
ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ತಿಲಾಂಜಲಿ ಇಡಲು ಮತ್ತು ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೂರಾರು ಕಿಲೋಮೀಟರ್ ಉದ್ದದ ನೂತನ ರಸ್ತೆ ಜಾಲವನ್ನು ಪ್ರಸ್ತಾಪಿಸಿವೆ. ಮೇಲ್ನೋಟಕ್ಕೆ ಇದು ನಗರದ ವಾಹನ ಸವಾರರಿಗೆ ನಿರಾಳತೆ ತರಲಿದೆ ಎನಿಸಿದರೂ, ಯೋಜನೆಯ ನೀಲನಕ್ಷೆಯು ಗಂಭೀರ ಪರಿಸರ ಹಾನಿಯ ಕಳವಳಕ್ಕೆ ಕಾರಣವಾಗಿದೆ.
ಅಧಿಕಾರಿಗಳು ಬಿಡುಗಡೆ ಮಾಡಿರುವ ಸಂಚಾರ ಜಾಲ ನಕ್ಷೆಗಳನ್ನು ಪರಿಶೀಲಿಸಿದಾಗ, ಪ್ರಸ್ತಾವಿತ ರಸ್ತೆಗಳ ಮಾರ್ಗಗಳು ನೇರವಾಗಿ ಕೆರೆಗಳ ಬಫರ್ ವಲಯಗಳು, ರಾಜಕಾಲುವೆಗಳು ಹಾಗೂ ಪ್ರಮುಖ ಜಲಮೂಲಗಳ ಮೇಲೆಯೇ ಹಾದುಹೋಗುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ
ವಿಶೇಷವಾಗಿ ಇಲ್ಲಿ ನೀಡಲಾಗಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಈ ರಸ್ತೆ ಮಾರ್ಗಗಳನ್ನು ಮಾಡಲು ಯೋಜನೆ ನಿಗದಿಯಾಗಿವೆ. ಮೊದಲನೆಯದಾಗಿ ದೊಡ್ಡನೆಕುಂದಿ, ನಲ್ಲೂರಹಳ್ಳಿ, ಬೇಗೂರು, ಪುಟ್ಟೇನಹಳ್ಳಿ ಮತ್ತು ದೊಡ್ಡಬೊಮ್ಮಸಂದ್ರ ಕೆರೆಗಳು. ಈ ಕೆರೆಗಳ ತೀರ ಹಾಗೂ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಪ್ರಸ್ತಾವನೆಯಿದೆ. ಎರಡನೇಯದಾಗಿ ಬೆಳ್ಳಂದೂರು, ಬಸಾಪುರ ಮತ್ತು ಗಾರ್ವೇಭಾವಿಪಾಳ್ಯ ಕೆರೆಗಳು. ಈ ಬೃಹತ್ ಜಲಮೂಲಗಳ ಸುತ್ತಲೂ ಬಹುಬದಿಯ ರಸ್ತೆಗಳನ್ನು ನಿಗದಿಪಡಿಸಲಾಗಿದೆ.
ಈ ರೀತಿಯ ನಿರ್ಮಾಣ ಕಾಮಗಾರಿಗಳು ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ನೈಸರ್ಗಿಕ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಮಳೆನೀರು ಸರಾಗವಾಗಿ ಹರಿಯಲು ತಡೆ ಉಂಟಾಗಿ, ನಗರದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗುವ ಅಪಾಯವಿದೆ. ಜೊತೆಗೆ, ಇದುವರೆಗೆ ಮಾನವ ಹಸ್ತಕ್ಷೇಪದಿಂದ ದೂರವಿದ್ದ ಪರಿಸರ ವಲಯಗಳನ್ನು ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಮುಕ್ತಗೊಳಿಸಿದಂತಾಗುತ್ತದೆ.
ನಗರದ ನೀಲಿ-ಹಸಿರು (ಕೆರೆ ಮತ್ತು ಉದ್ಯಾನ) ವಲಯಗಳನ್ನು ರಕ್ಷಿಸಬೇಕಾದ ಸರ್ಕಾರಿ ಸಂಸ್ಥೆಗಳೇ ಸ್ವತಃ ಜಿಬಿಎ ವ್ಯಾಪ್ತಿಯ 39 ಕೆರೆಗಳ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಅತ್ಯಂತ ವಿಪರ್ಯಾಸದ ಸಂಗತಿ. ಕೆರೆ ಅಂಗಳದಲ್ಲಿ ಈಗಾಗಲೇ ಆಟದ ಮೈದಾನಗಳು, ಸಾರ್ವಜನಿಕ ಉದ್ಯಾನವನಗಳು ಮತ್ತು ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ತಲೆಎತ್ತಿವೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೆರೆಗಳ ಬಫರ್ ವಲಯದ ಸಂರಕ್ಷಣೆಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ. ಆದರೆ ಹೊಸ ರಸ್ತೆ ಪ್ರಸ್ತಾವನೆಗಳು ಈ ಕಾಯ್ದೆಗಳಿಗೆ ಸವಾಲೆಸೆಯುವಂತಿವೆ. ಇದು ಪರಿಸರ ಸಂರಕ್ಷಣೆಯ ವಿಷಯದಲ್ಲಿ ಸರ್ಕಾರದ ಬದ್ಧತೆಯನ್ನೇ ಪ್ರಶ್ನೆ ಮಾಡುವಂತೆ ಮಾಡಿದೆ.
