
ಬೆಂಗಳೂರು : ಸರ್ಕಾರದ ಒಳ್ಳೆಯ ಯೋಜನೆಗಳ ಪರವಾಗಿ ಫಲಾನುಭವಿ ರೈತರು ನಿಲ್ಲಬೇಕು. ಇಲ್ಲದಿದ್ದರೆ ರೈತರ ಪರವಾದ ನೀತಿಗಳನ್ನು ತರಲು ಕಷ್ಟವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಕೆಎಂಎಫ್, ಸಂಜೀವಿನಿ-ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ‘ಕ್ಷೀರಸಂಜೀವಿನಿ ಯೋಜನೆಯ ದಶಮಾನೋತ್ಸವ’ದ ಅಂಗವಾಗಿ ಪ್ರಗತಿಪರ ಮಹಿಳಾ ಹೈನುಗಾರರ ಸಮಾವೇಶದ ಸಮಾರೋಪದಲ್ಲಿ ಮುಖ್ಯಮಂತ್ರಿಯವರ ಅನುಪಸ್ಥಿತಿಯಲ್ಲಿ ಅವರ ಭಾಷಣವನ್ನು ಓದಲಾಯಿತು.
ರಾಜ್ಯ ಸರ್ಕಾರ ಕಳೆದ ವರ್ಷ ಏಪ್ರಿಲ್ 1ರಂದು ಪ್ರತೀ ಲೀಟರ್ ಹಾಲಿನ ದರವನ್ನು 4 ರು.ಹೆಚ್ಚಿಸಿ ಆ ಹಣ ನೇರವಾಗಿ ರೈತರಿಗೆ ಸಿಗುವಂತೆ ಮಾಡಿತ್ತು. ಅದನ್ನು ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ಮಾಡಿದ್ದರು. ಫಲಾನುಭವಿಗಳು ತಮ್ಮ ಪರವಾದ ಸರ್ಕಾರದ ನೀತಿಗೆ ಬೆಂಬಲಿಸದಿದ್ದರೆ ಯೋಜನೆ ರೂಪಿಸಲು ಕಷ್ಟವಾಗುತ್ತದೆ ಎಂಬುದನ್ನು ಮನಗಾಣಬೇಕು ಎಂದರು.
ರಾಜ್ಯ ಸರ್ಕಾರ ಹಾಲಿನ ದರವನ್ನುಎರಡು ಬಾರಿ ಹೆಚ್ಚಳ ಮಾಡಿ ಅದು ನೇರವಾಗಿ ರೈತರಿಗೆ ಸಿಗುವಂತೆ ನೊಡಿಕೊಂಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದಿನವೊಂದಕ್ಕೆ 76 ಲಕ್ಷ ಲೀಟರ್‌ಗಳಿಗೆ ಇಳಿದಿದ್ದ ಹಾಲಿನ ಸಂಗ್ರಹ ಈ ವರ್ಷ ಗರಿಷ್ಠ 1.06 ಕೋಟಿ ಲೀಟರ್‌ಗಳಿಗೆ ಏರಿಕೆಯಾಗಿದೆ. ಹಾಲಿನ ಉತ್ಪಾದನೆ ಏರಿಕೆಯಾಗಲು ಸರ್ಕಾರ ಕೈಗೊಂಡ ಹೈನುಗಾರಿಕೆ ಸ್ನೇಹಿ ಕಾರ್ಯಕ್ರಮಗಳೇ ಕಾರಣ ಎಂದು ಹೇಳಿದರು.
2016ರಲ್ಲಿ ಪ್ರತಿ ಲೀಟರ್ ಹಾಲಿಗೆ 3 ರು.ಗಳಿಂದ 5 ರು. ಗೆ ಹೆಚ್ಚಿಸಲಾಯಿತು. ಪ್ರತಿವರ್ಷ ಈ ಯೋಜನೆಗಾಗಿ ಆಯವ್ಯದದಲ್ಲಿ ಮೀಸಲಿಡುವ ಅನುದಾನ ಮೊತ್ತ ವೃದ್ಧಿಸುತ್ತಿದ್ದು, ಸದರಿ ಸಾಲಿನಲ್ಲಿ 1,900 ಕೋಟಿ ರು.ಗಳಷ್ಟು ಮೀಸಲಿಡಲಾಗುತ್ತಿದೆ. ಯೋಜನೆ ಪ್ರಾರಂಭವಾದಾಗಿನಿಂದ ಇದುವರೆಗೂ 16,490 ಕೋಟಿ ರು.ಗಳನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕೆಎಂಎಫ್ ತನ್ನ ವ್ಯಾಪ್ತಿಯ 16 ಜಿಲ್ಲಾ ಹಾಲು ಒಕ್ಕೂಟಗಳ ಹೈನುಗಾರರ ರಾಸುಗಳ ಹಾಲು ಉತ್ಪಾದನೆಗೆ ಅಗತ್ಯವಿರುವ ಪಶು ಆಹಾರ ಉತ್ಪಾದನೆಗೆ ಬೇಕಾಗುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ದರ (ಎಂ.ಎಸ್.ಪಿ.) ದಲ್ಲಿ ಖರೀದಿಸಲು ಮುಂದಾಗಿದೆ. ರಾಜ್ಯ ಸರ್ಕಾರ 2,400 ರು. ಪ್ರತಿ ಕ್ವಿಂಟಲ್ ಎಂ.ಎಸ್.ಪಿ. ದರದಂತೆ 63 ಸಾವಿರ ಮೆ.ಟನ್ ಮೆಕ್ಕೆಜೋಳವನ್ನು ಖರೀದಿಸಲು ಆದೇಶಿಸಿದ್ದು ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ನೋಂದಾಯಿತರಾಗಿರುವ 26,428 ರೈತರಿಂದ 2026ರ ಜನವರಿ 12ರ ವರೆಗೆ ಒಟ್ಟು 27,864 ಮೆ.ಟನ್ ಖರೀದಿಸಿ 2,094 ಸಂಖ್ಯೆಯ ರೈತರಿಗೆ 8.66ಕೋಟಿ ರು.ಗಳನ್ನು ರೈತರಿಗೆ ಪಾವತಿಸಲಾಗಿದೆ.ಮೆಕ್ಕೆಜೋಳ ಖರೀದಿ, ಸಾಗಾಣಿಕೆ, ದಾಸ್ತಾನು ಮತ್ತು ಔಷಧೋಪಚಾರ ಸೇರಿ ಅಂದಾಜು 26.48 ಕೋಟಿ ರು.ಹೆಚ್ಚುವರಿ ವೆಚ್ಚ ಮಾಡಲಾಗಿದೆ ಎಂದಿದ್ದಾರೆ
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳ ಅಧ್ಯಕ್ಷರು, ಕೆಎಂಎಫ್ ಆಡಳಿತಾಧಿಕಾರಿ ಟಿಎಚ್‌ಎಂ ಕುಮಾರ್, ಕೌಶಲ್ಯಾಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಆರ್.ಸ್ನೇಹಲ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.
ಸಮಾರಂಭದಲ್ಲಿ ಕ್ಷೀರ ಸಂಜೀವಿನಿ ಯೋಜನೆಯ ಕಿರುಹೊತ್ತಿಗೆ ಮತ್ತು ಕ್ಷೀರ ಸಂಜೀವಿನಿ ಯೋಜನೆಯ ಕಿರುಚಿತ್ರ ಬಿಡುಗಡೆ ಮಾಡಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