* ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಸಾಫ್ಟ್‌ವೇರ್
* ನಾಗರಿಕರು ಅನುಮತಿ ಕೊಟ್ಟರಷ್ಟೇ ಬಳಕೆ
* 10 ದಿನದಲ್ಲಿ ಆ್ಯಪ್ ಬಿಡುಗಡೆ
ಬೆಂಗಳೂರು(ಡಿ.17): ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು (ಇ-ಆಡಳಿತ) ನಾಗರಿಕರ ದತ್ತಾಂಶ ಸುರಕ್ಷಿತ ಹಂಚಿಕೆ ಮತ್ತು ಪರಿಶೀಲನೆಗೆ ಇ-ಸಹಮತಿ(E Sahamati) ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇಲ್ಲಿ ಸರ್ಕಾರಿ ಮತ್ತು ಉನ್ನತ ಖಾಸಗಿ ಸಂಸ್ಥೆಗಳು ನಾಗರಿಕರ ಅನುಮತಿ ಮೇರೆಗೆ ಅಗತ್ಯವೆನಿಸಿದ ದಾಖಲಾತಿಗಳನ್ನು ಮೂಲ ಇಲಾಖೆಗಳಿಂದಲೇ ಅಧಿಕೃತವಾಗಿ ಪಡೆದುಕೊಳ್ಳಬಹುದು. ಈ ಮೂಲಕ ನಾಗರಿಕರ ವೈಯಕ್ತಿಕ, ಶೈಕ್ಷಣಿಕ, ಕೌಶಲ್ಯ ಕುರಿತ ದತ್ತಾಂಶಗಳು ಒಂದೇ ವೇದಿಕೆಯಡಿ ಲಭ್ಯವಾಗುವ ಜತೆಗೆ ತ್ವರಿತ ಮತ್ತು ಕಾಗದರಹಿತ(Paperless) ಪರಿಶೀಲನೆ ಸಾಧ್ಯವಾಗಲಿದೆ.
ಗುರುವಾರ ಬಹು ಮಹಡಿ ಕಟ್ಟಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಇ-ಆಡಳಿತ ಇಲಾಖೆ(Department of E-Governance) ಅಪರ ಮುಖ್ಯ ಕಾಯದರ್ಶಿ ರಾಜೀವ್ ಚಾವ್ಲಾ(Rajiv Chawla), ಉದ್ಯೋಗಾಕಾಂಕ್ಷಿಗಳು, ಯೋಜನೆಗೆ ಅರ್ಜಿ ಸಲ್ಲಿಸುವವರು ನೀಡುವ ಪ್ರಮಾಣ ಪತ್ರಗಳ, ದಾಖಲಾತಿಗಳ ನೈಜತೆಗಳನ್ನು ಆನ್‌ಲೈನ್ ಮೂಲಕ ಪರಿಶೀಲಿಸಲು ಯಾವುದೇ ವೇದಿಕೆ ಇಲ್ಲ. ಹೀಗಾಗಿಯೇ ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ನಾಗರಿಕರ ದತ್ತಾಂಶ, ದಾಖಲಾತಿಗಳ ಪರಿಶೀಲನೆಗೆ ಮತ್ತು ಉದ್ಯೋಗ ವಿನಿಮಯಕ್ಕೆ ಇ-ಸಹಮತಿ ಎಂಬ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ನಾಗರಿಕರು, ದಾಖಲಾತಿ ಪರಿಶೀಲಿಸುವ ಸಂಸ್ಥೆಗಳು ಹಾಗೂ ದಾಖಲಾತಿ ನೀಡುವ ಸರ್ಕಾರದ ಮೂಲ ಸಂಸ್ಥೆಗಳ ನಡುವೆ ಒಂದೇ ಆನ್‌ಲೈನ್ ವೇದಿಕೆ ಕಲ್ಪಿಸಿ ಸಮನ್ವಯತೆಯಿಂದ ಈ ತಂತ್ರಾಂಶ(Software) ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
ಇನ್ಮುಂದೆ ಪೇಪರ್‌ಲೆಸ್ ಆಡಳಿತ: ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ
