ಹತ್ತಾರು ವರ್ಷ ಬಿಟ್ಟು ಹೋದವರು ಹತ್ತಿರಕ್ಕೆ ಬಂದಿದ್ದರಿಂದ ಹೊಸ ಕನಸು ಚಿಗುರೊಡೆದಿದೆ. ಅವರು ರಾಜ್ಯ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು(ಜ.09): ಆರು ಮಂದಿ ನಕ್ಸಲರು ಬುಧವಾರ ಬಂದೂಕು ಹೋರಾಟ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ಅವರ ಪೋಷಕರು, ಒಡ ಹುಟ್ಟಿದವರು, ಸಂಬಂಧಿಕರಲ್ಲಿ ಸಂತಸ ತಂದಿದೆ. ಹತ್ತಾರು ವರ್ಷ ಬಿಟ್ಟು ಹೋದವರು ಹತ್ತಿರಕ್ಕೆ ಬಂದಿದ್ದರಿಂದ ಹೊಸ ಕನಸು ಚಿಗುರೊಡೆದಿದೆ. ಅವರು ರಾಜ್ಯ ಸರ್ಕಾರಕ್ಕೂ ಅಭಿನಂದನೆ ಸಲ್ಲಿಸಿದ್ದಾರೆ. 'ಕನ್ನಡಪ್ರಭ' ದೊಂದಿಗೆ ಮನದಾಳ ಬಿಚ್ಚಿಟ್ಟಿದ್ದಾರೆ.
ಖುಷಿಯಾಗ್ತಾ ಇದೆ
ಮನೆ ಬಿಟ್ಟು ಹೋಗಿ 17-18 ವರ್ಷದಿಂದ ಯಾವುದೇ ಸಂಪರ್ಕ ಇಲ್ಲ. ಅವರನ್ನು ಮುಖ್ಯ ವಾಹಿನಿಗೆ ತರಲು ಕಳೆದ 15 ದಿನಗಳಿಂದ ನಾವು ಮುಂಡಗಾರು, ಹಗಲಗಂಜಿ ಸೇರಿ ಸುತ್ತಮುತ್ತ ತಿರುಗಾಡಿದ್ದೇವೆ. ಮೀಸಲು ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಹೋರಾಟದಲ್ಲಿ ನಾನು ಸಹ ಇದ್ದೆ. ಸಂವಿಧಾನಬದ್ದ ಹೋರಾಟ ಮುಂದುವರಿಸುತ್ತೇನೆ. ವನಜಾಕ್ಷಿ ಮನೆಗೆ ಬರುತ್ತಿರುವುದು ಖುಷಿ ತಂದಿದೆ ಎಂದು ಯಶೋಧ ವನಜಾಕ್ಷಿ ಸಹೋದರಿ ತಿಳಿಸಿದ್ದಾರೆ. '
ಶಸ್ತ್ರಾಸ್ತ್ರ ಹೋರಾಟ ಗೊತ್ತಿಲ್ಲ
10-15 ವರ್ಷಗಳಿಂದ ನಮ್ಮ ಕಣ್ಣಿಗೆ ಬಿದ್ದಿಲ್ಲ. ಲತಾಳನ್ನು ಹುಡುಕಿಕೊಡಿ ಎಂದು ಪೋಲೀಸರು ಕಿರುಕುಳ ನೀಡಿದ್ದರು. ಆ ಹೋರಾಟದ ಬಗ್ಗೆ ನಮಗೆ ಗೊತ್ತಿಲ್ಲ, ಪೊಲೀಸರಿಂದ ಚಿತ್ರ ಹಿಂಸೆ ಅನುಭವಿಸಿದ್ದೇವೆ. ಸರ್ಕಾರ ಅವರಿಗೆ ಒಳ್ಳೆಯ ರೀತಿ ಕೆಲಸ ಕೊಡಬೇಕು. ಶಸ್ತ್ರಾಸ್ತ್ರ ಹೋರಾಟದ ಬಗ್ಗೆ ಗೊತ್ತಿಲ್ಲ, ಈ ಬಗ್ಗೆ ತಿಳಿವಳಿಕೆ ಇಲ್ಲ. ಕಿರಿಯ ತಂಗಿ ಬಂದಿದ್ದು ಖುಷಿ ಆಯಿತು. ಕೇಸ್‌ಗಳನ್ನು ಕೂಡಲೇ ವಾಪಸ್ ತೆಗೆದುಕೊಳ್ಳಬೇಕು ಎಂದು ಲತಾ ಅಣ್ಣ ಶೇಷೇಗೌಡ ಮುಂಡಗಾರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಕಿದ ಒಂದೇ ಅವಾಜ್‌ಗೆ ಸರ್ಕಾರಕ್ಕೆ ಶರಣಾಗಲು ಒಪ್ಪಿಕೊಂಡ 6 ನಕ್ಸಲರು!
ಕೇಸ್ ವಾಪಸ್ ಪಡೆಯಬೇಕು
ನಮ್ಮೂರ ಕಡೆ ಬಡವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿತ್ತು. ಆಗ ಪ್ರಜ್ಞಾವಂತರ ತಂಡ ತೆರೆ ಮರೆಯಲ್ಲಿ ಕೆಲಸ ಮಾಡುವ ತೀರ್ಮಾನಕ್ಕೆ ಬಂದಿತು. ಸರ್ಕಾರ ಉದ್ದೇಶ ಪೂರ್ವಕವಾಗಿ ಜನರ ಸಮಸ್ಯೆಯನ್ನು ತಿರಸ್ಕಾರ ಮಾಡಿದ್ದರಿಂದ ಅದಕ್ಕೆ ಪರ್ಯಾಯವಾಗಿ ಚಳವಳಿ ಕಟ್ಟಿಕೊಂಡು ಜನರಿಗೆ ಸಹಾಯ ಮಾಡಿದ್ದಾರೆ. ಅವರು ಜನರಿಗೆ ತೊಂದರೆ ಕೊಟ್ಟಿಲ್ಲ. ಸರ್ಕಾರ ಅವರ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು ಎಂದು ಸಹೋದರ ಅಂಬಣ್ಣ ಜಯಣ್ಣ ಅರೋಲಿ ಹೇಳಿದ್ದಾರೆ.
ಮಗನನ್ನು ಮನೆಗೆ ಕಳುಹಿಸಿಕೊಡಿ
ತಮಿಳುನಾಡಿನ ರಾಣಿಪೇಟೆ ಸಮೀಪದ ಅರ್ಕಾಡ್ ಗ್ರಾಮ ನಮ್ಮದು. ವಸಂತ್ ಓದಿನಲ್ಲಿ ಮುಂದಿದ್ದ. ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ್ದ. ಕೊಯಮತ್ತೂರಿನಲ್ಲಿ ಸಂದರ್ಶನ ಇದೆ ಎಂದು ಹೋದವನು ಮನೆಗೆ ಬರಲೇ ಇಲ್ಲ. 10 ವರ್ಷದಿಂದ ಕಾದು ಕುಳಿತುಕೊಂಡಿದ್ದೆವು. ನನ್ನ ಮಗನನ್ನು ನನ್ನ ಮನೆಗೆ ಕಳುಹಿಸಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ತಂದೆ ಕುಮಾರ್ ವಸಂತ್ ತಿಳಿಸಿದ್ದಾರೆ.