ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ವೀಣಾ ಕಾಶೆಪ್ಪನವರ ಬೆಂಬಲಿಗರು ಸಿಡಿದೆದ್ದಿದ್ದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಳೆ ಬೆಂಬಲಿಗರ ಸಬೆ ಕರೆದಿರುವುದು ಕೂತುಹಲಕ್ಕೆ ಕಾರಣವಾಗಿದೆ.
ಬಾಗಲಕೋಟೆ (ಮಾ.21): ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ಗೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶೆಪ್ಪನವರ್ ನಡುವೆ ನಡೆದ ಭಾರೀ ಜಿದ್ದಾಜಿದ್ದಿಗೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಸಚಿವರ ಪುತ್ರಿ ಸಂಯುಕ್ತ ಪಾಟೀಲ್‌ಗೆ ಬಾಗಲಕೋಟೆ ಟಿಕೆಟ್ ಬಹುತೇಕ ಫಿಕ್ಸ್ ಎನ್ನಲಾಗಿದೆ. ವೀಣಾ ಕಾಶೆಪ್ಪನವರಿಗೆ ಟಿಕೆಟ್ ಕೈಪ್ಪುವ ಸಾಧ್ಯತೆ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಕಡೆಯ ಬೆಂಬಲಿಗರ ನಡುವೆ ಬಿಗ್ ಫೈಟ್ ನಡೆದಿದೆ.
ಈ ಬಾರಿ ಲೋಕಸಭಾ ಚುನಾವಣೆಗೆ ವೀಣಾ ಕಾಶೆಪ್ಪನವರಿಗೆ ಟಿಕೆಟ್ ಸಿಗುತ್ತದೆ ಎಂದೇ ನಂಬಲಾಗಿತ್ತು. ಆದರೆ ರಾಜಕೀಯ ಮೇಲಾಟದಲ್ಲಿ ಸಂಯುಕ್ತ ಪಾಟೀಲ್‌ಗೆ ಟಿಕೆಟ್ ಫಿಕ್ಸ್ ಎನ್ನುವ ಮಾಹಿತಿ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೀಣಾ ಕಾಶೆಪ್ಪನವರ ಬೆಂಬಲಿಗರು ಸಿಡಿದೆದ್ದಿದ್ದಾರೆ. 'ಬಾಗಲಕೋಟೆಗೆ ಹೊಸ ಭರವಸೆ' ಎಂದು ಸಂಯುಕ್ತಾ ಪಾಟೀಲ್ ಬೆಂಬಲಿಗರು ಪೋಸ್ಟ್ ಹಾಕಿದರೆ, ಅದಕ್ಕೆ ವಿರುದ್ಧವಾಗಿ 'ಗೋ ಬ್ಯಾಕ್ ಸಂಯುಕ್ತ' ಎಂದು ವೀಣಾ ಬೆಂಬಲಿಗರು ಕಿಡಿ ಕಾರಿದ್ದಾರೆ.
'ಬರ್ರಿ ಪಾಟೀಲರ ಉಂಡು ಹೋಗ್ರಿ ಬಾಗಲಕೋಟೆ ನಿಮ್ಮಂತೋರಿಗೆ ಬಿಟ್ಟಿ ಬಿದ್ದೈತಿ' ಎಂದು ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್ ಸಿಕ್ಕಿದ್ದಕ್ಕೆ ವ್ಯಂಗ್ಯ ಮಾಡಲಾಗಿದೆ. ಇದೇ ಪೋಸ್ಟ್‌ನಲ್ಲಿ ಅಕ್ಕನ(ವೀಣಾ) ಹನಿ ಹನಿ ಕಣ್ಣೀರಿನ ಶಾಪ ತಟ್ಟದೇ ಬಿಡಲ್ಲ ಈಗಲೂ ಕಾಲಮಿಂಚಿಲ್ಲ ವೀಣಾಗೆ ಟಿಕೆಟ್ ಕೊಡಿ ಬೆಂಬಲಿಗರ ಹಕ್ಕೊತ್ತಾಯ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಂಯುಕ್ತ ಪಾಟೀಲ್ ಬೆಂಬಲಿಗರು, ಹೆದರಿಕೆಗೆ ಮಣಿದು ಟಿಕೆಟ್ ಬದಲಾಯಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇಬ್ಬರ ಬೆಂಬಲಿಗರ ಏಟು-ಎದಿರೇಟಿನ ಮೆಸೇಜ್ ಗಳು.
ಸ್ಕ್ರಿನಿಂಗ್ ಕಮಿಟಿಗೆ ವೀಣಾ ಹೆಸರು ಬಂದಿಲ್ಲ!
