
ಬೆಂಗಳೂರು/ನವದೆಹಲಿ: ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಬಹುಕೋಟಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರಿಗೆ ಜಾರಿ ನಿರ್ದೇಶನಾಲಯ (ED) ಮತ್ತೊಂದು ಬಿಗ್ ಶಾಕ್ ನೀಡಿದೆ.
ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಸಕ ಕೆ.ಸಿ. ವೀರೇಂದ್ರ ಹಾಗೂ ಅವರ ಸಹಚರರಿಗೆ ಸೇರಿದ ಬರೋಬ್ಬರಿ ₹23.35 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಅಧಿಕಾರಿಗಳು ತಾತ್ಕಾಲಿಕವಾಗಿ ಮುಟ್ಟುಗೋಲು (Provisional Attachment) ಹಾಕಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) 2002ರ ಅಡಿಯಲ್ಲಿ ಇಡಿ ಕ್ರಮ ಕೈಗೊಂಡಿದೆ.
ಜಾರಿ ನಿರ್ದೇಶನಾಲಯ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಕೆ.ಸಿ. ವೀರೇಂದ್ರ ಸೇರಿದಂತೆ ಪ್ರಮುಖ ಆರೋಪಿಗಳಾದ ಗುಲ್ಷನ್ ಖಟ್ಟರ್ ಮತ್ತು ನೇಹಾ ಟಂಡನ್ ಅವರಿಗೆ ಸೇರಿದ ಚರ ಮತ್ತು ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಚರಾಸ್ತಿಗಳು: ₹13.76 ಕೋಟಿ ಮೌಲ್ಯದ ಬ್ಯಾಂಕ್ ಠೇವಣಿ, ಹೂಡಿಕೆಗಳು ಸೇರಿದಂತೆ ಇತರೆ ಚರಾಸ್ತಿಗಳು.
ಸ್ಥಿರಾಸ್ತಿಗಳು: ₹9.58 ಕೋಟಿ ಮೌಲ್ಯದ ಭೂಮಿ, ವಾಣಿಜ್ಯ ಮತ್ತು ವಸತಿ ಕಟ್ಟಡಗಳು.
ಒಟ್ಟು ಮೌಲ್ಯ: ₹23.35 ಕೋಟಿ.
ಆರೋಪಿಗಳು 'ಕಿಂಗ್ 567' (King 567) ಸೇರಿದಂತೆ ಹತ್ತಾರು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಡೆಸುತ್ತಿದ್ದರು. ಆನ್‌ಲೈನ್ ಮೂಲಕ ಆಟಗಾರರನ್ನು ಆಕರ್ಷಿಸಿ, ವಂಚನೆಯ ಗೇಮಿಂಗ್ ಅಲ್ಗಾರಿದಮ್‌ಗಳನ್ನು ಬಳಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದರು ಎಂದು ಇಡಿ ತನಿಖೆಯಲ್ಲಿ ಬಯಲಾಗಿದೆ. ಈ ಬೆಟ್ಟಿಂಗ್ ದಂಧೆಯ ಕಪ್ಪುಹಣವನ್ನು ವೈಟ್ ಮಾಡಿಕೊಳ್ಳಲು ನೂರಾರು ನಕಲಿ (ಶೆಲ್) ಕಂಪನಿಗಳು ಮತ್ತು ಬಡವರ ಹೆಸರಿನಲ್ಲಿದ್ದ ನಕಲಿ 'ಮ್ಯೂಲ್ ಬ್ಯಾಂಕ್ ಖಾತೆ'ಗಳನ್ನು (Mule Accounts) ಬಳಸಲಾಗಿತ್ತು. ಇಷ್ಟೇ ಅಲ್ಲದೆ, ಹವಾಲಾ ಜಾಲದ ಮೂಲಕ ಭಾರತದಿಂದ ದುಬೈ ಸೇರಿದಂತೆ ಹಲವು ವಿದೇಶಿ ಬ್ಯಾಂಕ್ ಖಾತೆಗಳಿಗೆ ಹಣ ರವಾನಿಸಿರುವುದು ಪತ್ತೆಯಾಗಿದೆ.
ಈ ಜಾಲದ ಮೂಲಕ ಬರೋಬ್ಬರಿ ₹2,300 ಕೋಟಿಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆ (Money Laundering) ನಡೆದಿರುವುದಾಗಿ ಇಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಇಡಿ ಅಧಿಕಾರಿಗಳು ದೇಶದ ವಿವಿಧ ರಾಜ್ಯಗಳ ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಭರ್ಜರಿ ದಾಳಿ ನಡೆಸಿದ್ದರು. ಆ ವೇಳೆ ಕಂತೆ ಕಂತೆ ನಗದು, ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳು, ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಹಾಗೂ ಅಪಾರ ಪ್ರಮಾಣದ ಡಿಜಿಟಲ್ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಈ ಜಾಲದ ಕಿಂಗ್‌ಪಿನ್ ಆಗಿದ್ದ ಶಾಸಕ ಕೆ.ಸಿ. ವೀರೇಂದ್ರ ಅವರನ್ನು ಈ ಹಿಂದೆಯೇ ಪಿಎಂಎಲ್‌ಎ ಕಾಯ್ದೆಯಡಿ ಇಡಿ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ಹೈಪ್ರೊಫೈಲ್ ಹಗರಣದಲ್ಲಿ ಇಡಿ ಅಧಿಕಾರಿಗಳು ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದ್ದು, ಈವರೆಗೆ ಒಟ್ಟು ₹343 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಇನ್ನೂ ಚುರುಕಿನಿಂದ ಸಾಗುತ್ತಿದ್ದು, ಮತ್ತಷ್ಟು ಪ್ರಭಾವಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