾಗಿ!

ಶ್ರೀ ರಾಮಚಂದ್ರಾಪುರ ಮಠಕ್ಕೆ ಶಿಷ್ಯರೇ ಸಂಪತ್ತಾಗಿದ್ದು, ಪ್ರಧಾನ ಮಠದ ಶಿಲಾನ್ಯಾಸದ ಮೂಲಕ ಶರಾವತಿ ನದಿ ತೀರದಲ್ಲಿ ಸಹಸ್ರಮಾನದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಹೊಸನಗರದ ಶ್ರಿರಾಮಚಂದ್ರಾಪುರ ಮಠದ ಶರಾವತಿ ತೀರದಲ್ಲಿ ಪ್ರಧಾನಮಠ ಪುನ ನಿರ್ಮಾಣ ಸಮಿತಿಯವರು ಏರ್ಪಡಿಸಿದ್ದ ನವ ನಿರ್ಮಾಣದ ರಾಮಸಾನ್ನಿಧ್ಯದ ಶಿಲಾನ್ಯಾಸ ಕಾರ್ಯಕ್ರದಲ್ಲಿ ಶಿಲಾನ್ಯಾಸ ನೆರವೇರಿಸಿ ನಂತರದ ಧರ್ಮಸಭೆಯ ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಹಣದ ಕೊಪ್ಪರಿಗೆ ಇಲ್ಲ

ರಾಮಚಂದ್ರಾಪುರಮಠದ ಕುರಿತು ಹೊರ ಜಗತ್ತಿನಲ್ಲಿ ಇರುವ ಕಲ್ಪನೆಯೇ ಬೇರೆ. ಅದು ಹಣವಿರುವ ಅತ್ಯಂತ ಸಂಪದ್ಬರಿತ ಮಠ, ಇಲ್ಲಿ ಹಣದ ಕೊಪ್ಪರಿಗೆಯೇ ಇದೆ ಎಂದು ಹಲವಾರು ಭಾವಿಸಿದ್ದಾರೆ. ಆದರೆ ನಿಜವಾಗಿಯೂ ನಮ್ಮಲ್ಲಿ ಹಣದ ಕೊಪ್ಪರಿಗೆ ಇಲ್ಲ. ಎಲ್ಲ ಯೋಜನೆಗಳು ಶೂನ್ಯದಿಂದಲೇ ಆರಂಭಗೊಳ್ಳುತ್ತದೆ. ಆದರೆ ನಮಗೆ ಶಿಷ್ಯರೇ ಸಂಪತ್ತಾಗಿದ್ದು, ನಮ್ಮ ಶಿಷ್ಯರು ಗುರುವಿನ ಯಾವ ಆದೇಶವನ್ನು ಮೀರಿ ನಡೆದವರಲ್ಲ. ಸಂಕಷ್ಟವಿದ್ದಾಗಲೂ ಸಂಭ್ರಮವಿರುವಾಗಲೂ ಮಠದೊಂದಿಗೆ ಅವರ ಭಾವನಾತ್ಮಕವಾದ ಸಂಬಂಧವಿದೆ ಹಾಗಾಗಿಯೇ ಗುರುಗಳು ಎಂತಹ ಯೋಜನೆಗಳನ್ನು ಮುಂದಿಟ್ಟರೂ ನಮ್ಮ ಮಠ ಎಂಬ ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂದರು.

