KSRTC ಲಾಭದತ್ತ ಒಯ್ಯಲು ತಜ್ಞರ ಸಮಿತಿ

By Kannadaprabha NewsFirst Published Sep 4, 2021, 8:14 AM IST
Highlights
  • ನಷ್ಟ ಅನುಭವಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  • ಲಾಭದಾಯಕವನ್ನಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲನೆ 

ಬೆಂಗಳೂರು (ಸೆ.04): ನಷ್ಟ ಅನುಭವಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು (ಕೆಎಸ್‌ಆರ್‌ಟಿಸಿ) ಲಾಭದಾಯಕವನ್ನಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಲು ಶೀಘ್ರದಲ್ಲಿಯೇ ತಜ್ಞರ ಸಮಿತಿಯನ್ನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶ್ವಾಸನೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕೆಎಸ್‌ಆರ್‌ಟಿಸಿಗೆ 60 ವರ್ಷದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೆಎಸ್‌ಆರ್‌ಟಿಸಿ ಸಂಕಷ್ಟದಲ್ಲಿದೆ. ಆದರೆ, ಸಮಸ್ಯೆಯಲ್ಲಿಯೇ ಇರದೆ ಅದರಿಂದ ಹೊರಬಂದು ಲಾಭದಾಯಕವನ್ನಾಗಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬಿತ್ಯಾದಿಗಳ ಕುರಿತು ಸಮಾಲೋಚಿಸಬೇಕಾಗಿದೆ. ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ ಲಾಭದಾಯಕವಾಗಿಸಲು ಸಲಹೆ ಸೂಚನೆಗಳನ್ನು ನೀಡಲು ತಜ್ಞರ ಸಮಿತಿಯನ್ನು ರಚಿಸಲಾಗುವುದು. ಸಮಿತಿಯು 4-5 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗುವುದು. ಬಜೆಟ್‌ ಮುನ್ನ ವರದಿ ಪಡೆದು ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳ ಉಚಿತ ಪ್ರಯಾಣಕ್ಕೆ ಸೆ.15ರವರೆಗೆ ಕೆಎಸ್ಸಾರ್ಟಿಸಿ ಅವಕಾಶ

ಕೆಎಸ್‌ಆರ್‌ಟಿಸಿ ತನ್ನದೇ ಅಂತರ್ಗತವಾದ ಶಕ್ತಿ, ವಿಸ್ತಾರ ಮತ್ತು ಜಾಲವನ್ನು ಹೊಂದಿದೆ. ಇದನ್ನು ಹೆಚ್ಚಿಸುವುದು ಹೇಗೆ ಎಂಬುದರ ಕುರಿತು ಚಿಂತನೆ ನಡೆಸಲಾಗುವುದು. ಮುಂದಿನ ದಿನದಲ್ಲಿ ನಿಗಮದ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇದಕ್ಕೆ ಚಿಂತನೆ, ಕಾರ್ಯವಿಧಾನದಲ್ಲಿ ಬದಲಾವಣೆಯ ಅಗತ್ಯ ಇದೆ. ಜತೆಗೆ ಕ್ಷಮತೆಯಿಂದ ನಿಗಮವನ್ನು ಮುನ್ನಡೆಸಲು ಸರ್ಕಾರವು ಬದ್ಧವಾಗಿದೆ. ನಿಗಮದ ಸುಧಾರಣೆಯೊಂದಿಗೆ ನೌಕರರ ಜೀವನಮಟ್ಟದ ಸುಧಾರಣೆಗೂ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಸರ್ಕಾರದ ನೆರವು:  ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ನೌಕರರ ವೇತನ ಸೇರಿದಂತೆ, ನಿಗಮಕ್ಕೆ ಬೆಂಬಲ ನೀಡಲು ರಾಜ್ಯ ಸರ್ಕಾರವು ಈಗಾಗಲೇ 2,300 ಕೋಟಿ ರು. ಬಿಡುಗಡೆ ಮಾಡಿದೆ. ನಾನು ಮುಖ್ಯಮಂತ್ರಿಯಾದ ನಂತರವೂ 108 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿಯೊಂದಿಗೆ ಜನತೆ ಭಾವನಾತ್ಮಕ ಬಾಂಧವ್ಯ ಬೆಸೆದಿದ್ದಾರೆ ಎಂದರು.

