
ಕೊಪ್ಪಳ (ಜ.21): ಸಚಿವ ಸ್ಥಾನ ಪಡೆದ ಮೇಲೆ ಈಡಿಗ ಸಮುದಾಯವನ್ನ ನಿರ್ಲಕ್ಷಿಸಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ವಿರುದ್ಧ ಈಡಿಗ ಸಮುದಾಯ ಈಗ ಸಮರ ಸಾರಿದೆ. ಕೊಪ್ಪಳದ ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮಾಜಿ ಎಂಎಲ್‌ಸಿ ಎಚ್ ಆರ್ ಶ್ರೀನಾಥ್ ಅವರು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ನೇರ ಎಚ್ಚರಿಕೆ ನೀಡಿದ್ದಾರೆ.
'ಈಡಿಗ ಸಮಾಜಕ್ಕೆ ಸಚಿವ ಶಿವರಾಜ್ ತಂಗಡಗಿ ಅವರ ಕೊಡುಗೆ ಶೂನ್ಯ. ಸಮುದಾಯದ ಮತ ಪಡೆದು ಮಂತ್ರಿಯಾದವರು ಈಗ ಸಮಾಜಕ್ಕೇ ಅನ್ಯಾಯ ಮಾಡುತ್ತಿದ್ದಾರೆ. ತಂಗಡಗಿಗೆ ಸಚಿವ ಸ್ಥಾನ ಸಿಗುವಲ್ಲಿ ಶ್ರೀಗಳ ಪಾತ್ರ ಬಹಳ ದೊಡ್ಡದಿದೆ, ಆದರೆ ಮಂತ್ರಿಯಾದ ಮೇಲೆ ಅವರು ಶ್ರೀಗಳನ್ನು ಮತ್ತು ಸಮುದಾಯವನ್ನು ಸಂಪೂರ್ಣವಾಗಿ ಮರೆತಿದ್ದಾರೆ ಎಂದು ಎಚ್ ಆರ್ ಶ್ರೀನಾಥ್ ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿಯಿಂದ ಬೆಂಗಳೂರಿಗೆ ನಡೆಯುತ್ತಿರುವ ಶ್ರೀ ಪ್ರಣವಾನಂದ ಸ್ವಾಮಿಗಳ 700 ಕಿ.ಮೀ ಐತಿಹಾಸಿಕ ಪಾದಯಾತ್ರೆಯು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. 'ಈಗ ಶ್ರೀಗಳು ನಿಮ್ಮ ಕ್ಷೇತ್ರಕ್ಕೆ ಬಂದಿದ್ದಾರೆ, ಅವರನ್ನು ಗೌರವಿಸಿ ಪಾದಯಾತ್ರೆಗೆ ಬೆಂಬಲ ನೀಡಿ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಸಮುದಾಯದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಸಮಾಜ ನಿಮಗೆ ತಕ್ಕ ಪಾಠ ಕಲಿಸಲಿದೆ' ಎಂದು ಶ್ರೀನಾಥ್ ಎಚ್ಚರಿಸಿದ್ದಾರೆ.
ಈಡಿಗ ಸಮುದಾಯದ ಬೇಡಿಕೆಗಳೇನು?
ಈಡಿಗ, ಬಿಲ್ಲವ ಮತ್ತು ನಾಮಧಾರಿ ಸೇರಿದಂತೆ ಹಿಂದುಳಿದ ವರ್ಗಗಳ ಹಿತರಕ್ಷಣೆಗಾಗಿ ಶ್ರೀ ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ:
* ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ₹200 ರಿಂದ ₹500 ಕೋಟಿ ಅನುದಾನ ಬಿಡುಗಡೆ ಮಾಡಬೇಕು.
* ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭವ್ಯ ಪ್ರತಿಮೆ ಸ್ಥಾಪನೆಯಾಗಬೇಕು.
* ಆಂಧ್ರ-ತೆಲಂಗಾಣ ಮಾದರಿಯಲ್ಲಿ ಶುದ್ಧ ಸೇಂದಿ ಇಳಿಸಲು ಹಾಗೂ ಮಾರಾಟ ಮಾಡಲು ಅಧಿಕೃತ ಅನುಮತಿ ನೀಡಬೇಕು.
* ಹೆಂಡದ ಮಾರಯ್ಯನವರ ಜಯಂತಿಯನ್ನು ಸರ್ಕಾರವೇ ಅಧಿಕೃತವಾಗಿ ಆಚರಿಸಬೇಕು.
ಕಲಬುರಗಿಯಿಂದ ಆರಂಭವಾಗಿರುವ ಈ ಪಾದಯಾತ್ರೆಯು ಗಡಿ ಭಾಗದಲ್ಲಿ ಬೃಹತ್ ಬೆಂಬಲ ಪಡೆಯುತ್ತಿದೆ. ಸಮುದಾಯದ ಹಿತರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಸಚಿವರು ಸ್ಪಂದಿಸದಿದ್ದರೆ, ಕಾಂಗ್ರೆಸ್ ಸರ್ಕಾರಕ್ಕೆ ಈಡಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