ಲಕ್ಷ್ಮೀ ಹೆಬ್ಬಾಳ್ಕರ್ ಮಾಲಿಕತ್ವದ ಸಕ್ಕರೆ ಕಾರ್ಖಾನೆಯ 49.35 ಕೋಟಿ ರು. ಮೊತ್ತದ ಷೇರುಗಳನ್ನು ಎಂಟು ಕೃಷಿ ಸಹಕಾರ ಸಂಘಗಳು ಖರೀದಿಸಿದ್ದ ಸಂಗತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆ ಹಚ್ಚಿದೆ.
ಬೆಂಗಳೂರು [ಅ.13]: ಅಕ್ರಮ ಹಣ ವರ್ಗಾವಣೆ ಸುಳಿಯಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಿಲುಕಿರುವ ಬೆನ್ನಲ್ಲೇ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೂ ಸಂಕಷ್ಟಎದುರಾಗಿದ್ದು, ಅವರ ಮಾಲಿಕತ್ವದ ಸಕ್ಕರೆ ಕಾರ್ಖಾನೆಯ 49.35 ಕೋಟಿ ರು. ಮೊತ್ತದ ಷೇರುಗಳನ್ನು ಎಂಟು ಕೃಷಿ ಸಹಕಾರ ಸಂಘಗಳು ಖರೀದಿಸಿದ್ದ ಸಂಗತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆ ಹಚ್ಚಿದೆ.
ಶಿವಕುಮಾರ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಆರ್ಥಿಕ ವ್ಯವಹಾರವನ್ನು ಐಟಿ ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಗೋಕಾಕ್ ತಾಲೂಕಿನ ಕೃಷಿ ಸಹಕಾರ ಸಂಘಗಳಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು 24.15 ಕೋಟಿ ರು. ಬಡ್ಡಿರಹಿತ ಠೇವಣಿ ಇಟ್ಟು, ಇದಕ್ಕೆ ಪ್ರತಿಫಲವಾಗಿ ಆ ಸಹಕಾರ ಸಂಘಗಳ ಮೂಲಕ ತಮ್ಮ ಹರ್ಷ ಶುಗರ್ ಕಂಪನಿಗೆ ಬಂಡವಾಳ ಪಡೆದುಕೊಂಡಿದ್ದಾರೆ. ಈ ಬಂಡವಾಳದ ಆಧಾರದ ಮೇರೆಗೆ ಶಾಸಕರ ಕಂಪನಿಗೆ ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕ್‌ಗಳು 215 ಕೋಟಿ ರು. ಸಾಲ ನೀಡಿದ್ದವು ಎನ್ನಲಾಗಿದೆ.
undefined
ಸಹಕಾರಿ ಸಂಸ್ಥೆಗಳು ಖಾಸಗಿ ಕಂಪನಿಯಲ್ಲಿ ಬಂಡವಾಳ ಹೂಡಿರುವುದು ಮತ್ತು ಸಾಲ ಮಂಜೂರು ಮಾಡಿರುವ ಪ್ರಕ್ರಿಯೆಯಲ್ಲಿ ಸಹಕಾರ ಕಾಯ್ದೆ ಉಲ್ಲಂಘನೆಯಾಗಿದ್ದು, ರೈತರ ಉಳಿತಾಯದ ಹಣವನ್ನು ಸಕ್ಕರೆ ಕಾರ್ಖಾನೆಯಲ್ಲಿ ತೊಡಗಿಸಿದ್ದ ಸಹಕಾರ ಸಂಘಗಳಿಗೆ ಇ.ಡಿ. ತನಿಖೆಯ ಬಿಸಿ ತಟ್ಟಿದೆ. ಈ ಕಾರಣಕ್ಕಾಗಿಯೇ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರನ್ನು ತನಿಖೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಕೊಟ್ಟಿದ್ದು ಅಲ್ಪ, ಪಡೆದಿದ್ದು ತುಂಬ:
ಬೆಳಗಾವಿ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಎರಡು ವರ್ಷಗಳ ಹಿಂದೆ ‘ಹರ್ಷ ಶುಗರ್ಸ್’ ಹೆಸರಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ್ದಾರೆ. ಈ ಕಂಪನಿ ಸ್ಥಾಪನೆಗೆ ಮೂಲ ಬಂಡವಾಳವಾಗಿ ಕಂಪನಿಯ ನಿರ್ದೇಶಕರಾದ ಲಕ್ಷ್ಮೇ ಸೋದರ ಚನ್ನರಾಜ್ ಹಟ್ಟಿಹೊಳಿ 2.35 ಕೋಟಿ ರು. ಮತ್ತು ಮಹಮ್ಮದ್ ಅಲಿ ಅತ್ತಾರ್ 1.9 ಕೋಟಿ ರು. ಹೂಡಿದ್ದರೆ, ಶಾಸಕಿ ಲಕ್ಷ್ಮೇ ಅವರ ಪಾಲು ಕೇವಲ .52.75 ಲಕ್ಷ ಮಾತ್ರವಾಗಿದೆ. ಈ ಕಂಪನಿಯ ಉಗಮಕ್ಕೆ ಮಾಜಿ ಸಚಿವ ಶಿವಕುಮಾರ್ ಮಹಾಪೋಷಕನ ಪಾತ್ರ ವಹಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ.
