Mekdatu ಯೋಜನೆಯಿಂದ ಅರಣ್ಯ ನಾಶ: ಡ್ಯಾಮ್‌ಗೆ ಮೇಧಾ ಪಾಟ್ಕರ್‌ ವಿರೋಧ

By Kannadaprabha News  |  First Published Jan 15, 2022, 6:00 AM IST

*  ಈ ಯೋಜನೆಯಿಂದ 1200 ಹೆಕ್ಟೇರ್‌ ಅರಣ್ಯ ನಾಶ
*  ಅಣೆಕಟ್ಟು ಕಟ್ಟುವ ಬದಲು ಕೆರೆಗಳನ್ನು ಕಟ್ಟಿಜಲ ಸಂರಕ್ಷಿಸಿ
*  ಡ್ಯಾಂ ವಿರುದ್ಧ ಬೃಹತ್‌ ಹೋರಾಟ: ನಟ ಚೇತನ್‌
 


ಬೆಂಗಳೂರು(ಜ.15):  ರಾಜ್ಯದಲ್ಲಿ(Karnataka) ಬಹುಚರ್ಚಿತ ವಿಷಯವಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಪರಿಸರವಾದಿ, ಹಾಗೂ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌(Medha Patkar) ವಿರೋಧ ವ್ಯಕ್ತಪಡಿಸಿದ್ದು, 1,200 ಹೆಕ್ಟೇರ್‌ ಅರಣ್ಯ ಹಾಗೂ ಜೀವ ಸಂಕುಲದ ನಾಶಕ್ಕೆ ಕಾರಣವಾಗುವ ಯೋಜನೆಗೆ ಜನರೂ ವಿರೋಧ ವ್ಯಕ್ತಪಡಿಸಬೇಕು ಎಂದು ಕರೆ ನೀಡಿದ್ದಾರೆ. ಕರ್ನಾಟಕ ನೆಲ ಜಲ ರಕ್ಷಣಾ ಸಮಿತಿಯು ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ‘ಮೇಕೆದಾಟು ಪರ, ಅಣೆಕಟ್ಟು ವಿರುದ್ಧ’ ವಿಷಯ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರ ಮಾತನಾಡಿದರು.

ನಾನು ಮೇಕೆದಾಟು(Mekedatu) ಪರವಾಗಿದ್ದೇನೆ. ಹೀಗಾಗಿ ಅಣೆಕಟ್ಟು(Dam) ನಿರ್ಮಾಣಕ್ಕೆ ವಿರೋಧಿಸುತ್ತಿದ್ದೇನೆ. ಅಣೆಕಟ್ಟು ಕಟ್ಟುವ ಬದಲು ಕೆರೆ ಕುಂಟೆಗಳನ್ನು ಕಟ್ಟಿಜೀವ ಜಲ ರಕ್ಷಿಸಬೇಕು. ಈ ಹೋರಾಟದಲ್ಲಿ ದಲಿತ, ಬುಡಕಟ್ಟು, ಆದಿವಾಸಿ ಜನರೆಲ್ಲಾ ಒಂದಾಗಿ ಸೇರಿ ಯೋಜನೆ ವಿರೋಧಿಸಬೇಕಿದೆ ಎಂದು ಕರೆ ನೀಡಿದರು.

Latest Videos

undefined

Mekedatu Padayatre: ಅರ್ಧಕ್ಕೆ ಮೊಟಕುಗೊಂಡ ಪಾದಯಾತ್ರೆ, ಗೆದ್ದಿದ್ಯಾರು.? ಸೋತಿದ್ಯಾರು.?

ರಾಜಕೀಯ ಪಕ್ಷಗಳಿಗೆ ಸ್ವಹಿತಾಸಕ್ತಿ:

ರಾಜಕಾರಣಿಗಳು(Politicians), ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಯೋಜನೆಗೆ ಮುಂದಾಗಿದ್ದಾರೆ. ಮತ ಬ್ಯಾಂಕ್‌ ರಾಜಕಾರಣಕ್ಕಾಗಿ ನರೇಂದ್ರ ಮೋದಿ(Narendra Modi) ಹಾಗೂ ಬಸವರಾಜ ಬೊಮ್ಮಾಯಿ(Basavaraj Bommai)  ಯೋಜನೆಗೆ ಆಸಕ್ತಿ ತೋರುತ್ತಿದ್ದಾರೆ. ಯೋಜನೆಗಾಗಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್‌(Congress) ಪಕ್ಷದವರಿಗೆ ಮಹಾತ್ಮ ಗಾಂಧಿ ಏನು ಹೇಳಿದ್ದರು ಎಂಬುದೇ ಗೊತ್ತಿಲ್ಲ. ಇಲ್ಲಿ ಎಲ್ಲಾ ಪಕ್ಷಗಳದ್ದು ಸ್ವಹಿತಾಸಕ್ತಿಗಳು ಎಂದು ಕಿಡಿಕಾರಿದರು.

