ಹಿಂದು ಧರ್ಮ ರಕ್ಷಣೆಗಾಗಿ ಕಾಂಗ್ರೆಸ್ ಸೋಲಿಸಿ ಎಂದು ಕರೆಕೊಟ್ಟ ಸಿ.ಟಿ. ರವಿ ವಿರುದ್ಧ ಎಫ್‌ಐಆರ್ ದಾಖಲು!

By Sathish Kumar KHFirst Published Mar 21, 2024, 6:20 PM IST
Highlights

ದುಷ್ಟ ಶಕ್ತಿಗಳ ದಾಳಿಯಿಂದ ನಮ್ಮ ಧರ್ಮವನ್ನು ರಕ್ಷಿಸಲು ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ದಯವಾಗಿ ಸೋಲಿಸಬೇಕು ಎಂದು ಕರೆಕೊಟ್ಟ ಮಾಜಿ ಸಚಿವ ಸಿ.ಟಿ. ರವಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆಯಡಿ  ಎಫ್‌ಐಆರ್ ದಾಖಲಿಸಲಾಗಿದೆ. 

ಚಿಕ್ಕಮಗಳೂರು (ಮಾ.21): ಲೋಕಸಭಾ ಚುನಾವಣೆ ವೇಳೆ ಧಾರ್ಮಿಕ ವೈಷಮ್ಯ ಹರಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಚುನಾವಣಾಧಿಕಾರಿ ಚಿಕ್ಕಮಗಳೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಇನ್ನು ಮಾಜಿ ಸಚಿವ ಸಿ.ಟಿ. ರವಿ ಅವರು ತಮ್ಮ ಸಾಮಾಜಿಕ ಜಾಲತಾಣದ ಟ್ವಿಟರ್ ಅಧಿಕೃತ ಖಾತೆಯಲ್ಲಿ 'ಸಾಗರಗಳ ಆಳವನ್ನು ಅಳೆಯಬಹುದು, ಆದರೆ ಹಿಂದೂಗಳು ಮತ್ತು ಹಿಂದೂ ಧರ್ಮದ ವಿರುದ್ಧ ರಾಹುಲ್ ಗಾಂಧಿಯವರ ದ್ವೇಷವನ್ನು ಎಂದಿಗೂ ಕಂಡುಹಿಡಿಯಲಾಗುವುದಿಲ್ಲ. ಹಿಂದೂ ಧರ್ಮದಲ್ಲಿ ಶಕ್ತಿ ಎಂಬ ಪದವಿದೆ. ನಮ್ಮ ಹೋರಾಟ ಶಕ್ತಿ ವಿರುದ್ಧ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ದುಷ್ಟ ಶಕ್ತಿಗಳ ದಾಳಿಯಿಂದ ನಮ್ಮ ಧರ್ಮವನ್ನು ರಕ್ಷಿಸಲು ಹಿಂದೂಗಳು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ನಿರ್ದಯವಾಗಿ ತೆಗೆದು ಹಾಕಬೇಕು ಎಂದು ತಮ್ಮ ಅಧಿಕೃತ ಟೈಟರ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯಡಿ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

ಕರ್ನಾಟಕ ಬಿಜೆಪಿಯಲ್ಲಿನ ಜಾತಿವಾದ, ಭ್ರಷ್ಟಾಚಾರ, ಕುಟುಂಬವಾದದ ಶುದ್ಧೀಕರಣ ಮಾಡ್ತೇನೆ: ಸಂಸದ ಸದಾನಂದಗೌಡ!

ಸದರಿ ವಿಷಯದ ಬಗ್ಗೆ, ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ವಹಿಸುವಂತೆ ಹಾಗೂ ಕ್ರಮವಹಿಸಿದ ಬಗ್ಗೆ ವರದಿಯನ್ನು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಸಾಮಾಜಿಕ ಜಾಲತಾಣ ವಿಭಾಗದ ಚಿಕ್ಕಮಗಳೂರು ಜಿಲ್ಲೆಯ ಸಹಾಯಕ ನೋಡಲ್ ಅಧಿಕಾರಿ ಜಿಲ್ಲಾ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ನೋಡಲ್ ಅಧಿಕಾರಿಗಳ ಮಾಹಿತಿ ಆಧರಿಸಿ ದೂರು  ದಾಖಲಿಸಲಾಗಿದೆ. 

ಈ ಬಗ್ಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ಕೂಡ ಮಾಜಿ ಸಚಿವ ಸಿ.ಟಿ. ರವಿ ಅವರ ವಿರುದ್ಧ ದೂರು ದಾಖಲಿಸಿದ್ದರ ಬಗ್ಗೆ ಪೋಸ್ಟ್‌ ಹಂಚಿಕೊಳ್ಳಲಾಗಿದೆ.

ನಮಗೆ ಒಂದು ರೈಲ್ವೆ ಟಿಕೆಟ್ ಖರೀದಿಸಲೂ ಹಣವಿಲ್ಲ; ಎಲ್ಲ ಅಕೌಂಟ್‌ ಫ್ರೀಜ್ ಆಗಿವೆ: ರಾಹುಲ್ ಗಾಂಧಿ

ಇನ್ನು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಟ್ವಿಟರ್‌ ಹಾಗೂ ಚಿಕ್ಕಮಗಳೂರಿನಲ್ಲಿ ದಾಖಲಿಸಿದ ದೂರಿನ ಬಗ್ಗೆ ಮಾಹಿತಿ ಹಂಚಿಕೊಂಡಿರಿವ ಮಾಜಿ ಸಚಿವ ಸಿ.ಟಿ. ರವಿ ಅವರು, ಪ್ರೀತಿಯ ಚುನಾವಣಾ ಆಯೋಗವೇ @ECISVEEP ನನ್ನ ವಿರುದ್ಧ ಕಾಂಗ್ರೆಸ್ ದಾಖಲಿಸಿರುವ ಎಫ್‌ಐಆರ್‌ನ ವಿವರಗಳು ನನಗೆ ಸಿಕ್ಕಿವೆ. ಆದರೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಬೇಜವಾಬ್ದಾರಿ ಮತ್ತು ಸಂವೇದನಾರಹಿತ ಕಾಮೆಂಟ್‌ಗಳಿಗೆ ನಾನು ಒಬ್ಬ ಸನಾತನಿಯಾಗಿ ಪ್ರತಿಕ್ರಿಯಿಸಿದ್ದೇನೆ' ಎಂದಿದ್ದಾರೆ.

ಮುಂದುವರೆದು 'ಸನಾತನ ಧರ್ಮವನ್ನು ಅನುಸರಿಸುವವರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆಗಳಿಗಾಗಿ ರಾಹುಲ್ ಗಾಂಧಿಯವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ವಿವರಗಳನ್ನು ನೀವು ಹಂಚಿಕೊಂಡರೆ ನಾನು ತುಂಬಾ ಪ್ರಶಂಸಿಸುತ್ತೇನೆ' ಎಂದು ಚುನಾವಣಾ ಆಯೋಗಕ್ಕೆ ಟ್ಯಾಗ್‌ ಮಾಡಿ ಮನವಿ ಮಾಡಿದ್ದಾರೆ.

click me!