ರಾಜ್ಯಕ್ಕೆ ಮುಂಗಾರು ವಿಳಂಬವಾಗಿ ಆಗಮಿಸಿರುವುದರಿಂದ ಆತಂಕಪಡುವ ಅಗತ್ಯವಿಲ್ಲ. ಕೃಷಿ ಚಟುವಟಿಕೆಗಳ ಮೇಲೆ ಇದು ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಜೂ.11): ರಾಜ್ಯಕ್ಕೆ ಮುಂಗಾರು ವಿಳಂಬವಾಗಿ ಆಗಮಿಸಿರುವುದರಿಂದ ಆತಂಕಪಡುವ ಅಗತ್ಯವಿಲ್ಲ. ಕೃಷಿ ಚಟುವಟಿಕೆಗಳ ಮೇಲೆ ಇದು ಪ್ರತಿಕೂಲ ಪರಿಣಾಮ ಉಂಟಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ನೈರುತ್ಯ ಮುಂಗಾರು ಒಂದು ವಾರ ತಡವಾಗಿ ಮುಂಗಾರು ಆಗಮನವಾಗಿದ್ದರೂ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರುವುದಿಲ್ಲ. ಮುಂದಿನ ವಾರಗಳಲ್ಲಿ ರಾಜ್ಯದಲ್ಲಿ ಬಿತ್ತನೆ ಬಿರುಸಾಗಲಿದೆ. ಆದರೆ ಮಳೆ ವಿಳಂಬವಾಗಿದ್ದರಿಂದ ಜಲಾಶಯಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಲಿದೆ. ಮುಂಗಾರು ವಿಳಂಬವಾದರೂ ಉತ್ತಮ ಮಳೆಯಾಗಿರುವ ನಿದರ್ಶನವಿದೆ ಎಂದು ಕೃಷಿ ಹವಾಮಾನ ತಜ್ಞ ಪ್ರೊ.ರಾಜೇಗೌಡ ತಿಳಿಸಿದ್ದಾರೆ.
‘ಪೂರ್ವ ಮುಂಗಾರಿನಲ್ಲಿ ರಾಜ್ಯದಲ್ಲಿ ಸರಾಸರಿಗಿಂತ ಶೇ.1 ರಷ್ಟುಮಳೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿನಲ್ಲಿ ಮಳೆ ಜಾಸ್ತಿಯಾಗಿದೆ. ಆದರೆ ಕರಾವಳಿ ಮತ್ತು ಘಟ್ಟಪ್ರದೇಶದಲ್ಲಿ ಕಡಿಮೆ ಮಳೆಯಾಗಿತ್ತು. ಉತ್ತರ ಕರ್ನಾಟಕದಲ್ಲೂ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಇದರ ಪರಿಣಾಮವಾಗಿ ಕರಾವಳಿ, ಉತ್ತರ ಒಳನಾಡು ಮತ್ತು ಘಟ್ಟಪ್ರದೇಶದಲ್ಲಿ ಈಗ ಮುಂಗಾರು ಮಳೆ ಸರಾಸರಿಗಿಂತ ಹೆಚ್ಚಾಗಿ ಬರುವ ಮುನ್ಸೂಚನೆಯಿದೆ’ ಎಂದು ಹೇಳಿದರು.
ನಮಗೇ ನೀರಿಲ್ಲ, ತಮಿಳ್ನಾಡಿಗೆ ಹೇಗೆ ಕೊಡುವುದು: ಸಿಎಂ ಸಿದ್ದರಾಮಯ್ಯ
ಶೇ.4 ಮಾತ್ರ ಕೊರತೆ ಮುನ್ಸೂಚನೆ: ‘ರಾಷ್ಟ್ರೀಯ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದಲ್ಲಿ ಶೇ.96 ರಷ್ಟುಮಳೆ ಬರುವ ಸಾಧ್ಯತೆಯಿದೆ. ರಾಜ್ಯದಲ್ಲಿ 850 ರಿಂದ 860 ಮಿ.ಮೀ. ಮಳೆ ಬರಬೇಕು. ದಕ್ಷಿಣ ಒಳನಾಡಿನಲ್ಲಿ 420 ಮಿ.ಮೀ., ಉತ್ತರ ಒಳನಾಡಿನಲ್ಲಿ 400 ಮಿ.ಮೀ., ಘಟ್ಟಪ್ರದೇಶದಲ್ಲಿ 1200 ಮಿ.ಮೀ., ಕರಾವಳಿಯಲ್ಲಿ 2200-3000 ಸೇರಿದಂತೆ ಒಟ್ಟಾರೆ ರಾಜ್ಯದಲ್ಲಿ 850-860 ಮಿ.ಮೀ. ಮಳೆಯಾಗುವ ಮುನ್ಸೂಚನೆಯಿದ್ದು 32-35 ಮಿ.ಮೀ.(ಶೇ.4) ಮಳೆ ಕೊರತೆಯಾಗುವ ಸಾಧ್ಯತೆಯಿದೆ’ ಎಂದು ಸ್ಪಷ್ಟಪಡಿಸಿದರು.