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದಿನಿಂದಲೂ ತಯಾರಿ ಮಾಡಿಕೊಂಡಿದ್ದ ವೀಣಾ ಕಾಶೆಪ್ಪನವರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಎಂದೇ ಮಾತಾಡಿಕೊಳ್ಳುತ್ತಿದ್ದರು. ಆದರೆ ಒಳ ಸಂಚು, ರಾಜಕೀಯ ಮೇಲಾಟದಲ್ಲಿ ಸಂಯುಕ್ತ ಪಾಟೀಲ್‌ಗೆ ಟಿಕೆಟ್ ಫಿಕ್ಸ್ ಎಂಬ ಮಾಹಿತಿ ಬರುತ್ತಿದ್ದಂತೆ ಕಣ್ಣೀರಿಟ್ಟ ವೀಣಾ ಕಾಶೆಪ್ಪನವರ್, ಇತ್ತ ಪತ್ನಿ ಕಣ್ಣೀರು ಹಾಕುವುದು ಕಂಡು ಕೆಂಡಾಮಂಡಲರಾದ ವಿಜಯಾನಂದ ಕಾಶೆಪ್ಪನವರ್, ಟಿಕೆಟ್ ಕೈತಪ್ಪುವ ಆತಂಕದ ಹಿನ್ನೆಲೆ ಬುಧವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಸ್ಕ್ರೀನಿಂಗ್ ಕಮಿಟಿಗೆ ವೀಣಾ ಕಾಶೆಪ್ಪನವರ ಹೆಸರೇ ಬಂದಿಲ್ಲ ಎಂದ ಖರ್ಗೆ. ಈ ವಿಚಾರ ತಿಳಿದು ಮತ್ತಷ್ಟು ಕೆರಳಿದ ಕಾಶೆಪ್ಪನವರು, ವೀಣಾಗೆ ಟಿಕೆಟ್ ನೀಡಲು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದಿದ್ದಕ್ಕೆ, "ಯಾರು ಆ ಸಂಯುಕ್ತ ಪಾಟೀಲ್?' ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದ ಕಾಶೆಪ್ಪನವರು. ಇದೀಗ ಇಬ್ಬರ ನಡುವಿನ ಜಿದ್ದಿಜಿದ್ದಿನಲ್ಲಿ ಮೂರನೇಯವರಿಗೆ (ಬಿಜೆಪಿ) ಲಾಭ ಆಗುವದಂತೂ ಖಚಿತ. ಸಂಯುಕ್ತ ಪಾಟೀಲ್ ಗೆ ಟಿಕೆಟ್ ಸಿಕ್ಕಲ್ಲಿ ಕಾಶೆಪ್ಪನವರ ಬೆಂಬಲಿಗರು ಬಿಜೆಪಿಯತ್ತ ಹೊರಳುವ ಸಾಧ್ಯತೆಯೂ ತಳ್ಳಿಹಾಕುವಂತಿಲ್ಲ.
ಟಿಕೆಟ್ ಕೈತಪ್ಪಿದ ಹಿನ್ನೆಲೆ ಬೆಂಬಲಿಗರ ಸಭೆ:
ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಟಿಕೆಟ್ ಕೈತಪ್ಪಿರುವ ಹಿನ್ನೆಲೆ ನಾಳೆ ವೀಣಾ ಕಾಶೆಪ್ಪನವರ ನೇತೃತ್ವದಲ್ಲಿ ಬೆಂಬಲಿಗರು ಮತ್ತು ಅಭಿಮಾನಿಗಳ ಸಭೆ ಕರೆದಿದ್ದಾರೆ. ಬೆಳಗ್ಗೆ 10.30ಕ್ಕೆ ಬಾಗಲಕೋಟೆಯ ಚರಂತಿಮಠ ಕಲ್ಯಾಣಮಂಟಪದಲ್ಲಿ ಆಯೋಜನೆಗೊಂಡಿರುವ ಸಭೆ.
ಬೆಳಿಗ್ಗೆ ೧೦:೩೦ಕ್ಕೆ ಆಯೋಜನೆಯಾಗಿರೋ ಸಭೆ...
ಸಂಯುಕ್ತ ಪಾಟೀಲ್ ಗೆ ಬಹುತೇಕ ಟಿಕೆಟ್ ಪಕ್ಕಾ ಎಂಬ ಹಿನ್ನೆಲೆಯಲ್ಲಿ ತೀವ್ರಗೊಂಡ ಅಸಮಾಧಾನ. ನಿನ್ನೆ ಕಾಂಗ್ರೆಸ್ ಕಚೇರಿಗೆಗೆ ಮುತ್ತಿಗೆಗೆ ಯತ್ನಿಸಿ ಪ್ರತಿಭಟನೆ ನಡೆಸಿದ್ದ ವೀಣಾ ಬೆಂಬಲಿಗರು. ಇದೀಗ ಬೆಂಬಲಿಗರ ಸಭೆ ಕರೆದಿದ್ದು ವೀಣಾ ಕಾಶೆಪ್ಪನವರ ನಡೆ ತೀವ್ರ ಕೂತುಹಲ ಮೂಡಿಸಿದೆ. ನಾಳೆ ಬೆಂಬಲಿಗರ ಮತ್ತು ಅಭಿಮಾನಿಗಳ ಆಶಯದಂತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.