ಲಿಂಗಾಯತ ಹೋರಾಟ: ಎಂಬಿ ಪಾಟೀಲ್‌ ಉಲ್ಟಾ: ಪ್ರತ್ಯೇಕ ಧರ್ಮದ ಪದವೇ ಬಳಸಿಲ್ಲ!

By Kannadaprabha NewsFirst Published Sep 4, 2021, 7:43 AM IST
Highlights

* ಪ್ರತ್ಯೇಕ ಧರ್ಮದ ಪದವೇ ಬಳಸಿಲ್ಲ

* ನನ್ನ ಹೇಳಿಕೆ ತಪ್ಪಾಗಿ ವಿಶ್ಲೇಷಿಸಿದ್ದಾರೆ

* ಲಿಂಗಾಯತ ಹೋರಾಟ: ಎಂಬಿ ಪಾಟೀಲ್‌ ಉಲ್ಟಾ

ಬೆಂಗಳೂರು(ಸೆ.04): ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕೂಗು ಹುಟ್ಟುಹಾಕುವ ಬಗ್ಗೆಯಾಗಲಿ, ಹೋರಾಟ ನಡೆಸುವ ಬಗ್ಗೆಯಾಗಲಿ ನಾನು ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಮಾಜಿ ಸಚಿವ, ವಿಜಯಪುರದ ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆ (ಮುಂದಿನ ಸಾರ್ವತ್ರಿಕ ಚುನಾವಣೆ) ನಂತರ ಪಂಚಪೀಠಾಧೀಶರು, ವಿರಕ್ತಮಠಗಳು, ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಸೇರಿ ಲಿಂಗಾಯತ-ವೀರಶೈವ ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತೇವೆ ಎಂದಷ್ಟೇ ಹೇಳಿದ್ದೆ. ಆದರೆ, ಮಾಧ್ಯಮಗಳಲ್ಲಿ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯಲ್ಲಿ ಪ್ರತ್ಯೇಕ ಧರ್ಮದ ಹೋರಾಟ, ಕೂಗು ಅಥವಾ ಪ್ರತ್ಯೇಕತೆಯ ಪದವನ್ನೇ ಬಳಸಿಲ್ಲ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗಿದೆ’ ಹೇಳಿದರು. ಜತೆಗೆ, ತಾವು ನೀಡಿದ ಹೇಳಿಕೆಯ ವಿಡಿಯೋ ತುಣುಕು ಸಹ ಪ್ರದರ್ಶಿಸಿದರು.

‘ನಮ್ಮ ಸಮುದಾಯಕ್ಕೆ ಒಳ್ಳೆಯದಾಗಬೇಕು ಎಂಬ ಕಾರಣಕ್ಕೆ ಮುಂದಿನ ಚುನಾವಣೆ ನಂತರ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಮಠಗಳು, ಗುರುಗಳು, ಸ್ವಾಮೀಜಿಗಳು ಒಗ್ಗೂಡಿ ಚರ್ಚೆ ಮಾಡಿ, ಸೂಕ್ತ ನಿರ್ಧಾರ ಕೈಗೊಂಡು ಮುನ್ನಡೆಯುತ್ತೇವೆ ಎಂದಷ್ಟೇ ಹೇಳಿದ್ದೆ. ಆದರೆ, ನನ್ನ ಹೇಳಿಕೆಯನ್ನು ಮತ್ತೆ ಪ್ರತ್ಯೇಕ ಧರ್ಮದ ಕೂಗು ಎಂದು ವ್ಯಾಖ್ಯಾನಿಸಿ ತಪ್ಪು ಸಂದೇಶ ನೀಡಲಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯ ಒಗ್ಗಟ್ಟಾಗಬಾರದಾ? ಒಗ್ಗಟ್ಟಾಗುವ ಸಮಯ ಬಂದಾಗ ಅನಗತ್ಯವಾಗಿ ವಿವಾದ ಸೃಷ್ಟಿಸಲಾಗುತ್ತಿದೆ’ ಎಂದು ಬೇಸರಿಸಿದರು.

ಅಲ್ಲದೆ, ‘ಈ ನನ್ನ ಪ್ರಯತ್ನದಲ್ಲಿ ಯಾವುದೇ ರಾಜಕೀಯ ಉದ್ದೇಶ-ಅಜೆಂಡಾ ಇಲ್ಲ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು ಈ ಪ್ರಯತ್ನ ನಡೆಸುತ್ತಿದೇನೆ ಎಂಬುದೂ ಸುಳ್ಳು.ನನ್ನ ಸಮುದಾಯದ ಒಳಿತಿಗಾಗಿ ಸಾಮೂಹಿಕ ನಾಯಕತ್ವದಲ್ಲಿ, ನಾನೊಬ್ಬ ಕಾರ್ಯಕರ್ತನಾಗಿ ಮುನ್ನಡೆಯುತ್ತೇನೆ’ ಎಂದರು.