ರಾಜ್ಯದ ಎಸ್‌ಎಸ್‌ಎಲ್‌ಸಿ(SSLC), ಪಿಯುಸಿ ಪರೀಕ್ಷಾ ಮಂಡಳಿ(Pu Board), 60ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿಂದ(Universities) ವಿದ್ಯಾರ್ಥಿಗಳ(Students) ದತ್ತಾಂಶ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ವಿವಿಧ ಇಲಾಖೆ, ಅಂಗ ಸಂಸ್ಥೆಗಳಿಂದಲೂ ನಾಗರಿಕರ ದತ್ತಾಂಶಗಳನ್ನು ಪಡೆದುಕೊಳ್ಳಲಾಗುತ್ತದೆ. ಸರ್ಕಾರಿ ಅಥವಾ ಉನ್ನತ ಖಾಸಗಿ ಸಂಸ್ಥೆಗಳು ಇ-ಆಡಳಿತ ಇಲಾಖೆಯೊಂದಿಗೆ ನಿಗದಿತ ಹಣ ಪಾವತಿಸಿ ನೋಂದಣಿ ಮಾಡಿಕೊಂಡು ತಮ್ಮ ಅಭ್ಯರ್ಥಿಗಳ ಅನುಮತಿ ಮೇರೆಗೆ ಅವರ ದತ್ತಾಂಶವನ್ನು ಅಧಿಕೃತ ಇಲಾಖೆ/ಸಂಸ್ಥೆಯಿಂದಲೇ ಕ್ಷಣ ಮಾತ್ರದಲ್ಲಿ ಪಡೆದು ಪರಿಶೀಲನೆ ಮಾಡಿಕೊಳ್ಳಬಹುದು. ಆಸಕ್ತ ಖಾಸಗಿ ಸಂಸ್ಥೆಗಳು ಇ-ಸಹಮತಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು ಎಂದು ಇದೇ ವೇಳೆ ಆಹ್ವಾನಿಸಿದರು.
ಸಾರ್ವಜನಿಕರ ದತ್ತಾಂಶ ಸುರಕ್ಷತೆಗೆ ಆದ್ಯತೆ ನೀಡಿದ್ದು, ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಸಾರ್ವಜನಿಕರು ತಮ್ಮ ದತ್ತಾಂಶದ ಮಾಲಿಕರಾಗಿದ್ದು, ಇಚ್ಛೆಪಟ್ಟರೆ ಮಾತ್ರ ದತ್ತಾಂಶ ವಿನಿಮಯ ಮಾಡಿಕೊಳ್ಳಬಹುದು. ಇಲಾಖೆಯಿಂದಲೇ ನೇರವಾಗಿ ಮಾಹಿತಿ ಲಭ್ಯವಿರುವುದರಿಂದ ಇ-ಆಡಳಿತ ಇಲಾಖೆಯಿಂದ ಅಥವಾ ತಂತ್ರಾಂಶದಿಂದ ಸಾರ್ವಜನಿಕರ ಮಾಹಿತಿ ಸೋರಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
10 ದಿನದಲ್ಲಿ ಆ್ಯಪ್ ಬಿಡುಗಡೆ
ತಂತ್ರಾಂಶ ಸಂಪೂರ್ಣ ಸಿದ್ಧವಾಗಿದ್ದು, ದತ್ತಾಂಶ ಗೌಪ್ಯತಾ ನಿಯಮದಡಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ದತ್ತಾಂಶ ಬೇಕಿರುವ ಸಂಸ್ಥೆಗಳ ನೋಂದಣಿಗೆ ಅರ್ಜಿ ಆಹ್ವಾನಿಸಿದ್ದೇವೆ. ಮುಂದಿನ ಹತ್ತು ದಿನಗಳಲ್ಲಿ ಮುಖ್ಯಮಂತ್ರಿಗಳು(Chief Minister) ಮೊಬೈಲ್ ಆ್ಯಪ್(Mobile App) ಬಿಡುಗಡೆ ಮಾಡಲಿದ್ದಾರೆ. ಇ-ಸಹಮತಿ ಯೋಜನೆ ಉತ್ತಮವಾಗಿದ್ದು, ದೇಶಾದ್ಯಂತ ಎಲ್ಲಾ ರಾಜ್ಯಗಳಿಗೂ ವಿಸ್ತರಿಸುವಂತೆ ಕೇಂದ್ರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಸೂಚಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಅಪರ ಮುಖ್ಯ ಕಾಯದರ್ಶಿ ತಿಳಿಸಿದರು.
Paperless Government: Dubai ವಿಶ್ವದ ಮೊದಲ ಕಾಗದರಹಿತ ಸರ್ಕಾರ : ಯುವರಾಜ ಶೇಖ್ ಹಮದ್!
ಕಾರ್ಯನಿರ್ವಹಣೆ ಹೇಗೆ?