ಹೊಸ ರಸ್ತೆಗಳನ್ನು ನಿರ್ಮಿಸುವುದರಿಂದ ಸಂಚಾರ ದಟ್ಟಣೆ ತಾತ್ಕಾಲಿಕವಾಗಿ ಕಡಿಮೆಯಾಗಬಹುದು. ಆದರೆ, ದೀರ್ಘಾವಧಿಯಲ್ಲಿ ಇದು ಹೆಚ್ಚು ಖಾಸಗಿ ವಾಹನಗಳು ರಸ್ತೆಗಿಳಿಯಲು ಬೆಂಬಲ ನೀಡಿದಂತೆ ಆಗುತ್ತದೆ. ನಗರದ ದೀರ್ಘಾವಧಿಯ ಸುಸ್ಥಿರ ಸಾರಿಗೆ ಮತ್ತು ಸಂಚಾರ ವ್ಯವಸ್ಥೆಯನ್ನು ರೂಪಿಸುವ ಬೃಹತ್ ನೀಲನಕ್ಷೆ 2020 ರಲ್ಲಿ ರೂಪಿಸಲಾಗಿತ್ತು. ಈ ಸಮಗ್ರ ಚಲನಶೀಲತಾ ಯೋಜನೆ (Comprehensive Mobility Plan-CMP) ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವ ಸ್ಪಷ್ಟ ನೀತಿಯನ್ನು ಹೊಂದಿತ್ತು. ಆದರೆ ಇದರ ಅನುಷ್ಠಾನ ಇನ್ನೂ ಮಂದಗತಿಯಲ್ಲಿದೆ.
ಬೆಂಗಳೂರಿಗೆ ಪ್ರಸ್ತುತ ಅಗತ್ಯವಿರುವುದು ಏನೆಂದರೆ, ವಿಶ್ವಾಸಾರ್ಹ ಮತ್ತು ಹೆಚ್ಚಿನ ಸಂಖ್ಯೆಯ ಬಿಎಂಟಿಸಿ ಬಸ್ ಸೇವೆಗಳು. ನಮ್ಮ ಮೆಟ್ರೋ ಹಾಗೂ ಉಪನಗರ (ಸಬರ್ಬನ್) ರೈಲು ಯೋಜನೆಯ ಶೀಘ್ರ ವಿಸ್ತರಣೆ. ಪಾದಚಾರಿಗಳು ಮತ್ತು ಸೈಕಲ್ ಸವಾರರಿಗೆ ಸುರಕ್ಷಿತ ಪ್ರತ್ಯೇಕ ಪಥಗಳು.
ಪ್ರಸ್ತುತ GBA, BDA, BMLTA (ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ) ಹಾಗೂ DULT (ನಗರ ಭೂ ಸಾರಿಗೆ ನಿರ್ದೇಶನಾಲಯ) ಸಂಸ್ಥೆಗಳು ಪರಸ್ಪರ ಸಮನ್ವಯವಿಲ್ಲದೆ ಪ್ರತ್ಯೇಕವಾಗಿ ಕಾರ್ಯಾಚರಿಸುತ್ತಿವೆ. ಬಿಎಮ್ಎಲ್ಟಿಎ ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ, ನಗರದ ಪ್ರತಿಯೊಂದು ಸಾರಿಗೆ ಯೋಜನೆಯು ಸಿಎಂಪಿಗೆ ಪೂರಕವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ನಗರಕ್ಕೆ ಸರಿಪಡಿಸಲಾಗದ ಹಾನಿಯಾಗುವ ಮುನ್ನವೇ ಸರ್ಕಾರ ಈ ಯೋಜನೆಯ ಮಾರ್ಗಗಳನ್ನು ಮರುಪರಿಶೀಲಿಸಿ, ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಪರಿಸರವಾದಿಗಳು, ಹಸಿರು ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರನ್ನು ಎದುರಿಸಬೇಕಿದೆ. ಅವರಿಗೆ ಉತ್ತರ ನೀಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