‘ಲಿಂಗಾಯತ ವೀರಶೈವ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಅಲ್ಪಸಂಖ್ಯಾತರ ಮಾನ್ಯತೆ ಸಿಗಬೇಕು. ಸಮುದಾಯದ ಮಠಗಳಿಗೂ ನೆರವು ನಿಟ್ಟಿನಲ್ಲಿ ಮಾನ್ಯತೆ ಸಿಗಬೇಕು. ಇದಕ್ಕಾಗಿ ಸಮುದಾಯದ ಎಲ್ಲರೂ ಒಟ್ಟಾಗಿ ಚರ್ಚಿಸಿ ಬಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಮುನ್ನಡೆಯಬೇಕಿದೆ. ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ, ಸಮುದಾಯದ ಎಲ್ಲ ಮಠಾಧೀಶರು, ರಾಜಕೀಯ ಧುರೀಣರು, ಮುಖಂಡರು, ಗುರುಗಳು ಎಲ್ಲರೂ ಒಗ್ಗೂಡಿಸಿ ಸಮಾಲೋಚನೆ ಮೂಲಕ ಮುನ್ನಡೆಯುವ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.

ಹಿಂದೆ ಗಡಿಬಿಡಿಯಲ್ಲಿ ಹೋರಾಟ ನಡೆದಿತ್ತು:

ಈ ಹಿಂದೆ ನಾವು ವೀರಶೈವದ 99 ಉಪ ಪಂಗಡವನ್ನು ಸೇರಿಸಿ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದೆವು. ಆ ಸಂದರ್ಭದಲ್ಲಿ ಗಡಿಬಿಡಿ, ತರಾತುರಿಯಲ್ಲಿ ಹೋರಾಟ ಮಾಡಿದ್ದೆವು. ತಾಂತ್ರಿಕ ಕಾರಣದಿಂದ ಲಿಂಗಾಯತ ಪದವನ್ನು ಮಾತ್ರ ಬಳಸಿದ್ದೆವು. ಆದರೆ, ನಾವು ಲಿಂಗಾಯತ ಹಾಗೂ ವೀರಶೈವ ಪ್ರತ್ಯೇಕ ಎಂದು ಬಿಂಬಿಸಿರಲಿಲ್ಲ. ಇದಕ್ಕೆ ರಾಜಕೀಯ ಬಣ್ಣ ಬಳಿದು ಕಳೆದ ಚುನಾವಣೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಬೇರೆ ಬೇರೆ ಮಾಡುತ್ತಿರುವುದಾಗಿಯೂ ಅಪಪ್ರಚಾರ ಮಾಡಲಾಗಿತ್ತು. ಪ್ರತ್ಯೇಕತೆಯ ಹೋರಾಟ ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಇದು ಈಗಿನ ಕೂಗಲ್ಲ ಎಂದು ಪಾಟೀಲ್‌ ಹೇಳಿದರು.

ಬಿಎಸ್‌ವೈಗೂ ನಮಗೂ ಹೋಲಿಕೆ ಸಲ್ಲ: ಎಂಬಿಪಾ

ಬೆಂಗಳೂರು: ಯಡಿಯೂರಪ್ಪ ಅವರು ದೊಡ್ಡ ನಾಯಕರು. ಅವರನ್ನೂ ನಮ್ಮನ್ನೂ ಹೋಲಿಕೆ ಮಾಡಲು ಆಗುವುದಿಲ್ಲ. ನಾವು ಸೆಕೆಂಡ್‌ ಲೈನ್‌ ನಾಯಕರು, ಅವರು ಹಿರಿಯರು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

‘ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಲಿಂಗಾಯತ ನಾಯಕನಾಗಿ ಬಿಂಬಿಸಿಕೊಳ್ಳಲು ನೀವು ಪ್ರಯತ್ನ ನಡೆಸುತ್ತಿದ್ದೀರಾ’ ಎಂಬ ಪ್ರಶ್ನೆಗೆ ಪಾಟೀಲ್‌ ಈ ಉತ್ತರ ನೀಡಿದರು.

‘ಲಿಂಗಾಯತ-ವೀರಶೈವ ಒಗ್ಗೂಡುವಿಕೆ ಬಗ್ಗೆ ನಾನು ನೀಡಿದ್ದ ಹೇಳಿಕೆ ಕುರಿತು ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಜತೆಗೂ ಹಾಗೂ ನಮ್ಮ ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಕಳುಹಿಸಿಕೊಟ್ಟಿದ್ದೇನೆ. ನನ್ನ ಹೇಳಿಕೆಗೂ ಪಕ್ಷಕ್ಕೂ ಸಂಬಂಧವೂ ಇಲ್ಲ. ಇದರಿಂದ ಪಕ್ಷಕ್ಕೆ ಯಾವುದೇ ಹಾನಿ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.

click me!