ಖಾಸಗಿ ಶಾಲೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್ ಗ್ಲೌಸ್ ಖರೀದಿ ಮಾಡುವ ವಿಚಾರ | ಪೋಷಕರಿಗೆ ಶಾಲೆಯಲ್ಲೇ ಮಾಸ್ಕ್, ಹ್ಯಾಂಡ್ ಗ್ಲೌಸ್ ಖರೀದಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ | ಈ ಬಗ್ಗೆ ಆದೇಶ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ
ಬೆಂಗಳೂರು (ಜೂ. 09): ಕೊರೊನಾ ಲಾಕ್‌ಡೌನ್ ಮುಗಿದು ಶಾಲೆಗಳನ್ನು ಪುನಾರಂಭಿಸುವ ಬಗ್ಗೆ ಚರ್ಚೆ ಶುರುವಾಗಿದೆ. ಕೊರೋನಾ ಪಾಸಿಟೀವ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳನ್ನು ಸದ್ಯದಲ್ಲೇ ಪ್ರಾರಂಭಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಈ ಮಧ್ಯೆ ಕೆಲವು ಖಾಸಗಿ ಶಾಲೆಗಳು ಪರಿಸ್ಥಿತಿಯ ಲಾಭ ಪಡೆದು, ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಖರೀದಿ ವಿಚಾರದಲ್ಲಿ ದಂಧೆಗಿಳಿದಿವೆ ಎಂಬ ಆರೋಪವ ಕೇಳಿ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರದಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳಿಗೆ ಬಿಸಿ ಮುಟ್ಟಿಸಿದೆ.
ಶಾಲಾ-ಕಾಲೇಜು ಪ್ರಾರಂಭ ಯಾವಾಗ? ದಿನಾಂಕ ಪ್ರಕಟಿಸಿದ ಕೇಂದ್ರ ಸಚಿವ
ಕೆಲ ಶಾಲೆಗಳಲ್ಲಿ ಮಾಸ್ಕ್, ಹ್ಯಾಂಡ್ ಗ್ಲೌಸನ್ನು ಶಾಲೆ ಆಡಳಿತ ಮಂಡಳಿ ತಿಳಿಸಿದ ಖರೀದಿದಾರರಿಂದಲೇ ಖರೀದಿಸುವಂತೆ ಪೋಷಕರ ಮೇಲೆ ಒತ್ತಡ ಹೇರುತ್ತಿರುವ ಆರೋಪ ಕೇಳಿ ಬಂದಿದ್ದು, ಖಾಸಗಿ ಶಾಲೆಗಳು ಪೋಷಕರಿಗೆ ಶಾಲೆಯಲ್ಲೇ ಮಾಸ್ಕ್, ಹ್ಯಾಂಡ್ ಗ್ಲೌಸ್ ಖರೀದಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಒತ್ತಾಯ ಮಾಡಿದ್ರೆ ಅಂತ ಶಾಲೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.