ನಾನು ಯೋಜನೆ ಡಿಪಿಆರ್‌(DPR) ವರದಿ ನೋಡಿಲ್ಲ. ಆದರೆ, ಅಣೆಕಟ್ಟು ನಿರ್ಮಾಣದಿಂದ 1,200 ಹೆಕ್ಟೇರ್‌ ಅರಣ್ಯ ಭೂಮಿ ನಾಶವಾಗಲಿದೆ. ಇದರಿಂದ ಲಕ್ಷಾಂತರ ಮರಗಳ ಮಾರಣಹೋಮ. ಆ ಭಾಗದಲ್ಲಿ ವಾಸಿಸುವ ಪ್ರಾಣಿ ಸಂಕುಲ ನಾಶವಾಗುತ್ತದೆ. ಜತೆಗೆ ಕಾಡಿನಲ್ಲಿ ವಾಸಿಸುವ ಸಾವಿರಾರು ಜನರು ನಾಡಿಗೆ ಬರಬೇಕಾಗುತ್ತದೆ. ಇದೆಲ್ಲವೂ ಪರಿಸರದಲ್ಲಿ ಅಸಮತೋಲನ ಉಂಟುಮಾಡಲಿದ್ದು, ಪರಿಸರ ನಾಶಕ್ಕೆ ನಾಂದಿ ಹಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೊಡ್ಡ ನದಿ, ದೊಡ್ಡ ಅಣೆಕಟ್ಟು ಎಂಬ ಅಲೋಚನೆಯೇ ತಪ್ಪು. ನದಿಯನ್ನು ಮತ್ತು ಪ್ರಕೃತಿಯನ್ನು ರಕ್ಷಿಸಬೇಕೆಂದರೆ ಯಾವುದೇ ಅಣೆಕಟ್ಟು ಕಟ್ಟಬಾರದು. ಪ್ರಸ್ತುತ ನದಿಗಳು ಸಾಯುತ್ತಿವೆ. ನಿತ್ಯವೂ ವಿಷಮಿಶ್ರಿತವಾಗಿ ಅವು ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆಲ್ಲಾ ಅಣೆಕಟ್ಟು, ಕೈಗಾರಿಕೋದ್ಯಮ ಹಾಗೂ ಮಿತಿ ಇಲ್ಲದ ಮಾನವನ ದುರಾಸೆಯೆ ಕಾರಣ. ಇನ್ನು ರಾಜಕಾರಣಿಗಳ ರಾಜಕೀಯ ತಂತ್ರಗಳಿಗೆ ಪ್ರಕೃತಿ ಬಲಿ ಆಗುತ್ತಿದೆ. ಇದನ್ನೆಲ್ಲಾ ತಪ್ಪಿಸಲು ಜನರು ಧ್ವನಿ ಎತ್ತಿ ಮಾತನಾಡಬೇಕು ಎಂದು ಕರೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನಾಗೇಶ್‌ ಹೆಗಡೆ, ಪತ್ರಕರ್ತೆ ಕವಿತಾ ಲಂಕೇಶ್‌, ಮಾಜಿ ಸಚಿವರಾದ ಬಿ.ಟಿ.ಲಲಿತಾ ನಾಯಕ್‌ ಸೇರಿ ಹಲವರು ಹಾಜರಿದ್ದರು.

Mekedatu Padayatre: ಪಾದಯಾತ್ರೆ ಲಾಭ ಯಾರಿಗೆ? ಡ್ಯಾಮ್‌ಗಂತೂ ಅಲ್ಲ!

ಡ್ಯಾಂ ವಿರುದ್ಧ ಬೃಹತ್‌ ಹೋರಾಟ: ನಟ ಚೇತನ್‌

ನಟ ಚೇತನ್‌(Chetan) ಮಾತನಾಡಿ, ಮೂರೂ ರಾಜಕೀಯ ಪಕ್ಷಗಳು(Political Parties) ಮೇಕೆದಾಟು ಯೋಜನೆ ನೆಪದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿವೆ. ಸರ್ಕಾರ ಅಣೆಕಟ್ಟು ಕಟ್ಟಲೇಬೇಕು ಎಂದು ನಿರ್ಧರಿಸಿದರೆ ಮುಂದಿನ ದಿನಗಳಲ್ಲಿ ಇದರ ವಿರುಧ ಬೃಹತ್‌ ಹೋರಾಟವನ್ನು ಮಾಡಲಿದ್ದೇವೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ಮೇಕೆದಾಟು ವಿಚಾರದಲ್ಲಿ ಮೂರು ಪಕ್ಷಗಳು ರಾಜಕೀಯ ಮಾಡುತ್ತಿವೆ. 9 ಸಾವಿರ ಕೋಟಿ ರು. ಪೋಲು ಮಾಡಿ ಯೋಜನೆ ಮಾಡುವುದು ರಾಜಕಾರಣಿಗಳು, ಗುತ್ತಿಗೆದಾರರು, ರಿಯಲ್‌ ಎಸ್ಟೇಟ್‌ ಮಾಫಿಯಾಗಾಗಿಯೇ ಹೊರತು ಜನರಿಗಾಗಿ ಅಲ್ಲ. ಜನರಿಗೆ ಅಗತ್ಯವಿರುವ ನೀರನ್ನು ಮಳೆ ನೀರು ಕೊಯ್ಲು, ಕೆರೆ ಕುಂಟೆಗಳ ರಕ್ಷಣೆಯಿಂದ ಶೇಖರಿಸಬೇಕು. ಇದು ಪರಿಸರ ನಾಶ ಮಾಡುವ ಯೋಜನೆಯೇ ಹೊರತು ಜನಪರ ಯೋಜನೆಯಲ್ಲ ಎಂದರು.
 

click me!