ಗ್ರಾಮೀಣ ಆಸ್ತಿ ಮಾಲೀಕರೇ ಗಮನಿಸಿ: ದಾಖಲೆ ಇದ್ರೂ, ಇಲ್ಲದಿದ್ರೂ ಇ-ಸ್ವತ್ತು, ನಾಳೆಯಿಂದ ಹೊಸ ವ್ಯವಸ್ಥೆ, 30 ಲಕ್ಷ ಜನರಿಗೆ ಲಾಭ!

Kannadaprabha News   | Kannada Prabha
Published : Nov 01, 2026, 09:48 AM IST
E Swathu from Tomorrow

ಸಾರಾಂಶ

ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ಇಲ್ಲದ ಆಸ್ತಿಗಳಿಗೆ ನವೆಂಬರ್ 2 ರಿಂದ ಇ-ಸ್ವತ್ತು ನೀಡುವ ಪ್ರಕ್ರಿಯೆ ಆರಂಭವಾಗಲಿದೆ. ಕೃಷಿ ಜಮೀನಿನಲ್ಲಿರುವ ಕಟ್ಟಡಗಳಿಗೆ ಬಿ-ಖಾತಾ (ನಮೂನೆ 11ಬಿ) ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಲಾಗಿದೆ.ಇದರ ಪ್ರಯೋಜನಗಳೇನು ತಿಳಿಯಿರಿ.

ಬೆಂಗಳೂರು (ನ.1) ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆಗಳಿಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆ ನ. 2 ರಿಂದ ಆರಂಭಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಗ್ರಾಮೀಣ ಆಸ್ತಿ ಮಾಲೀಕರ ಬಹುದಿನಗಳ ಸಮಸ್ಯೆಗೆ ಮುಕ್ತಿ!

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್‌ ಖಂಡ್ರೆ, ಗ್ರಾಮೀಣ ಆಸ್ತಿ ಮಾಲೀಕರ ಬಹುದಿನಗಳ ಸಮಸ್ಯೆ ಪರಿಹರಿಸಲು ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ಗ್ರಾಪಂಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಇ-ಸ್ವತ್ತು 2 ತಂತ್ರಾಂಶದಲ್ಲೂ ಕೆಲ ಮಾರ್ಪಾಡು ಮಾಡಲಾಗಿದೆ. ಆ ಮೂಲಕ ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇರುವ ಮತ್ತು ದಾಖಲೆಗಳಿಲ್ಲದ ಆಸ್ತಿಗಳಿಗೆ ಇ-ಸ್ವತ್ತು ನೀಡುವ ಪ್ರಕ್ರಿಯೆ ನ. 2ರಿಂದ ಆರಂಭಿಸಲಾಗುತ್ತಿದೆ ಎಂದು ವಿವರಿಸಿದರು.

ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಹಲವು ತಲೆಮಾರುಗಳಿಂದ ವಾಸಿಸುತ್ತಿರುವ 25ರಿಂದ 30 ಲಕ್ಷ ಜನರಿಗೆ ನೂತನ ಕ್ರಮದಿಂದ ಅನುಕೂಲವಾಗಲಿದೆ. ದಾಖಲೆಗಳು ಲಭ್ಯವಿಲ್ಲದ ಗ್ರಾಮಠಾಣಾ ಆಸ್ತಿಗಳಿಗೆ ನೋಂದಾಯಿತ ದಾಖಲೆಗಳಿಂದ ವಿನಾಯಿತಿ ನೀಡಲಾಗಿದ್ದು, 2025ರ ಏಪ್ರಿಲ್‌ 7ರ ಪೂರ್ವದ ವಿದ್ಯುತ್‌ ಬಿಲ್‌ ಆಧಾರದ ಮೇಲೆ ಹಾಗೂ ಸ್ಥಳ ಪರಿಶೀಲನೆ ಮಾಡಿ ಇ-ಸ್ವತ್ತು ನೀಡಲಾಗುವುದು ಎಂದರು.

ಬಿ-ಖಾತಾ ವಿಧಾನ ಸರಳೀಕರಣ:

ನಮೂನೆ 11 ಬಿ ಪಡೆಯುವ ವಿಧಾನ ಸರಳೀಕರಣಗೊಳಿಸಲಾಗಿದೆ. ಗ್ರಾಮೀಣ ಭಾಗದ ಜನ ಯಾವುದೇ ನೋಂದಾಯಿತ ಪತ್ರ ಇಲ್ಲದೇ ತಮ್ಮ ಕೃಷಿ ಜಮೀನಿನಲ್ಲಿ ವಾಸ/ಕೃಷಿ ಉಪಯೋಗಕ್ಕೆ ನಿರ್ಮಿಸಿರುವ ಕಟ್ಟಡಗಳಿಗೆ ಇ-ಸ್ವತ್ತು ನಮೂನೆ 11ಬಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಭೂಮಿಯಲ್ಲಿ ವಸತಿ ಯೋಜನೆ ಅಡಿ ಸೃಜನೆಯಾಗಿರುವ ಕಟ್ಟಡಗಳಿಗೆ ಮತ್ತು ಪಾರಂಪರಿಕವಾಗಿ ಅರಣ್ಯವಾಸಿಗಳು, ಅರಣ್ಯ ಹಕ್ಕು ಕಾಯ್ದೆಯಂತೆ ಹಕ್ಕುಪತ್ರ ಪಡೆದಿದ್ದಲ್ಲಿ ಅಂಥ ಆಸ್ತಿಗಳಿಗೆ ನಮೂನೆ ಪಡೆಯಲು ತಿದ್ದುಪಡಿ ನಿಯಮದಲ್ಲಿ ಅವಕಾಶ ನೀಡಲಾಗಿದೆ ಎಂದು ಈಶ್ವರ್‌ ಖಂಡ್ರೆ ತಿಳಿಸಿದರು.

ಹಿತ್ತಲು, ಮನೆಯಂಗಳ ಸೇರಿ ಒಟ್ಟು 4 ಸಾವಿರ ಚದರ ಅಡಿಯೊಳಗಿನ ನಿವೇಶನ, ಆಸ್ತಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಈ ತಿದ್ದುಪಡಿಯಿಂದ ಗ್ರಾಮೀಣ ಭಾಗದ ಶೇ. 90ಕ್ಕೂ ಹೆಚ್ಚಿನ ಆಸ್ತಿಗಳಿಗೆ ನಮೂನೆ 11ಎ, 11ಬಿ ನೀಡಲು ಅವಕಾಶವಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರ್ನಾಟಕ ರಾಜ್ಯೋತ್ಸವದಲ್ಲಿ ಕನ್ನಡಿಗರ ಹೃದಯ ಗೆದ್ದ ದಿನೇಶ್ ಕಾರ್ತಿಕ್ ಶುಭಾಶಯ..! RCB ಮನೆಮಗನ ಕನ್ನಡ ಪ್ರೀತಿಗೆ ಫ್ಯಾನ್ಸ್‌ ಫಿದಾ!
ಕರ್ನಾಟಕಕ್ಕೆ ಗೊತ್ತೇ ಆಗದೆ ಮಹಾರಾಷ್ಟ್ರದಿಂದ ₹19,000 ಕೋಟಿಯ ಕೃಷ್ಣಾ ನದಿ ತಿರುವು ಯೋಜನೆ; ಎಂ.ಬಿ. ಪಾಟೀಲ ಆಕ್ಷೇಪ