
ಬೆಂಗಳೂರು(ಜೂ.16): ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಪೊಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ) ಅಡಿಯಲ್ಲಿ ದಕ್ಷಿಣ ಭಾರತ ಚಚ್‌ರ್‍ಗಳ ಬಿಷಪ್ ಪ್ರಸನ್ನಕುಮಾರ್ ಸ್ಯಾಮ್ಯುಯೆಲ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ನಗರದ ಕಬ್ಬನ್‌ಪಾರ್ಕ್ ಠಾಣಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಮತ್ತು ಆ ಕುರಿತು ವಿಚಾರಣಾ ನ್ಯಾಯಾಲಯ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ರೆವರೆಂಡ್ ಪ್ರಸನ್ನಕುಮಾರ್ ಸ್ಯಾಮ್ಯುಯೆಲ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಹೇಮಂತ ಚಂದಗೌಡರ ಅವರ ಏಕಸದಸ್ಯ ನ್ಯಾಯಪೀಠ, ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆ ಮತ್ತು ದೋಷಾರೋಪ ಪಟ್ಟಿಪರಿಶೀಲಿಸಿದಾಗ ಅರ್ಜಿದಾರರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಧಾರ ಲಭ್ಯ ಇಲ್ಲದಿರುವುದು ಗಮನಕ್ಕೆ ಬರುತ್ತದೆ. ತನಿಖಾಧಿಕಾರಿಗಳು ಸಹ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂಬುದಾಗಿ ಹೇಳಿದ್ದಾರೆ. ಆದರೆ, ವಿಚಾರಣಾ ನ್ಯಾಯಾಲಯ ಮಾತ್ರ ಸರ್ಕಾರಿ ಅಭಿಯೋಜಕರ ಮನವಿ ಪರಿಗಣಿಸಿ ಅರ್ಜಿದಾರರಿಗೆ ಸಮನ್ಸ್ ಜಾರಿ ಮಾಡಿರುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟಿತು.
ನಂತರ ಪ್ರಸನ್ನಕುಮಾರ್ ವಿರುದ್ಧ ವಿಚಾರಣೆಗಾಗಿ ನ್ಯಾಯಾಲಯ ಜಾರಿಗೊಳಿಸಿದ್ದ ಸಮನ್ಸ್, ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಮತ್ತು ನಗರದ 50ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಲಯದಲ್ಲಿದ್ದ ವಿಚಾರಣೆ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಿಷಪ್ ರೆವರೆಂಡ್ ಪ್ರಸನ್ನಕುಮಾರ್ ಸ್ಯಾಮ್ಯುಯೆಲ್ ಮತ್ತು ಇತರೆ ನಾಲ್ವರ ವಿರುದ್ಧ ನಗರದ ಕಬ್ಬನ್‌ಪಾರ್ಕ್ ಠಾಣೆಯ ಪೊಲೀಸರು 2015ರ ಜ.10ರಂದು ಪೋಕ್ಸೋ ಕಾಯ್ದೆ, ಜೀವ ಬೆದರಿಕೆ, ಅವಮಾನ ಮತ್ತು ಹಲ್ಲೆ ಮಾಡಿದ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ 2016ರ ಫೆ.11ರಂದು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಆದರೆ, ಪ್ರಕರಣದಲ್ಲಿ ಬಿಷಪ್ ಪ್ರಸನ್ನ ಕುಮಾರ್ ಪಾತ್ರ ಕಂಡುಬರದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದ್ದರು. ಆದರೆ, ವಿಚಾರಣಾ ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರು ಅರ್ಜಿ ಸಲ್ಲಿಸಿ, ಪ್ರಸನ್ನ ಕುಮಾರ್ ವಿರುದ್ಧ ಕೆಲ ಆರೋಪಗಳಿವೆ. ಸಂತ್ರಸ್ತೆಯ ತನ್ನ ಹೇಳಿಕೆಯಲ್ಲಿ ಬಿಷಪ್ ಮೇಲೆ ಆರೋಪ ಮಾಡಿದ್ದಾಳೆ. ಆದರೂ ಸಹ ತನಿಖಾಧಿಕಾರಿಗಳು ಪ್ರಸನ್ನಕುಮಾರ್ ವಿರುದ್ಧ ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು.
ಅದನ್ನು ಗಂಭೀರವಾಗಿ ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಪ್ರಸನ್ನ ಕುಮಾರ್‌ಗೆ ಸಮನ್ಸ್ ಜಾರಿ ಮಾಡಿ 2017ರ ಡಿಸೆಂಬರ್ 12ರಂದು ಆದೇಶಿಸಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