ಸಮಾರಂಭದಲ್ಲಿ ನಾಲ್ಕು ನಿಗಮಗಳ ಅಪಘಾತ ರಹಿತ ಚಾಲನೆ ಮಾಡಿದ 60 ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಲಾಯಿತು. ಈ ವೇಳೆ 60ನೇ ವರ್ಷದ ಸವಿನೆನಪಿಗೆ ಅಂಚೆ ಲಕೋಟೆ ಬಿಡುಗಡೆ ಮತ್ತು ಕೆಂಪೇಗೌಡ ಬಸ್‌ ನಿಲ್ದಾಣ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ರಿಜ್ವಾನ್‌ ಅರ್ಷದ್‌ ಇತರರು ಉಪಸ್ಥಿತರಿದ್ದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶುಕ್ರವಾರ ನಡೆದ ಕೆಎಸ್‌ಆರ್‌ಟಿಸಿಗೆ 60 ವರ್ಷದ ಸಂಭ್ರಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ, ಶಾಸಕ ರಿಜ್ವಾನ್‌ ಅರ್ಷದ್‌ ಇತರರು ಉಪಸ್ಥಿತರಿದ್ದರು.

ಬಸ್‌ ಎಂದರೆ ಹಲವು ಅರ್ಥಗಳು ಧ್ವನಿಸುತ್ತದೆ. ಪ್ರಯಾಣ, ಜೀವನ ಪ್ರಯಾಣ, ಎಲ್ಲರಿಗೂ ಸ್ಥಳಾವಕಾಶ ಒದಗಿಸುವ ಸಮಾನತೆಯ ಪರಿಕಲ್ಪನೆ, ನಿರಂತರ ಚಾಲನಾ ಶಕ್ತಿ ಮೊದಲಾದ ವಿಚಾರಗಳು ನಮ್ಮಲ್ಲಿ ಸುಳಿಯುತ್ತದೆ. ಸರ್ಕಾರದಲ್ಲಿ ನಿರಂತರ ಚಲನಶೀಲತೆ ಹೊಂದಿರುವ ಇಲಾಖೆ ಸಾರಿಗೆ ಇಲಾಖೆಯಾಗಿದೆ. ಬಸ್‌ ಚಾಲಕರು ಅತ್ಯಂತ ಜವಾಬ್ದಾರಿಯ ಕೆಲಸ ನಿರ್ವಹಿಸುತ್ತಾರೆ. ಪ್ರಯಾಣದ ಅವಧಿಯಲ್ಲಿ ನಮ್ಮ ಜೀವ ಅವರ ಕೈಯಲ್ಲಿರುತ್ತದೆ. ಆದ್ದರಿಂದ ಚಾಲಕರಿಗೆ ಮೊದಲ ಗೌರವ ಸಲ್ಲಿಸುತ್ತೇನೆ ಎಂದರು.

ವಿಶ್ವದಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಎಷ್ಟೇ ಬದಲಾವಣೆಯಾಗಿ ಕ್ರಾಂತಿಗಳಾದರೂ ಬಸ್‌ ಸೇವೆ ನಿರಂತರವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಳ್ಳಿಗಳಲ್ಲಿ ಬಸ್‌ ಬಂದರೆ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ನಿಗಮ ತನ್ನದೇ ಆದ ಗೌರವವನ್ನು ಹೊಂದಿದೆ. ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಹೊಂದಿಕೊಳ್ಳುವುದರ ಜತೆಗೆ ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬಿಎಂಟಿಸಿಯು 90 ವಿದ್ಯುತ್‌ ಚಾಲಿತ ಬಸ್‌ಗಳನ್ನು ಖರೀದಿಸುತ್ತಿದೆ. ಅಂತೆಯೇ ಕೆಎಸ್‌ಆರ್‌ಟಿಸಿಯು 642 ಹೊಸ ಬಸ್‌ಗಳನ್ನು ಖರೀದಿಸುತ್ತಿದೆ. ಕೆಎಸ್‌ಆರ್‌ಟಿಸಿ ಕಾರ್ಯಾಗಾರದಲ್ಲಿ ಬಳಕೆಯಾಗುತ್ತಿರುವ ತಂತ್ರಜ್ಞಾನಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಎಂದು ನುಡಿದರು.

click me!