
ಬೆಂಗಳೂರು(ಜೂ.16): ನಿರಾಧಾರವಾಗಿ ಪತಿ ವಿರುದ್ಧ ನಪುಂಸಕತ್ವದ ಆರೋಪ ಹೊರಿಸುವುದು ‘ಮಾನಸಿಕ ಕ್ರೌರ್ಯ’ ಎಂದು ವ್ಯಾಖ್ಯಾನಿಸಿರುವ ಹೈಕೋರ್ಟ್, ಅದನ್ನು ಆಧರಿಸಿ ಪತಿ ವಿಚ್ಚೇದನ ಕೋರಬಹುದು ಎಂದು ಆದೇಶಿಸಿದೆ.
ಅಲ್ಲದೆ, ಪ್ರಕರಣವೊಂದರಲ್ಲಿ ಪತಿಯ ವಿರುದ್ಧ ಆಧಾರರಹಿತವಾಗಿ ನಪುಂಸಕತ್ವದ ಆರೋಪ ಹೊರಿಸಿದ ಪತ್ನಿಯ ನಡೆಯನ್ನು ಆಕ್ಷೇಪಿಸಿ, ವಿಚ್ಚೇದನ ಮಂಜೂರು ಮಾಡಿದೆ.
ಸಾಕ್ಷ್ಯಧಾರವಿಲ್ಲದೆ ಪತ್ನಿ ನಪುಂಸಕತ್ವದ ಆರೋಪ ಹೊರಿಸಿ ಘನತೆಗೆ ಧಕ್ಕೆ ತಂದರೂ ವಿಚ್ಚೇದನ ಮಂಜೂರಾತಿ ಮಾಡಲು ನಿರಾಕರಿಸಿದ ಧಾರವಾಡದ ಪ್ರಧಾನ ಕೌಟುಂಬಿಕ ನ್ಯಾಯಾಲಯದ ಕ್ರಮ ರದ್ದುಪಡಿಸುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಹಾಗೆಯೇ, ಜತೆಗೆ, ಪತ್ನಿ ಮರುಮದುವೆಯಾಗುವರೆಗೂ ಪತ್ನಿಗೆ ಮಾಸಿಕ ಎಂಟು ಸಾವಿರ ರು. ಜೀವನಾಂಶ ನೀಡಬೇಕು ಎಂದು ಪತಿಗೆ ಆದೇಶಿಸಿದೆ.
ಪ್ರಕರಣವೇನು?
ಧಾರವಾಡದ ರಾಜು ಮತ್ತು ಹಾವೇರಿಯ ರಮ್ಯಾ (ಹೆಸರು ಬದಲಿಸಲಾಗಿದೆ) ಅವರು 2013ರ ಮೇ 13ರಂದು ವಿವಾಹವಾಗಿದ್ದರು. ಕೆಲ ತಿಂಗಳ ನಂತರ ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ರಾಜು, ಮದುವೆಯಾದ ಒಂದು ತಿಂಗಳವರೆಗೂ ಪತ್ನಿ ವೈವಾಹಿಕ ಜೀವನಕ್ಕೆ ಅಗತ್ಯ ಸಹಕಾರ ನೀಡುತ್ತಿದ್ದರು. ತದನಂತರ ಆಕೆಯ ನಡೆವಳಿಕೆಯಲ್ಲಿ ಬದಲಾವಣೆಯಾಗಿತ್ತು. ಮನೆ ಕೆಲಸ ನಿರ್ವಹಿಸಲು ನಿರಾಕರಿಸುತ್ತಿದ್ದಳು. ವೈವಾಹಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರಲಿಲ್ಲ. ನಾನು ಲೈಂಗಿಕ ಕ್ರಿಯೆ ನಡೆಸಲು ಅಸಮರ್ಥನಾಗಿದ್ದೇನೆ ಎಂದು ಪದೇ ಪದೇ ಸಂಬಂಧಿಕರ ಮುಂದೆ ಹೇಳುತ್ತಿದ್ದಳು. ಇದರಿಂದ ನನಗೆ ತುಂಬಾ ಮುಜುಗರ ಉಂಟಾಗುತ್ತಿತ್ತು. ಪತ್ನಿ ಈ ನಡೆಯಿಂದ ಮಾನಸಿಕ ಹಿಂಸೆ ಉಂಟಾಗುತ್ತಿದ್ದು, ವಿಚ್ಚೇದನ ಮಂಜೂರು ಮಾಡಬೇಕು ಎಂದು ಕೋರಿದ್ದರು. ಆದರೆ, ರಾಜು ಅವರ ಮನವಿಯನ್ನು ೨೦೧೫ರ ಜು.೧೭ರಂದು ಧಾರವಾಡ ಪ್ರಧಾನ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ರಾಜು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ರಾಜು ಅವರ ವಾದವನ್ನು ಆಕ್ಷೇಪಿಸಿದ್ದ ರಮ್ಯಾ, ಗಂಡನ ಮನೆಗೆ ತೆರಳಿ ಸಂತೋಷಕರವಾದ ಜೀವನ ನಡೆಸುತ್ತಿದ್ದೆ. ಆದರೆ, ಗಂಡನೇ ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇದರಿಂದ ವೈವಾಹಿಕ ಜೀವನದಲ್ಲಿ ಸುಖ ಮತ್ತು ನೆಮ್ಮದಿ ಇಲ್ಲದಂತಾಯಿತು. ಗಂಡನಿಗೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತಿ ಇರಲಿಲ್ಲ. ಒಂದಲ್ಲಾ ಒಂದು ಕಾರಣದಿಂದ ಸದಾ ಒಂಟಿಯಾಗಿಯೇ ಇರುತ್ತಿದ್ದರು. ವೈವಾಹಿಕ ಜೀವನ ನಡೆಸಲು ತಾನು ಸದಾ ಸಿದ್ಧಳಿದ್ದೇನೆ. ಆದರೆ, ಗಂಡನೇ ತನ್ನ ಲೋಪ ಮರೆಮಾಚಲು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಪತಿ ವೈವಾಹಿಕ ಜೀವನದ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಲೈಂಗಿಕ ಕ್ರಿಯೆಗೆ ನಡೆಸಲು ಅಸಮರ್ಥ ಎಂಬುದಾಗಿ ಪತ್ನಿ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವು ಸತ್ಯವೆಂದು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಧಾರ ಒದಗಿಸಿಲ್ಲ. ಸಾರ್ವಜನಿಕವಾಗಿ ಇಂತಹ ನಿರಾಧಾರ ಆರೋಪ ಮಾಡುವುದರಿಂದ ಪತಿಯ ಘನತೆಗೆ ಧಕ್ಕೆ ತಂದಂತಾಗುತ್ತದೆ. ಪ್ರಜ್ಞಾವಂತ ಮಹಿಳೆ ಮತ್ತೊಬ್ಬರ ಮುಂದೆ ಗಂಡನ ನಪುಂಸಕತ್ವದ ಬಗ್ಗೆ ಸುಳ್ಳು ಆರೋಪ ಮಾಡುವುದಿಲ್ಲ. ಸಾಕ್ಷ್ಯಧಾರವಿಲ್ಲದೆ ಪತಿ ಮಕ್ಕಳನ್ನು ಹೊಂದಲು ಅಸಮರ್ಥ ಎಂಬುದಾಗಿ ಆರೋಪಿಸುವುದು ಮಾನಸಿಕ ಕ್ರೌರ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ತಾನು ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಿದ್ಧವಾಗಿರುವುದಾಗಿ ಪತಿ ತಿಳಿಸಿದ್ದರು. ಆದರೆ, ಪತ್ನಿ ಮಾತ್ರ ಪತಿಯ ನಪುಂಸಕತ್ವವನ್ನು ವೈದ್ಯಕೀಯ ದಾಖಲೆಗಳೊಂದಿಗೆ ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಲೈಂಗಿಕ ಕ್ರಿಯೆ ಅಸಮರ್ಥರೆಮದು ಆರೋಪ ಮಾಡುವುದರಿಂದ ಪತಿ-ಪತ್ನಿ ನಡುವೆ ಸಾಮರಸ್ಯ ರಹಿತ ವಾತಾವರಣ ಮತ್ತು ಒಂದಾಗಿ ಜೀವನ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹಿಂದು ವಿವಾಹ ಕಾಯ್ದೆ-1955ರ ಸೆಕ್ಷನ್ 13 ಅಡಿಯಲ್ಲಿ ನಪುಂಸಕತ್ವವು ವಿಚ್ಚೇದನ ಪಡೆಯಲು ಕಾರಣವಲ್ಲ ಎಂದು ಹೇಳಲಾಗಿದೆ. ಆದರೆ, ಕಾಯ್ದೆಯ ಸೆಕ್ಷನ್ 13(1)(ಐಎ) ಅಡಿಯಲ್ಲಿ ನಪುಸಂಕತ್ವದ ಕುರಿತು ಸುಳ್ಳು ಆರೋಪ ಮಾಡಿದರೆ ಮಾನಸಿಕ ಕ್ರೌರ್ಯ ವಾಗುತ್ತದೆ. ಈ ಅಂಶದ ಮೇಲೆ ಪತಿಯು ವಿಚ್ಛೇದನ ಕೋರಬರಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂತಿಮವಾಗಿ ಧಾರವಾಡ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್, ದಂಪತಿಗೆ ವಿಚ್ಚೇದನ ಮಂಜೂರು ಮಾಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