ಅದರ ಭಾಗವಾಗಿ ಲಕ್ಷ್ಮೀ ಅವರು ಕಂಪನಿ ಸ್ಥಾಪನೆಗೂ ಕೆಲ ತಿಂಗಳ ಮುನ್ನ ಗೋಕಾಕ್ ತಾಲೂಕಿನ ಎಂಟು ಕೃಷಿ ಸಹಕಾರ ಸಂಘಗಳಲ್ಲಿ ಬಡ್ಡಿರಹಿತ ಠೇವಣಿಯಾಗಿ 24.16 ಕೋಟಿ ರು. ಇಟ್ಟಿದ್ದರು. ಬಳಿಕ ಆ ಸಹಕಾರ ಸಂಘಗಳು ಲಕ್ಷ್ಮೀ ಅವರ ಹರ್ಷ ಶುಗರಲ್ಲಿ ಷೇರು ರೂಪದಲ್ಲಿ 49.35 ಕೋಟಿ ರು. ಬಂಡವಾಳ ತೊಡಗಿಸಿದ್ದವು ಎಂಬ ಕುತೂಹಲಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೆ ಈ ಸಂಘಗಳಲ್ಲಿ ಠೇವಣಿಯನ್ನು ಲಕ್ಷ್ಮೀ ತಾಯಿ ಮತ್ತು ಸೋದರನ ಹೆಸರಿನಲ್ಲಿ ಇಡಲಾಗಿತ್ತು ಎಂದು ಮೂಲಗಳು ಹೇಳಿವೆ.
ಈ ಬಂಡವಾಳ ಸಂಗ್ರಹವಾದ ಬಳಿಕ ಹರ್ಷ ಶುಗರ್ ಸ್ಥಾಪನೆಗೆ ರಾಜ್ಯ ಅಪೆಕ್ಸ್ ಹಾಗೂ ಏಳು ಜಿಲ್ಲಾ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅರ್ಜಿ ಸಲ್ಲಿಸಿದ್ದರು. ಆಗ ಅಧಿಕಾರದಲ್ಲಿದ್ದ ಶಿವಕುಮಾರ್, ತಮ್ಮ ಆಪ್ತ ಶಾಸಕಿಯ ನೆರವಿಗೆ ಬಂದಿದ್ದಾರೆ. ಅಂದು ಪ್ರಭಾವ ಬಳಸಿ ಬ್ಯಾಂಕ್‌ಗಳಲ್ಲಿ ಕಂಪನಿಗೆ ಅವರು ಸಾಲ ಕೊಡಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
8 ಸಹಕಾರ ಸಂಘಗಳಿಂದ ಷೇರು ಖರೀದಿ
ಗೋಕಾಕ ತಾಲೂಕಿನ ಗುಂಜಾಲ್‌ನ ಕೃಷಿ ಪತ್ತಿನ ಸಹಕಾರ ಸಂಘ 5 ಕೋಟಿ ರು, ಕುಂದರಗಿಯ ಪತ್ತಿನ ಸಹಕಾರ ಸಂಘ 6.7 ಕೋಟಿ ರು., ಪಂಜೇನಹಟ್ಟಿಪ್ರಾಥಮಿಕ ಪತ್ತಿನ ಸಹಕಾರ ಸಂಘ 5.94 ಕೋಟಿ ರು., ಗಿಳಿ ಹೊಸೂರು ಸಹಕಾರ ಸಂಘ 4.25 ಕೋಟಿ ರು., ಬೆಂಚಿನಮರಡಿ ಸಹಕಾರ ಸಂಘ 6.98 ಕೋಟಿ ರು., ಲೋಲಸುರ ಸಹಕಾರ ಸಂಘ 7.26 ಕೋಟಿ ರು., ಶಿಸ್ತಿಭಾವಿ ಸಹಕಾರ ಸಂಘ 6.3 ಕೋಟಿ ರು. ಹಾಗೂ ಕೆಸನಹಟ್ಟಿಸಹಕಾರ ಸಂಘ 6.92 ಕೋಟಿ ರು.. ಒಟ್ಟು 49.31 ಕೋಟಿಗಳನ್ನು ಈ ಎಂಟು ಸಹಕಾರ ಸಂಘಗಳು ಷೇರು ರೂಪದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹರ್ಷ ಶುಗರ್ಸ್‌ನಲ್ಲಿ ಹೂಡಿಕೆ ಮಾಡಿದ್ದವು ಎನ್ನಲಾಗಿದೆ.
7 ಬ್ಯಾಂಕ್‌ಗಳಿಂದ 215 ಕೋಟಿ ಸಾಲ
ರಾಜ್ಯ ಅಪೆಕ್ಸ್ ಬ್ಯಾಂಕ್ 50 ಕೋಟಿ ರು., ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕ್ 30 ಕೋಟಿ ರು., ಉತ್ತರ ಕನ್ನಡ ಡಿಸಿಸಿ ಬ್ಯಾಂಕ್ 25 ಕೋಟಿ ರು., ಬಾಗಲಕೋಟೆ ಡಿಸಿಸಿ ಬ್ಯಾಂಕ್ 40 ಕೋಟಿ ರು., ವಿಜಯಪುರ ಡಿಸಿಸಿ ಬ್ಯಾಂಕ್ 25 ಕೋಟಿ ರು., ಬಜ್ಪೆ ವ್ಯವಹಾರ ಸಹಕಾರ ಬ್ಯಾಂಕ್ 20 ಕೋಟಿ ರು. ಹಾಗೂ ತುಮಕೂರು ಡಿಸಿಸಿ ಬ್ಯಾಂಕ್ 25 ಕೋಟಿ ರು.