ಇಂಧನ ಸಚಿವರು, ಉನ್ನತ ಅಧಿಕಾರಿಗಳು ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸುದೀರ್ಘ ಚರ್ಚೆಯಾಗಿ ದರ ಇಳಿಕೆ ಕುರಿತಂತೆ ನಾಳೆ, ನಾಡಿದ್ದು ನಮಗೆ ನಿರ್ದೇಶನ ಬರಬಹುದು: ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ರೋಷನ್
ಬೆಳಗಾವಿ(ಜೂ.14): ವಿದ್ಯುತ್ ದರ ಹೆಚ್ಚಳದ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಒಂದೆರಡು ದಿನಗಳಲ್ಲಿ ದರ ಕಡಿಮೆ ಆಗುವ ಸಾಧ್ಯತೆ ಕಂಡು ಬರುತ್ತಿದೆ ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ರೋಷನ್ ತಿಳಿಸಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಉದ್ಯಮಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇಂಧನ ಸಚಿವರು, ಉನ್ನತ ಅಧಿಕಾರಿಗಳು ಸಮಸ್ಯೆ ಪರಿಹಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸುದೀರ್ಘ ಚರ್ಚೆಯಾಗಿ ದರ ಇಳಿಕೆ ಕುರಿತಂತೆ ನಾಳೆ, ನಾಡಿದ್ದು ನಮಗೆ ನಿರ್ದೇಶನ ಬರಬಹುದು. ವಿದ್ಯುತ್ ದರ ಪರಿಷ್ಕರಣೆ ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಅಂತಾರಾಷ್ಟ್ರೀಯ ಟ್ರೆಂಡ್ಸ್ ಮೇಲೆ ಆಧಾರಿತವಾಗಿರುತ್ತದೆ. ಕೆಇಆರ್‌ಸಿಯಿಂದ ವಿದ್ಯುತ್ ದರ ಏರಿಕೆ ಆಗಿದೆ. ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಈ ತಿಂಗಳು, ಮುಂದಿನ ತಿಂಗಳು ಮಾತ್ರ ಇರುತ್ತದೆ. ಅದಾದ ಬಳಿಕ ದರ ಕಡಿಮೆ ಆಗುತ್ತಾ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.
ಹೊಸ ಬಾಡಿಗೆದಾರರು, ಹೊಸ ಮನೆಗೆ 58 ಯುನಿಟ್ ಉಚಿತ: ಸಚಿವ ಜಾರ್ಜ್
ಇನ್ನು ಮುಂದೆ ವಿದ್ಯುತ್ ದರ ಸಹ ಪೆಟ್ರೋಲ್ ಬೆಲೆ ತರಹ ಒಂದು ತಿಂಗಳು ಹೆಚ್ಚಾಗಬಹುದು, ಒಂದು ತಿಂಗಳು ಕಡಿಮೆ ಆಗಬಹುದು. ಸರ್ಕಾರಕ್ಕೆ ಹೆಸ್ಕಾಂ ಮನವಿ ಮಾಡುತ್ತಿದ್ದು, ಪರಿಹಾರ ಕಂಡುಕೊಳ್ಳಲು ಮೇಲ್ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಅವರು ಕೊಟ್ಟ ಪರಿಹಾರದ ಕ್ರಮವನ್ನು ಜಾರಿ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.
ದೇಶದ ಎಲ್ಲಾ ರಾಜ್ಯಗಳಲ್ಲಿ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದವರು ಪ್ರತಿ ವರ್ಷ ವಿದ್ಯುತ್ ದರ ನಿಗದಿ ಮಾಡುತ್ತಾರೆ. ವಿದ್ಯುತ್ ಬಿಲ್ ಆನ್‌ಲೈನ್ ಪೇಮೆಂಟ್ ಸಾಫ್ಟ್‌ವೇರ್ ಬದಲಾವಣೆ ಮಾಡುತ್ತಿರುವುದರಿಂದ ಆನ್‌ಲೈನ್ ಪೇಮೆಂಟ್ ಆಗುತ್ತಿಲ್ಲ. ಆದರೆ, ಹೆಸ್ಕಾಂ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ ಪೇಮೆಂಟ್‌ನ್ನು ನಗರ, ಗ್ರಾಮೀಣ ಪ್ರದೇಶದವರು ಬಿಲ್ ಪಾವತಿ ಮಾಡಬಹುದು ಎಂದರು.
