ಇನ್ನು 15 ದಿನ ಕೋವಿಡ್‌ ಪರೀಕ್ಷೆ ಹೆಚ್ಚಿಸಿ: ತಜ್ಞರು

Kannadaprabha News   | Asianet News
Published : Nov 04, 2021, 07:19 AM ISTUpdated : Nov 04, 2021, 07:32 AM IST
ಇನ್ನು 15 ದಿನ ಕೋವಿಡ್‌ ಪರೀಕ್ಷೆ ಹೆಚ್ಚಿಸಿ: ತಜ್ಞರು

ಸಾರಾಂಶ

ಪುನೀತ್‌ ರಾಜ್‌ಕುಮಾರ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಆಗಮನ ಸಿಂದಗಿ, ಹಾನಗಲ್‌ ಉಪ ಚುನಾವಣೆಯಲ್ಲಿ ಕೊರೋನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಿಲ್ಲ.  ಹೀಗಾಗಿ ಮುಂದಿನ 15 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಲು ಸೂಚನೆ

 ಬೆಂಗಳೂರು (ನ.04):  ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಆಗಮಿಸಿದ್ದ ವೇಳೆಯಲ್ಲಿ ಹಾಗೂ ಸಿಂದಗಿ (Sindagi), ಹಾನಗಲ್‌ ಉಪ ಚುನಾವಣೆಯಲ್ಲಿ (By election) ಕೊರೋನಾ ನಿಯಂತ್ರಣ (Covid Control) ಮಾರ್ಗಸೂಚಿ ಪಾಲಿಸಿಲ್ಲ. ಹೀಗಾಗಿ ಮುಂದಿನ 15 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಿ ಬೆಂಗಳೂರು ನಗರ (Bengaluru city) ಹಾಗೂ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಪರೀಕ್ಷೆ ಹೆಚ್ಚಳ ಮಾಡುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.

ಮೂರನೇ ಅಲೆಯ ಆತಂಕದ ನಡುವೆ ಪುನೀತ್‌ ರಾಜ್‌ಕುಮಾರ್‌ ಅಂತಿಮ ದರ್ಶನಕ್ಕಾಗಿ ಬೆಂಗಳೂರು (Bengaluru) ನಗರದಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಈ ವೇಳೆ ಸಾಮಾಜಿಕ ಅಂತರ (social Distance) ಸೇರಿದಂತೆ ಯಾವುದೇ ಕೊರೋನಾ ಮಾರ್ಗಸೂಚಿ ಪಾಲಿಸಲು ಸಾಧ್ಯವಾಗಿಲ್ಲ. ಹಠಾತ್‌ ಉಂಟಾದ ಘಟನೆಯಿಂದ ಅನಿವಾರ್ಯವಾಗಿ ಅಂತಿಮ ದರ್ಶನಕ್ಕೆ ಅವಕಾಶ ನೀಡಬೇಕಾಯಿತು. ಆದರೆ, ಈ ಬಗ್ಗೆ ಮುಂದಿನ 15 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಬೇಕಾಗಿದ್ದು, ಬೆಂಗಳೂರು ನಗರದಲ್ಲಿ ಕೊರೋನಾ ಪರೀಕ್ಷೆಗಳ ಪ್ರಮಾಣ ಹೆಚ್ಚಳ ಮಾಡಬೇಕು ಎಂದು ಸಲಹೆ ನೀಡಿದೆ.

ಶೇ.20ರಷ್ಟುಪರೀಕ್ಷೆ ಹೆಚ್ಚಳ:

ಅ.10ರಂದು ನಡೆದಿದ್ದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್‌ ತಿಂಗಳಲ್ಲಿ ನಿತ್ಯ 1.1 ಲಕ್ಷ ಕೊರೋನಾ ಪರೀಕ್ಷೆ ನಡೆಸಬೇಕು. ಈ ಪೈಕಿ ಬೆಂಗಳೂರು ನಗರದಲ್ಲಿ 50 ಸಾವಿರ ಪರೀಕ್ಷೆ ಹಾಗೂ ರಾಜ್ಯದ (Karnataka) ಇತರೆ ಭಾಗಗಳಲ್ಲಿ 60 ಸಾವಿರ ಪರೀಕ್ಷೆ ನಡೆಸಬೇಕು. ರಾಜ್ಯದ ಇತರೆ ಭಾಗದಲ್ಲಿ ನಡೆಸುವ ಒಟ್ಟು ಪರೀಕ್ಷೆಯಲ್ಲಿ ಶೇ.50ರಷ್ಟನ್ನು ಗಡಿ ಭಾಗದಲ್ಲಿ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು.

ಇದೀಗ ಪುನೀತ್‌ ಅಂತಿಮ ದರ್ಶನಕ್ಕಾಗಿ ನಾಲ್ಕು ದಿನಗಳ ಕಾಲ ಲಕ್ಷಾಂತರ ಮಂದಿ ಒಂದೆಡೆ ಸೇರಿದ್ದ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ಕಾಲ ಬೆಂಗಳೂರಿನಲ್ಲಿ ರೋಗಲಕ್ಷಣಗಳಿರುವ ವ್ಯಕ್ತಿಗಳ ಪರೀಕ್ಷೆಯನ್ನು ಹೆಚ್ಚು ಮಾಡಬೇಕು. ಕನಿಷ್ಠ ಶೇ.20ರಷ್ಟುಪರೀಕ್ಷೆಗಳನ್ನು ಹೆಚ್ಚಳ ಮಾಡಬೇಕು ಎಂದು ತಿಳಿಸಲಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಎಂ.ಕೆ. ಸುದರ್ಶನ್‌ ಹೇಳಿದ್ದಾರೆ.

ಮೆಡಿಕಲ್‌ ಸ್ಟೋರ್‌ಗಳಲ್ಲಿ ಮಾಹಿತಿ:

ಇನ್ನು 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮತ್ತೆ ಮೆಡಿಕಲ್‌ ಸ್ಟೋರ್‌ಗಳಲ್ಲಿ ನೆಗಡಿ, ಜ್ವರ, ಉಸಿರಾಟ ತೊಂದರೆಗಳಿಗೆ ಔಷಧ ಪಡೆಯುವವರ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ. ರೋಗ ಲಕ್ಷಣಗಳುಳ್ಳವರು ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಜನದಟ್ಟಣೆಯ ಪ್ರದೇಶದಲ್ಲಿ ಪರೀಕ್ಷೆ ಹೆಚ್ಚಳ:

ಕೊರೋನಾ ಪರೀಕ್ಷೆಯ ನೋಡಲ್‌ ಅಧಿಕಾರಿ ಡಾ.ಸಿ.ಎನ್‌.ಮಂಜುನಾಥ್‌, ಜನದಟ್ಟಣೆಯ ಸ್ಥಳಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಲಾಗುವುದು. ಪುನೀತ್‌ ಅಂತಿಮ ದರ್ಶನ ಹಾಗೂ ಉಪ ಚುನಾವಣೆಗಳಿಂದಾಗಿ ಮಾರುಕಟ್ಟೆಸ್ಥಳಗಳು, ಬಸ್ಸು ನಿಲ್ದಾಣದಂತಹ ಜನದಟ್ಟಣೆಯ ಪ್ರದೇಶಗಳಲ್ಲಿ ಹೆಚ್ಚೆಚ್ಚು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

  •  ಪುನೀತ್‌ ರಾಜ್‌ಕುಮಾರ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ 20 ಲಕ್ಷಕ್ಕೂ ಹೆಚ್ಚು ಜನ 
  • ಸಿಂದಗಿ, ಹಾನಗಲ್‌ ಉಪ ಚುನಾವಣೆಯಲ್ಲಿ ಕೊರೋನಾ ನಿಯಂತ್ರಣ ಮಾರ್ಗಸೂಚಿ ಪಾಲಿಸಿಲ್ಲ
  •  15 ದಿನಗಳ ಕಾಲ  ಬೆಂಗಳೂರು ನಗರ ಹಾಗೂ ಎರಡೂ ವಿಧಾನಸಭೆ ಕ್ಷೇತ್ರಗಳಲ್ಲಿ ಪರೀಕ್ಷೆ ಹೆಚ್ಚಳ ಮಾಡುವಂತೆ  ಸಲಹೆ
  •  ಪರೀಕ್ಷೆ ಹೆಚ್ಚಳ ಮಾಡುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು
  • ಅ.10ರಂದು ನಡೆದಿದ್ದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನವೆಂಬರ್‌ ತಿಂಗಳಲ್ಲಿ ನಿತ್ಯ 1.1 ಲಕ್ಷ ಪರೀಕ್ಷೆ ನಡೆಸಬೇಕೆಂದು ಸೂಚನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!