ಗೋಕರ್ಣದಲ್ಲಿ ಶಂಕರಾಚಾರ್ಯರು ಸಂಸ್ಥಾಪಿಸಿದ ಮಠವನ್ನು ಹೊಸನಗರದ ರಾಮಚಂದ್ರಾಪುರ ಮಠ ಶತಮಾನಗಳ ಮೊದಲು ತನ್ನತ್ತ ಎಳೆದುಕೊಂಡಿದೆ. ರಾಮನ ಬಾಣದಿಂದ ಹೊರಹೊಮ್ಮಿದ ಶರಾವತಿ ನದಿಯ ತೀರದಲ್ಲಿ ನಮ್ಮ ಪ್ರಧಾನ ಮಠ ನೆಲನಿಂತಿರುವುದು ವಿಶೇಷವಾಗಿದೆ. ಈ ಪುಣ್ಯ ನೆಲಕ್ಕೆ ವಿಶೇಷ ಮಹತ್ವವಿದೆ. ಹಾಗಾಗಿ ಸುಮ್ಮನೆ ಕಟ್ಟುವ ಕಟ್ಟಡವೂ ಗಟ್ಟಿಯಾಗುವುದು ಇಲ್ಲಿಯ ವಾಡಿಕೆ ಎಂದ ಅವರು ಇಂದಿನ ಶಿಲಾನ್ಯಾಸ ಸಹಸ್ರಮಾನದ ಇತಿಹಾಸಕ್ಕೆ ನಾಂದಿಯಾಗಲಿದೆ ಎಂದರು.

ಈಗಿರುವ ಮಠವನ್ನು ಗಮನಿಸಿದರೆ ಹಿಂದೆ ಯಾವುದೋ ಆಪತ್ಕಾಲದಲ್ಲಿ ಅದನ್ನು ನಿರ್ಮಿಸಿದಂತಿದೆ. ಅದನ್ನು ಸರಿಪಡಿಸುವ ಕಾರ್ಯಕ್ಕೆ ಇದೀಗ ಚಾಲನೆ ದೊರಕಿದ್ದು, ಅಯೋಧ್ಯೆಯ ಪುಣ್ಯ ಮಣ್ಣನ್ನು ಇಲ್ಲಿ ಶಿಲಾನ್ಯಾಸದ ಸಂದರ್ಭದಲ್ಲಿ ನಿಕ್ಷೇಪ ಮಾಡಲಾಗಿದೆ ಎಂದರು.

8 ದಿನಗಳ ವೈಭವದ ಕಾರ್ಯಕ್ರಮ

ಪ್ರಧಾನ ಮಠದ ಪುನರ್ನಿರ್ಮಾಣಕ್ಕೆ 1008 ದಿನಗಳ ಗುರಿಯನ್ನು ನೀಡಲಾಗಿದ್ದು, ಆನಂತರ 8 ದಿನಗಳ ವೈಭವದ ಕಾರ್ಯಕ್ರಮದ ಮೂಲಕ ಪ್ರಧಾನ ಮಠದ ಲೋಕಾರ್ಪಣೆ ನೆರವೇರಲಿದೆ. ಇದು ಈ ಹಿಂದೆ ಇಲ್ಲಿ ನಡೆದ ರಾಮಾಯಣ ಮಹಾಸತ್ರ ಹಾಗೂ ವಿಶ್ವ ಗೋಸಮ್ಮೇಳನದ ವೈಭವವನ್ನು ನೆನಪಿಸುವಂತಿರಲಿದೆ ಎಂದು ತಿಳಿಸಿದರು.

ಮಾಜಿ ಗೃಹ ಸಚಿವ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಜೀವನದಲ್ಲಿ ನಿಜವಾದ ಪವಾಡಗಳನ್ನು ನೋಡುವಂತೆ ಮಾಡಿದ ಸ್ಥಳ ರಾಮಚಂದ್ರಾಪುರ ಮಠ ಹಾಗೂ ಇಲ್ಲಿನ ಗುರುಗಳು ಎಂದರು.

ಸಾಗರದ ಹಾಗೂ ಹೊಸನಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಗೋಸಂರರಕ್ಷಣೆಯಿಂದಲೇ ಹೆಸರು ಪಡೆದಿರುವ ನಮ್ಮ ಮಠ ಅಭಿವೃದ್ದಿಯಾಗಬೇಕು ಎನ್ನುವುದು ನಮ್ಮ ಕನಸು ಮನಸ್ಸು ಎಲ್ಲವೂ ಹೌದು. ಆ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಹಕಾರಕ್ಕೆ ನಾನು ಬದ್ದನಿದ್ದೇನೆ ಎಂದರು.