ಮಹಾರಾಷ್ಟ್ರದಲ್ಲಿ ವಿದ್ಯುತ್ ದರ ಕಡಿಮೆ ಇದೆ ಎಂಬ ಕೈಗಾರಿಕೋದ್ಯಮಿಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಇರುವ ಫಿಕ್ಸಡ್ ಚಾರ್ಜಸ್, ಎನರ್ಜಿ ಚಾರ್ಜಸ್ ದಕ್ಷಿಣ ಭಾರತದಲ್ಲೇ ಕಡಿಮೆ ಇದೆ. ಸರ್ಕಾರ ಮತ್ತು ಹೆಸ್ಕಾಂ ಲೆಕ್ಕಾಚಾರದಂತೆ ವಿದ್ಯುತ್ ಬಿಲ… ಹಾಕಲಾಗುತ್ತಿದೆ ಎಂದರು.
ವಿದ್ಯುತ್ ದರ ಹೆಚ್ಚಳ ವಿರುದ್ಧ ಕೈಗಾರಿಕೋದ್ಯಮಿಗಳ ಪ್ರತಿಭಟನೆ
ವಿದ್ಯುತ್ ದರ ಹೆಚ್ಚಳ ಖಂಡಿಸಿ ಬೆಳಗಾವಿ ಜಿಲ್ಲಾ ವಾಣಿಜ್ಯ ಉದ್ಯಮಿಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸಣ್ಣ ಕೈಗಾರಿಕೆಗಳ ಮಾಲೀಕರು ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮಂಗಳವಾರ ಪ್ರತಿಭಟನಾ ರಾರಯಲಿ ನಡೆಸಿದರು. ಬಳಿಕ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ದರ ಕಡಿತಕ್ಕೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬೆಳಗಾವಿ ಪೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮ್ ಬಂಡಾರೆ, ಈಗಾಗಲೇ ಎಲ್ಲ ಉದ್ಯಮಗಳು ಸಂಕಷ್ಟದಲ್ಲಿವೆ. ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಮತ್ತಷ್ಟುಸಮಸ್ಯೆ ಆಗಲಿದೆ. ಈಗಾಗಲೇ 30ರಿಂದ 40ರಷ್ಟುಉದ್ದಿಮೆಗಳು ಸ್ಥಳಾಂತರವಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೆಲ್ಲ ಅರಿತು ಸರ್ಕಾರ ಕೂಡಲೇ ವಿದ್ಯುತ್ ದರ ಹೆಚ್ಚಳ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಹಿಂಪಡೆಯದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯಾದ್ಯಂತ ಯದ್ವಾತದ್ವಾ ಕರೆಂಟ್ ಬಿಲ್ ಏರಿಕೆ: ಗ್ರಾಹಕರು ಕಂಗಾಲು..!
ಉದ್ಯಮಿ ರೋಹಣ ಜವಳಿ ಮಾತನಾಡಿ, ವಿದ್ಯುತ್ ದರ ಹೆಚ್ಚಳ ಮಾಡಿರುವುದನ್ನು ಒಂದು ವಾರದೊಳಗೆ ಹಿಂಪಡೆಯದಿದ್ದರೆ ರಾಜ್ಯದಾದ್ಯಂತ ಎಲ್ಲ ಉದ್ಯಮಗಳು ಹಾಗೂ ಕೈಗಾರಿಕೆಗಳನ್ನು ಬಂದ್ ಮಾಡಲಾಗುವುದು. ಅಲ್ಲದೇ ಉಗ್ರ ಹೋರಾಟ ಮಾಡಲಾಗುವುದು. ಸರ್ಕಾರ ಇದ್ಯಾವುದಕ್ಕೂ ಸ್ಪಂದಿಸದಿದ್ದರೆ, ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯುತ್ ದರ ಹೆಚ್ಚಳಕ್ಕೆ ಮಹಿಳೆಯರ ಆಕ್ರೋಶ:
ಇದೇ ವೇಳೆ, ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ಮಹಿಳೆಯರಿಂದಲೂ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಹಿಳೆಯರು, ಪ್ರತಿ ತಿಂಗಳು . 500 ಬರುತ್ತಿದ್ದ ಬಿಲ್ ಈಗ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದ ನಮ್ಮಂತ ಬಡವರು ಜೀವನ ನಡೆಸುವುದು ದುಸ್ತರವಾಗಲಿದೆ ಎಂದು ಅಳಲು ತೋಡಿಕೊಂಡರು. ಯಾವುದೇ ಕಾರಣಕ್ಕೂ ಈ ತಿಂಗಳ ವಿದ್ಯುತ್ ಬಿಲ್‌ನ್ನು ಕಟ್ಟಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.