ಮೊಬೈಲ್ ಆ್ಯಪ್ ಸ್ಟೋರ್ ಅಥವಾ ಇ ಆಡಳಿತ ಇಲಾಖೆಯ ವೆಬ್‌ಸೈಟ್‌ನಲ್ಲಿ ಈ ತಂತ್ರಾಂಶವಿರಲಿದೆ. ಸಾರ್ವಜನಿಕರು ಆಧಾರ್‌ಕಾರ್ಡ್(Aadhar Card) ನೀಡಿ ನೋಂದಣಿ(Registration0 ಮಾಡಿಕೊಳ್ಳಬೇಕು. ನೋಂದಣಿಯಾದ ಕೂಡಲೆ ಸರ್ಕಾರಿ ಇಲಾಖೆಗಳಿಂದ ಅವರಿಗೆ ಸಂಬಂಧಿಸಿದ ಅಧಿಕೃತ ದತ್ತಾಂಶ (ಎಸ್‌ಎಸ್‌ಎಲ್, ಪಿಯುಸಿ, ಪದವಿ ಪ್ರಮಾಣ ಪತ್ರಗಳು, ವಾಹನ ಚಾಲನ ಪರವಾಗಿ ಇತ್ಯಾದಿ) ಲಭ್ಯವಾಗುತ್ತದೆ. ಆದರೆ, ಅಭ್ಯರ್ಥಿಯ ಅನುಮತಿ ಇಲ್ಲದೆ ಇತರರಿಗೆ ದತ್ತಾಂಶ ಪಡೆಯಲು ಅವಕಾಶವಿರುವುದಿಲ್ಲ. ಆ್ಯಪ್‌ಗೆ ನೋಂದಾಯಿಸಿಕೊಂಡ ಖಾಸಗಿ ಅಥವಾ ಸರ್ಕಾರಿ ಉದ್ಯೋಗ ಸಂಸ್ಥೆಗಳು ತಮಗೆ ಬೇಕಾದ ಅಭ್ಯರ್ಥಿಗೆ ಮನವಿ (ರಿಕ್ವೆಸ್ಟ್) ಸಲ್ಲಿಸಿ ಆ ಬಳಿಕ ಅಭ್ಯರ್ಥಿಯು ಅನುಮತಿ ನೀಡಿದ ಬಳಿಕ ದತ್ತಾಂಶ ಪಡೆಯಬಹುದು. ಇನ್ನು ಅಭ್ಯರ್ಥಿಗೆ ಅಗತ್ಯವಿರುವ ದತ್ತಾಂಶಗಳನ್ನು ಮಾತ್ರ ವಿಂಗಡಿಸಿ ನೀಡುವ ನೀಡುವ, ಅನಗತ್ಯವಾದುದನ್ನು ಮರೆಮಾಚುವ ಸೌಲಭ್ಯವಿದೆ.
ಏನಿದರ ಉಪಯೋಗ?
- ಉದ್ಯೋಗ ಅಥವಾ ಸರ್ಕಾರಿ ಸೌಲಭ್ಯ ಕೋರಿ ಜನರು ಅರ್ಜಿ ಸಲ್ಲಿಸುತ್ತಾರೆ
- ಅವರು ಸಲ್ಲಿಸುವ ದಾಖಲೆಯ ನೈಜತೆ ಪರಿಶೀಲನೆಗೆ ಸದ್ಯ ವ್ಯವಸ್ಥೆ ಇಲ್ಲ
- ಆನ್‌ಲೈನ್ ಮೂಲಕವೇ ಈ ದಾಖಲೆಗಳ ಪರಿಶೀಲನೆಗೆ ತಂತ್ರಾಂಶ ಅಭಿವೃದ್ಧಿ
- ನಾಗರಿಕರು, ದಾಖಲೆ ಪರಿಶೀಲಿಸುವ- ನೀಡುವ ಸಂಸ್ಥೆಗಳ ವೇದಿಕೆ ಇದು
- ಎಸ್ಸೆಸ್ಸೆಲ್ಸಿ, ಪಿಯು ಮಂಡಳಿ, 60 ವಿವಿಗಳಿಂದ ಈಗಾಗಲೇ ದತ್ತಾಂಶ ಸಂಗ್ರಹ
- ನಾಗರಿಕರು ತಮ್ಮ ದತ್ತಾಂಶ ಹಂಚಿಕೊಳ್ಳಲು ಅನುಮತಿ ನೀಡುವುದು ಕಡ್ಡಾಯ