ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಅನುಮೋದನೆ ನೀಡಿ: ಸಚಿವ ಸುನಿಲ್‌ ಕುಮಾರ್‌

By Girish GoudarFirst Published May 11, 2022, 5:25 AM IST
Highlights

*  ಯುನಿಕೋಡ್‌ ಕನ್ಸಾರ್ಟಿಯಂಗೆ ಸಚಿವ ಸುನಿಲ್‌ ಕುಮಾರ್‌ ಪತ್ರ
*  ಕರ್ನಾಟಕದಲ್ಲಿ ಬಹುದೊಡ್ಡ ಪ್ರದೇಶದಲ್ಲಿ ತುಳು ಭಾಷೆ ಜೀವಂತ
*  ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನನ್ನ ಕರ್ತವ್ಯ: ಸುನಿಲ್‌ ಕುಮಾರ್‌ 
 

ಬೆಂಗಳೂರು(ಮೇ.11):  ಕರ್ನಾಟಕ ತುಳು ಅಕಾಡೆಮಿ(Karnataka Tulu Academy) ಸಲ್ಲಿಸಿರುವ ತುಳು ಲಿಪಿಯ ಯುನಿಕೋಡ್‌ ನಕಾಶೆಪಟ್ಟಿಗೆ ಆದಷ್ಟು ಶೀಘ್ರವೇ ಅನುಮೋದನೆ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌(V Sunil Kumar) ಅವರು ಯುನಿಕೋಡ್‌ ಕನ್ಸಾರ್ಟಿಯಂಗೆ ಕೋರಿದ್ದಾರೆ.

ಸೋಮವಾರ ಈ ಕುರಿತು ವಿವರವಾದ ಪತ್ರ ಬರೆದಿರುವ ಅವರು, ಈ ನಕಾಶೆಪಟ್ಟಿಗೆ ಈಗಾಗಲೇ ಕರ್ನಾಟಕ ಸರ್ಕಾರವು(Government of Karnataka) ಅನುಮೋದನೆ ನೀಡಿದೆ. ಅಕಾಡೆಮಿ ಸಲ್ಲಿಸಿರುವ ತುಳು ಲಿಪಿಯ(Tulu Script) ಯೂನಿಕೋಡ್‌(Unicode) ನಕಾಶೆ ಪಟ್ಟಿಯನ್ನು ಅನುಮೋದನೆಗೆ ಪರಿಗಣಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ತುಳು ಅಕಾಡೆಮಿಯು ನಾನಾ ಹಂತಗಳಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ತುಳು ಲಿಪಿಯನ್ನು ಯೂನಿಕೋಡ್‌ ಶಿಷ್ಟತೆ ಅಳವಡಿಸಲು ಅಕಾಡೆಮಿ ತೆಗೆದುಕೊಂಡಿರುವ ಕ್ರಮಗಳನ್ನು ಸ್ವತಃ ಪರಿಶೀಲಿಸಿದ್ದೇನೆ. ತುಳು ಮುಂದಿನ ದಿನಗಳಲ್ಲಿ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ವಿನಂತಿಸಿದ್ದಾರೆ.

ತುಳು ಭಾಷೆಗೆ ಸಾಂವಿಧಾನಿಕ ‌ಮಾನ್ಯತೆ ನೀಡಿ: ತುಳುನಾಡಿನಲ್ಲಿ ಟ್ವಿಟ್ಟರ್ ಅಭಿಯಾನ!

ಹತ್ತು ವರ್ಷಗಳಿಂದ ತುಳು ಲಿಪಿಯನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ತುಳು ಭಾಷಾ(Tulu Language) ಮತ್ತು ಲಿಪಿ ತಜ್ಞರು ಸರ್ವಾನುಮತದಿಂದ ರೂಪಿಸಿರುವ ತುಳು ಲಿಪಿ ಪಟ್ಟಿಯನ್ನು ಅಕಾಡೆಮಿಯು ಅಂಗೀಕರಿಸಿ ಯುನಿಕೋಡ್‌ ನಕಾಶೆಗೆ ಸೇರಿಸಲು ಅನುಮೋದನೆ ನೀಡಿದೆ. 

ಈ ಮೊದಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರು 2021ರ ಜುಲೈ 17ರಂದು ತೆಗೆದುಕೊಂಡಿದ್ದ ನಿರ್ಧಾರವನ್ನು ಉಲ್ಲೇಖಿಸಲು ಇಚ್ಛಿಸುತ್ತೇನೆ. ಯುನಿಕೋಡ್‌ ಕನ್ಸಾರ್ಟಿಯಂ ಅನುಮೋದನೆ ಪಡೆದುಕೊಳ್ಳುವುದೂ ಸೇರಿದಂತೆ ತುಳು ಲಿಪಿಯನ್ನು ಯುನಿಕೋಡ್‌ ಶಿಷ್ಟತೆಗೆ ಅಳವಡಿಸುವ ಕುರಿತು ಅಗತ್ಯಕ್ರಮ ಕೈಗೊಳ್ಳುವಂತೆ ಅಂದು ಸೂಚಿಸಲಾಗಿತ್ತು. ಅದರಂತೆ ತುಳು ಅಕಾಡೆಮಿಯು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಕರ್ನಾಟಕದಲ್ಲಿ(Karnataka) ಬಹುದೊಡ್ಡ ಪ್ರದೇಶದಲ್ಲಿ ತುಳು ಭಾಷೆ ಜೀವಂತವಾಗಿದೆ. ತುಳು ಲಿಪಿಗೆ ಯುನಿಕೋಡ್‌ ಮಾನ್ಯತೆ ಪಡೆದುಕೊಳ್ಳುವುದು ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿ ನನ್ನ ಕರ್ತವ್ಯ ಎಂದು ಪತ್ರದಲ್ಲಿ ಹೇಳಿದ್ದಾರೆ.
 

click me!