Forest Smugglers: ಇನ್ಮುಂದೆ ಕಾಡುಗಳ್ಳರಿಗೂ ರೌಡಿಶೀಟರ್‌ ರೀತಿ ಹಣೆಪಟ್ಟಿ..!

Published : Apr 23, 2022, 10:45 AM IST
Forest Smugglers: ಇನ್ಮುಂದೆ ಕಾಡುಗಳ್ಳರಿಗೂ ರೌಡಿಶೀಟರ್‌ ರೀತಿ ಹಣೆಪಟ್ಟಿ..!

ಸಾರಾಂಶ

*  ಅರಣ್ಯ ಸಂಪತ್ತು ದೋಚುವವರ ಮೇಲೆ ಎಂಓಬಿ ಕಾರ್ಡ್‌ *  ಸಿಐಡಿ ಅರಣ್ಯ ಘಟಕ ನಿರ್ಧಾರ *  ಕಾರ್ಯವ್ಯಾಪ್ತಿ ಇಡೀ ರಾಜ್ಯಕ್ಕೆ ವಿಸ್ತರಣೆ  

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಏ.23):  ಮರಗಳ ಕಳ್ಳಸಾಗಣೆ(Smuggling of Trees), ಪ್ರಾಣಿಗಳ ಬೇಟೆ ಹೀಗೆ ವನ್ಯ ಸಂಪತ್ತು ದೋಚುವವರ ವಿರುದ್ಧ ರಾಜ್ಯವ್ಯಾಪಿ ಕಾರ್ಯಾಚರಣೆಗೆ ಸರ್ಕಾರ ಅಧಿಕಾರ ನೀಡಿದ ಬೆನ್ನಲ್ಲೇ ರೌಡಿಶೀಟ್‌ ಮಾದರಿಯಲ್ಲಿ ವೃತ್ತಿಪರ ಕಾಡುಗಳ್ಳರ ಮೇಲೆ ಎಂಓಬಿ ಕಾರ್ಡ್‌ಗಳನ್ನು (The Modus Operandi Bureau Card) ತೆರೆಯಲು ರಾಜ್ಯ ಅಪರಾಧ ತನಿಖಾ ದಳದ ಅರಣ್ಯ ಘಟಕ ನಿರ್ಧರಿಸಿದೆ.

ಐದು ದಶಕಗಳ ಹಿಂದೆಯೇ ರಚನೆಗೊಂಡರೂ ಕೇವಲ ಹಳೆ ಮೈಸೂರು(Old Mysuru) ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲು ಅಧಿಕಾರ ಹೊಂದಿದ್ದ ರಾಜ್ಯ ಅಪರಾಧ ತನಿಖಾ ದಳದ (CID) ಅರಣ್ಯ ಘಟಕಕ್ಕೆ ಕೊನೆಗೂ ಸಶಕ್ತಗೊಳ್ಳುವ ಕಾಲ ಕೂಡಿಬಂದಿದೆ. ಕೆಲ ದಿನಗಳ ಹಿಂದೆ ಅರಣ್ಯ(Forest) ಘಟಕದ ಬಲವರ್ಧನೆ ಸಂಬಂಧ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಕೆ.ವಿ.ಶರಚ್ಚಂದ್ರ ಸಲ್ಲಿಸಿದ ಪ್ರಸ್ತಾವನೆಗೆ ಸಮ್ಮತಿಸಿರುವ ರಾಜ್ಯ ಸರ್ಕಾರವು, ಈಗ ಅರಣ್ಯ ಘಟಕದ ಕಾರ್ಯವ್ಯಾಪ್ತಿಯನ್ನು ರಾಜ್ಯಕ್ಕೆ ವಿಸ್ತರಿಸಿ ಅಧಿಕೃತವಾಗಿ ಆದೇಶ ಹೊರಡಿಸಿದೆ.