‘ಉತ್ತರ ಒಳನಾಡಿನಲ್ಲಿ ಜೂನ್ 4 ನೇ ವಾರದಿಂದ ಹೆಚ್ಚಾಗಿ ಬಿತ್ತನೆ ಆರಂಭವಾಗಲಿದ್ದು, ಜೋಳ, ಅಲಸಂದೆ, ಶೇಂಗಾ, ತೊಗರಿ ಮತ್ತಿತರ ಧಾನ್ಯಗಳ ಬಿತ್ತನೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ ಜುಲೈ ಎರಡನೇ ವಾರದಿಂದ ಬಿತ್ತನೆ ಹೆಚ್ಚಾಗಲಿದ್ದು ರಾಗಿ, ತೊಗರಿ, ಶೇಂಗಾ, ನೀರಾವರಿ ಆಶ್ರಿತದಲ್ಲಿ ಕಬ್ಬು ಮತ್ತು ಭತ್ತ ನಾಟಿ ಮಾಡಲಾಗುತ್ತದೆ. ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಪೂರ್ವ ಮುಂಗಾರು ಉತ್ತಮವಾಗಿ ಬಂದಿರುವುದರಿಂದ ಮಣ್ಣಿನಲ್ಲಿ ತೇವಾಂಶವಿದ್ದು ತೊಂದರೆ ಆಗುವುದಿಲ್ಲ’ ಎಂದು ತಿಳಿಸಿದರು.
ಜಲಾಶಯದ ಒಳ ಹರಿವು ಕಡಿಮೆ, ಏಕದಳ ಧಾನ್ಯಗಳ ಇಳುವರಿ ಕುಂಠಿತ: ಮುಂಗಾರು ವಿಳಂಬದಿಂದ ಕರಾವಳಿ, ಮಲೆನಾಡಿನ ಕೆಲ ಭಾಗಗಳಲ್ಲಿ ಮಾತ್ರ ಬಿತ್ತನೆಗೆ ಹಿನ್ನಡೆಯಾಗಿದೆ. ಜಲಾಶಯಗಳಿಗೆ ನೀರಿನ ಒಳ ಹರಿವು ಶುರುವಾಗುವುದು ಸಹ ಸ್ವಲ್ಪ ತಡವಾಗಲಿದೆ. ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಕಡಿಮೆ ಮಳೆಯಾಗುವ ಮುನ್ಸೂಚನೆಯಿದ್ದು ಜಲಾಶಯಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ನೀರು ಶೇಖರಣೆಯಾಗಲಿದೆ’ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ತಜ್ಞ ಪ್ರೊ.ಎಂ.ಎನ್.ತಿಮ್ಮೇಗೌಡ ತಿಳಿಸಿದ್ದಾರೆ.
ಬಿಜೆಪಿಗೆ ಮೋದಿ ಇದ್ದಂತೆ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ: ಎಂಟಿಬಿ ನಾಗರಾಜ್ ಹೊಗಳಿಕೆ!
‘ಫೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶದ ಏರುಪೇರಿನಿಂದ ಉಂಟಾಗುವ ಬದಲಾವಣೆಯನ್ನು ಲಾ ನಿನೋ, ಎಲ್‌ನಿನೋ ಎಂದು ಕರೆಯಲಾಗುತ್ತದೆ. ಲಾ ನಿನೋದಿಂದಾಗಿ ನಮಗೆ ಕಳೆದ ನಾಲ್ಕು ವರ್ಷದಲ್ಲಿ ಉತ್ತಮ ಮಳೆಯಾಗಿತ್ತು. ಈಗ ಎಲ್‌ನಿನೋದಿಂದಾಗಿ ನಾಲ್ಕೈದು ವರ್ಷ ಮಳೆ ಕಡಿಮೆಯಾಗಲಿದ್ದು ಏಕದಳ ಧಾನ್ಯಗಳ ಇಳುವರಿ ಕುಂಠಿತವಾಗುವ ಸಾಧ್ಯತೆಯಿದೆ’ ಎಂದು ವಿವರಿಸಿದರು.