ಮಲೆನಾಡ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ 2007-08 ರಲ್ಲಿ ಶ್ರೀಮಠದಲ್ಲಿ ನಡೆದಿದ್ದ, ದೇಶ ವಿದೇಶಗಳ ಲಕ್ಷಾಂತರ ಜನರು ಬಂದಿದ್ದ ರಾಮಾಯಣ ಮಹಾಸತ್ರ ಹಾಗೂ ವಿಶ್ವ ಗೋಸಮ್ಮೇಳನದ ನೆನಪನ್ನು ಹಂಚಿಕೊಂಡರು. ಶಿಮುಲ್ ಅಧ್ಯಕ್ಷ ವಿದ್ಯಾಧರ ಗುರುಶಕ್ತಿ ಮಾತನಾಡಿ ಈ ಮಹಾನ್ ಕಾರ್ಯಕ್ಕೆ ತಮ್ಮ ಬೆಂಬಲವನ್ನು ತಿಳಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಪ್ರಧಾನಮಠದ ಪುನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಪ್ರಭಾಕರ್‍ರಾವ್ ಕಾರಣಗಿರಿ, ಸಮಿತಿಯ ಕಾರ್ಯಾಧ್ಯಕ್ಷ ಗಣಪತಿ ಭಟ್ ಜಟ್ಟಿಮನೆ, ಶಾಸನ ತಂತ್ರದ ಅಧ್ಯಕ್ಷ ಮೋಹನಭಾಸ್ಕರ ಹೆಗಡೆ ಮುಂತಾದವರು ಉಪಸ್ಥಿತಿತರಿದ್ದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಶಿಷ್ಯ - ಭಕ್ತರು ಕಾರ್ಯಕ್ರಮಗಳಿಗೆ ಸಾಕ್ಷಿಯಾದರು.

ಇದಕ್ಕೂ ಮುನ್ನ ಬೆಳಗ್ಗೆ 9 ಗಂಟೆಗೆ ಶಿಲಾನ್ಯಾಸದ ಶಿಲೆಯ ಮೆರವಣಿಗೆ, ಗುರುನಿವಾಸ ನಿರ್ಮಾಣದ ಸ್ಥಳದಲ್ಲಿ ಶ್ರೀಗುರುಪಾದುಕಾ ಸ್ತೋತ್ರ ಸಮರ್ಪಣೆ, ಶ್ರೀರಾಮತಾರಕ ಜಪ, ಸಹಸ್ರಾಧಿಕ ಕುಂಕುಮಾರ್ಚನೆ, ಶತಾಧಿಕ ರುದ್ರಪಠಣಪೂರ್ವಕ ಅಭಿಷೇಕ, ಶಾರದಾಷ್ಟಕ ಪಠಣ, ಹಾಗೂ ವಿಶೇಷವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು, ಸಾಗರ, ಕಾಸರಗೋಡು ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಶಿಷ್ಯರಿಂದ ಮುಷ್ಟದ್ರವ್ಯ ಸಮರ್ಪಣೆ ನಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಟ್ಟಿ ಗೋಲ್ಡ್ ಮೈನ್ಸ್‌ ಎದುರು ಸ್ಫೋಟಕಗಳ ರಾಶಿ!: ಸಿಸಿಟಿವಿಯಲ್ಲಿ ಕಂಡ ನಂಬರ್ ಪ್ಲೇಟ್ ಇಲ್ಲದ ಆ ನಿಗೂಢ ಬೈಕ್ ಯಾರದ್ದು?
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಎಲ್ಲಾ ರೈತರಿಗೆ ಪರಿಹಾರ