'ದೇವರ ಮೊರೆ, ಜೀವನ ಸರ್ವನಾಶ', ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಸ್ಥಳೀಯರ ಪ್ಲಾನ್

ಕಾಡುಗಳ್ಳರ ಬೆರಳಚ್ಚು ಮುದ್ರೆ ಸಂಗ್ರಹ:

ಕೊಲೆ(Murder), ಕಳ್ಳತನ(Theft) ಹಾಗೂ ದರೋಡೆ(Robbery) ಸೇರಿದಂತೆ ವಿವಿಧ ಆರೋಪಗಳಡಿ ಬಂಧಿತನಾಗುವ ಆರೋಪಿಯ ಬೆರಳಚ್ಚು ಮುದ್ರೆ, ಅಂಗಾಲು ಮುದ್ರೆ ಹಾಗೂ ಫೋಟೋಗಳನ್ನು ಠಾಣೆಗಳಲ್ಲಿ ಪೊಲೀಸರು ಸಂಗ್ರಹಿಸುತ್ತಾರೆ. ಇದರಿಂದ ಅಪರಾಧ ಕೃತ್ಯ ನಡೆದಾಗ ಆರೋಪಿಗಳ ಪತ್ತೆಗೆ ಅನುಕೂಲವಾಗುತ್ತಿದೆ. ಈಗ ನಾಗರಿಕ ಪೊಲೀಸರ ಮಾದರಿಯಲ್ಲೇ ಸಿಐಡಿ ಅರಣ್ಯ ಘಟಕದ ಪೊಲೀಸರು(Police) ಸಹ ನಾಡಿನ ಅರಣ್ಯ ಸಂಪತ್ತು ಲೂಟಿ ಮಾಡುವವರ ಮೇಲೆ ಕಣ್ಗಾವಲಿಡಲು ಯೋಜನೆ ರೂಪಿಸಿದ್ದಾರೆ. ಅಂತೆಯೇ ಮೊದಲ ಹಂತದಲ್ಲಿ ಕಾಡು ಪ್ರಾಣಿಗಳ ಹತ್ಯೆ, ಮರಗಳ ಕಟಾವು ಸೇರಿದಂತೆ ಅರಣ್ಯೋತ್ಪನ್ನಗಳ ಅಕ್ರಮ ಸಾಗಾಣಿಕೆ ಮತ್ತು ಮಾರಾಟ ಪ್ರಕರಣದಲ್ಲಿ ಬಂಧಿತರಾಗುವ ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸಿಡಲಿದ್ದಾರೆ.

ಇದುವರೆಗೆ ಅರಣ್ಯ ಘಟಕದಲ್ಲಿ ವೃತ್ತಿಪರ ಕಾಡುಗಳ್ಳರ ಬಗ್ಗೆ ದಾಖಲೆಸಹಿತ ನಿಖರ ಮಾಹಿತಿ ಇರಲಿಲ್ಲ. ಈಗ ಪದೇ ಪದೇ ಅರಣ್ಯೋತ್ಪನ್ನಗಳ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗುವ ಆರೋಪಿಯ ಮೇಲೆ ಪೊಲೀಸ್‌ ಠಾಣೆಗಳಲ್ಲಿ ತೆರೆಯುವ ಎಂಓಬಿ (ದಿ ಮೋಡಸ್‌ ಆಪರೆಂಡಿ ಬ್ಯೂರೋ ಕಾರ್ಡ್‌) ತೆರೆಯಲಾಗುತ್ತದೆ. ಅದರಿಂದ ವೃತ್ತಿಪರ ಕಾಡುಗಳ್ಳರ ಮೇಲೆ ನಿಗಾವಹಿಸಲು ಸುಲಭವಾಗುತ್ತದೆ. ಉದಾಹರಣೆಗೆ ಜಿಂಕೆ ಅಥವಾ ಆನೆಗಳ ಹತ್ಯೆಯಾದರೆ ಅವುಗಳ ಹತ್ಯೆ ಮಾದರಿ ಆಧರಿಸಿ ಆರೋಪಿಗಳನ್ನು ಪತ್ತೆಹಚ್ಚಲು ಸುಲಭವಾಗಲಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

31 ಜಿಲ್ಲೆಗಳಲ್ಲಿ ಅರಣ್ಯ ಘಟಕ ಕಾರ್ಯಾಚರಣೆ:

ವನ್ಯಜೀವಿ ಮತ್ತು ಸಂಪತ್ತಿನ ರಕ್ಷಣೆ ಸಲುವಾಗಿ 1972ರಲ್ಲಿ ಸಿಐಡಿಯಲ್ಲಿ ಅರಣ್ಯ ಘಟಕವನ್ನು ಆಗಿನ ಸರ್ಕಾರ ರಚಿಸಿತು. ಮೊದಲು ರಾಜ್ಯದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿದ್ದ ಕಾರಣಕ್ಕೆ ಬೆಂಗಳೂರು, ಮೈಸೂರು, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಹಾಸನ, ಧಾರವಾಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಅರಣ್ಯ ಘಟಕದ ಕಾರ್ಯವ್ಯಾಪ್ತಿ ನಿಗದಪಡಿಸಲಾಗಿತ್ತು. ಈ ಸೀಮಿತ ವಲಯದ ಕಾರಣಕ್ಕೆ ಇತರೆ ಜಿಲ್ಲೆಗಳಲ್ಲಿ ವನ್ಯಲೋಕದ ಸುರಕ್ಷತೆಗೆ ಅರಣ್ಯ ಘಟಕಕ್ಕೆ ಕಾರ್ಯವ್ಯಾಪ್ತಿ ಅಡ್ಡಿಯಾಗಿತ್ತು.

Dharwad: ಅಳ್ನಾವರದಲ್ಲಿ ಕೈ ಬೀಸಿ ಕರೆಯುತ್ತಿದ್ದಾಳೆ ಸಾಲು ಮರದ ತಿಮ್ಮಕ್ಕ..!

ಈ ಸಮಸ್ಯೆಯನ್ನು ಅರಿತ ಎಡಿಜಿಪಿ ಕೆ.ವಿ.ಶರಚ್ಚಂದ್ರ ಅವರು, ಅರಣ್ಯ ಘಟಕದ ಕಾರ್ಯವ್ಯಾಪ್ತಿಯನ್ನು ರಾಜ್ಯಕ್ಕೆ ವಿಸ್ತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಇದಕ್ಕೆ ಸರ್ಕಾರವು ಒಪ್ಪಿಗೆ ಸೂಚಿಸಿತು. ಈಗ ಬೆಂಗಳೂರಿನ ಕೇಂದ್ರ ಕಚೇರಿ ಹೊಂದಿರುವ ಅರಣ್ಯ ಘಟಕಕ್ಕೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಇಬ್ಬರು ಡಿವೈಎಸ್ಪಿಗಳಿದ್ದಾರೆ. ಕೊಡಗಿನಲ್ಲಿ ಎಸ್ಪಿ ಕಾರ್ಯನಿರ್ವಹಿಸಲಿದ್ದಾರೆ. 17 ಮಂದಿ ಪಿಎಸ್‌ಐಗಳ ನಿಯೋಜನೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಫ್‌ಐಆರ್‌ ರೀತಿ ಕೋರ್ಟಗೆ ವರದಿ

ವನ್ಯ ಸಂಪತ್ತಿನ ರಕ್ಷಣೆ ಸಂಬಂಧ ಅರಣ್ಯ ಇಲಾಖೆ ಹಾಗೂ ಸಿಐಡಿಯ ಅರಣ್ಯ ಘಟಕಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ. ಅರಣ್ಯ ಸಂಪತ್ತು ದೋಚುವವರ ವಿರುದ್ಧ ಎಫ್‌ಐಆರ್(FIR) ಮಾದರಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಅಂತ ಎಡಿಜಿಪಿ, ಅರಣ್ಯ ಘಟಕ, ಸಿಐಡಿ ಕೆ.ವಿ.ಶರಚ್ಚಂದ್ರ ತಿಳಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಅಧಿವೇಶನಕ್ಕೂ ಮೊದಲೇ ಬ್ರದರ್ಸ್ ಒಗ್ಗಟ್ಟು: ಬಿಜೆಪಿ ಮೇಲೆ ಸವಾರಿ ಮಾಡಲು ಕಾಂಗ್ರೆಸ್ ಸಜ್ಜು
ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